ಬುಧವಾರ, ಡಿಸೆಂಬರ್ 2, 2020
16 °C
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಕ್ರಮಕ್ಕೆ ಅಧ್ಯಕ್ಷೆ ಚನ್ಮಮ್ಮ ಸೂಚನೆ

ಉಳ್ಳವರಿಗೂ ಅಂತ್ಯೋದಯ ಕಾರ್ಡ್‌: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕಡು ಬಡವರಿಗೆ ನೀಡುವ ಅಂತ್ಯೋದಯ ಕಾರ್ಡ್ ಅನ್ನು ಉಳ್ಳವರಿಗೆ ನೀಡಿರುವ ಬಗ್ಗೆ, ನಗರದ ಮಿನಿ ವಿಧಾನಸೌಧದಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ ಇಲಾಖೆಯ ಅಧಿಕಾರಿ ಎ.ಎ. ಕತ್ತಿ ಇಲಾಖೆ ವತಿಯಿಂದ ವಿತರಿಸಿರುವ ಕಾರ್ಡ್‌ಗಳ ಬಗ್ಗೆ ಸಭೆಗೆ ತಿಳಿಸಿದರು. ಆಗ ಅಧ್ಯಕ್ಷೆ ಚನ್ನಮ್ಮ ಗೋರ್ಲ ಅವರು, ‘ನಮ್ಮ ಊರಿನಲ್ಲಿರುವ ಆಸ್ತಿವಂತರ ಬಳಿಯೂ ಅಂತ್ಯೋದಯ ಕಾರ್ಡ್‌ಗಳಿವೆ. ಬಡವರ ಬದಲು ಸಿರಿವಂತರಿಗೂ ಕಾರ್ಡ್ ಕೊಟ್ಟರೆ, ಸರ್ಕಾರದ ಸೌಲಭ್ಯ ನಿಜವಾದ ಫಲಾನುಭವಿಗಳನ್ನು ತಲುಪುವುದು ಹೇಗೆ?’ ಎಂದು ಪ್ರಶ್ನಿಸಿದರು.

ಅವರ ಮಾತಿಗೆ ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ ಸೇರಿದಂತೆ, ಇತರ ಸದಸ್ಯರು ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಕಾರ್ಡ್‌ ವಿತರಣೆಯಲ್ಲಿ ಲೋಪವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ತಾಲ್ಲೂಕಿನಲ್ಲಿ ಒಟ್ಟು 3,890 ಅಂತ್ಯೋದಯ ಕಾರ್ಡ್, 31,550 ಬಿಪಿಎಲ್, 3,277 ಎಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ’ ಎಂದರು.

ಪರಿಹಾರ ವಿಳಂಬಕ್ಕೆ ಬೇಸರ

ಬೆಳೆ ಹಾನಿ ಸಮೀಕ್ಷೆ ನಡೆದು ಎರಡು ತಿಂಗಳುಗಳಾದರೂ ರೈತರಿಗೆ ಪರಿಹಾರ ಸಿಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಎ., ‘ಸಮೀಕ್ಷೆಯ ವಿವರಗಳು ಕೇಂದ್ರಿಕೃತ ವ್ಯವಸ್ಥೆಯಲ್ಲಿ ದಾಖಲಾಗಿದೆ. ಪರಿಹಾರ ಬೆಂಗಳೂರಿನಿಂದಲೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಯಾಗಲಿದೆ’ ಎಂದರು.

‘ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸುವ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವರಿಗೆ ಶೇ 90 ಹಾಗೂ ಸಾಮಾನ್ಯ ವರ್ಗದವರಿಗೆ ಶೇ 50 ಸಬ್ಸಿಡಿ ಸಿಗಲಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ತಾಡಪತ್ರಿಗೆ ಹೆಚ್ಚಿನ ಬೇಡಿಕೆ ಇದ್ದು, ಮತ್ತಷ್ಟು ತರಿಸಿ ವಿತರಿಸಲಾಗುವುದು’ ಎಂದು ಹೇಳಿದರು.

ನಡಾವಳಿ ತೋರಿಸಲು ಸೂಚನೆ

ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ದೀಪಾ ಜಾವೂರ, ‘2020–21ನೇ ಸಾಲಿನ ಅಕ್ಟೋಬರ್ ಅಂತ್ಯಕ್ಕೆ ಭಾಗ್ಯಲಕ್ಷ್ಮಿ ಯೋಜನೆಯಡಿ 290 ಅರ್ಜಿಗಳಿಗೆ ಆನ್‌ಲೈನ್ ಮೂಲಕ, ಮಂಜೂರಾತಿ ನೀಡಿ ಎಲ್‌ಐಸಿಗೆ ಕಳಿಸಲಾಗಿದೆ. ಮಾತೃ ವಂದನಾ ಯೋಜನೆಯಡಿ 1,187 ಅರ್ಜಿಗಳನ್ನು ಸ್ವೀಕರಿಸಿ ಮಂಜೂರಾತಿಗಾಗಿ ಸಲ್ಲಿಸಲಾಗಿದೆ’ ಎಂದು ಸಭೆಗೆ ತಿಳಿಸಿದರು.

ಆಗ ನೂಲ್ವಿ ಸದಸ್ಯ ಪರ್ವೇಜ್ ಬ್ಯಾಹಟ್ಟಿ, ‘ನೂಲ್ವಿಯಲ್ಲಿ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಯಾವಾಗ ಹೊಸ ಕಟ್ಟಡ ನಿರ್ಮಿಸುತ್ತೀರಿ?’ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಾ, ‘ಕಟ್ಟಡ ನಿರ್ಮಾಣಕ್ಕೆ ₹16 ಲಕ್ಷ ಅಗತ್ಯವಿದ್ದು, ಅನುದಾನ ಬಂದಾಗ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದರು.

ಒಪ್ಪಿಗೆ ಪಡೆಯದೆ ₹9 ಲಕ್ಷ ಬಿಲ್ ಪಾಸ್

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಒಪ್ಪಿಗೆ ಇಲ್ಲದೆ, ಹಾಸ್ಟೆಲ್ ನಿರ್ವಹಣೆಗಾಗಿ ₹9 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾಸ್ ಆಗಿದೆ. ಹಿಂದಿನ ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಅವಧಿಯಲ್ಲಿ ಒಳಗೊಳಗೆ ನಡೆದಿರುವ ಬಿಲ್ ಪಾಸ್‌ ಕುರಿತು ಲೆಕ್ಕಪತ್ರಗಳನ್ನು ನೀಡಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಂದಾ ಹಣಬರಟ್ಟಿ ಅವರಿಗೆ ಸದಸ್ಯರು ಆಗ್ರಹಿಸಿದರು.

‘ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಲೆಕ್ಕಪತ್ರ ತೋರಿಸಿ. ಅಲ್ಲದೆ, ಮುಂದೆ ಯಾವುದೇ ಬಿಲ್ ಪಾಸ್ ಮಾಡುವುದಕ್ಕೆ ಮುಂಚೆ ಸಮಿತಿ ಗಮನಕ್ಕೆ ತರಬೇಕು’ ಎಂದು ಇಒ ಗಂಗಾಧರ ಕಂದಕೂರ ನಂದಾ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು