ಶನಿವಾರ, ಸೆಪ್ಟೆಂಬರ್ 18, 2021
24 °C

ಅಭಿವೃದ್ಧಿಯ ಗತಿ ಬದಲಿಸಿದ ಬಿಜೆಪಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಬಿಜೆಪಿ ಸರ್ಕಾರವು ಅಭಿವೃದ್ಧಿಯ ಗತಿಯನ್ನು ಬದಲಿಸಿದೆ. ತಳಮಟ್ಟದಲ್ಲಿ ಇರುವವರನ್ನೂ ತಲುಪುವಂತಹ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ’ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ದಿ ಹಾಗೂ ಉದ್ದಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ನೀಡಿರುವ ಆಡಳಿತವು ಮುಂದಿನ 25 ವರ್ಷಗಳವರೆಗೆ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಕಾಂಗ್ರೆಸ್‌ನ ಅರವತ್ತು ವರ್ಷಗಳ ಆಡಳಿತಾವಧಿಯ ಭ್ರಷ್ಟಾಚಾರ, ಒಡೆದಾಳುವ ನೀತಿ ಹಾಗೂ ಶೋಷಣೆಗೆ ಬಿಜೆಪಿ ಪೂರ್ಣ ವಿರಾಮ ಹಾಕಿದೆ’ ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ‘ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯದಂತೆ, ಪ್ರಧಾನಿ ಮೋದಿ ಅವರು ತಮ್ಮ ಸಂಪುಟದಲ್ಲಿ ಎಲ್ಲಾ ಜಾತಿ ವರ್ಗದವರಿಗೆ ಆದ್ಯತೆ ನೀಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 24X7 ನೀರು ಯೋಜನೆ, ಜಲಜೀವನ್, ಸ್ಮಾರ್ಟ್ ಸಿಟಿ, ಸಿಆರ್‌ಎಫ್ ರಸ್ತೆ ಸೇರಿದಂತೆ ಹಲವು ಯೋಜನೆಗಳು ಅಭಿವೃದ್ಧಿಯ ಗತಿಯನ್ನು ಬದಲಿಸಿವೆ’ ಎಂದರು.

ಶಾಸಕ ಜಗದೀಶ ಶೆಟ್ಟರ್, ‘ಕಾಂಗ್ರೆಸ್ ಪಕ್ಷ ಬೀದಿಗೆ ಬಿದ್ದಿದೆ. ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡದೆ, ಅನಗತ್ಯ ವಿಷಯಗಳ ಬಗ್ಗೆ ಗದ್ದಲ ಎಬ್ಬಿಸಿ ಅಧಿವೇಶನಕ್ಕೆ ಅಡ್ಡಿಪಡಿಸಿವೆ. ಆ ಮೂಲಕ ತಾವು ಎಷ್ಟು ದುರ್ಬಲ ಎಂದು ತೋರಿಸಿಕೊಂಡಿವೆ. ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಕಾಂಗ್ರೆಸ್‌ನವರ ಟೀಕೆಯು, ಅವರ ಅಧಃಪತನಕ್ಕೆ ಕಾರಣವಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಭಾಷಣ ಮುಗಿದ ತಕ್ಷಣ ಶೆಟ್ಟರ್ ಅವರು, ತುರ್ತು ಕೆಲಸವಿರುವುದಾಗಿ ಹೇಳಿ ವೇದಿಕೆಯಿಂದ ನಿರ್ಗಮಿಸಿದರು.

ಸನ್ಮಾನ: ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಹಸಬಿ, ಆರೋಗ್ಯಾಧಿಕಾರಿ ಭಾರತಿ, ಆಶಾ ಕಾರ್ಯಕರ್ತೆ ಶಬಾನಾ ಮಳಗಿ, ಹೆಡ್ ಕಾನ್ಸ್‌ಟೇಬಲ್ ಸತೀಶ್ ಹಾಗೂ ಪೌರ ಕಾರ್ಮಿಕರಾದ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.

ಐಟಿ–ಬಿಟಿ ಆರಂಭಕ್ಕೆ ಮನವಿ: ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ಸಾಫ್ಟ್‌ವೇರ್ ಎಂಜಿನಿರ್‌ಗಳ ನಿಯೋವು, ಅವಳಿನಗರದಲ್ಲಿ ಐಟಿ–ಬಿಟಿ ಕಂಪನಿಗಳನ್ನು ಆರಂಭಿಸಬೇಕು. ಈ ಭಾಗದವರು ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇಲ್ಲಿ ಕಂಪನಿಗಳು ಆರಂಭವಾದರೆ, ಸ್ಥಳೀಯವಾಗಿಯೇ ಕೆಲಸ ಸಿಗಲಿದೆ ಎಂದು ಮನವಿ ಮಾಡಿತು.

ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖಂಡರಾದ ಲಿಂಗರಾಜ ಪಾಟೀಲ, ಸುಧಾ ಜಯ ರುದ್ರೇಶ್, ಕೇಶವಪ್ರಸಾದ್, ಬಸವರಾಜ ಕುಂದಗೋಳಮಠ, ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ ಇದ್ದರು.

ಪಾಲಿಕೆ ಚುಕ್ಕಾಣಿ ಹಿಡಿಯಲು ಕರೆ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖಂಡರು, ಈ ಬಾರಿಯೂ ಪಕ್ಷವು ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಜಗದೀಶ ಶೆಟ್ಟರ್, ‘60ರ ದಶಕದಿಂದಲೂ ಹುಬ್ಬಳ್ಳಿ ಬಿಜೆಪಿಯ ಭದ್ರನೆಲೆಯಾಗಿದೆ. ಈದ್ಗಾ ಸೇರಿದಂತೆ ಹಲವು ಹೋರಾಟಗಳ ಮೂಲಕ ಪಕ್ಷವನ್ನು ಬಲಪಡಿಸಲಾಗಿದೆ. ಕಾರ್ಯಕರ್ತರ ಉತ್ಸಾಹ ನೋಡಿದರೆ, ಈ ಬಾರಿಯೂ ಪಾಲಿಕೆಯು ಬಿಜೆಪಿ ಕೈವಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಕೂಡ ಅದಕ್ಕೆ ದನಿಗೂಡಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ‘60ರ ದಶಕದಲ್ಲಿ ಇಲ್ಲಿನ ಸ್ಥಿತಿ ಹೇಗಿತ್ತು ಎಂಬ ಲೆಕ್ಕಕ್ಕಿಂತ, 2021ರಲ್ಲಿ ಏನು ಮಾಡ್ತಿರಿ ಎಂಬುದು ಮುಖ್ಯ. ಪಾಲಿಕೆಯಲ್ಲಿ ಮತ್ತೊಮ್ಮೆ ನಮ್ಮ ಬಾವುಟ ಹಾರಿಸಿ, ಪಕ್ಷದ ಸಾಮರ್ಥ್ಯ ಏನು ಎಂದು ತೋರಿಸಬೇಕು’ ಎಂದು ಕರೆ ನೀಡಿದರು.

ಸಿದ್ದಾರೂಢ ಮಠದಲ್ಲಿ ಪೂಜೆ: ಬೆಳಿಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್ ಮಠದ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು. ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಠದ ಟ್ರಸ್ಟ್ ಕಮಿಟಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ, ಮುಖಂಡರಾದ ರಂಗಾಬದ್ದಿ, ಗೋಪಾಲ ಬದ್ದಿ ಮುಂತಾದವರು ಇದ್ದರು. 

ಹೆಗ್ಗೇರಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಸಚಿವರು, ಗ್ರಾಹಕರಿಗೆ ಅಕ್ಕಿ ವಿತರಿಸಿದರು. ಅಲ್ಲಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ, ಕೋವಿಡ್ ಲಸಿಕೆ ಅಭಿಯಾನದ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಕೆಲಸ ಕಾಯಂ ಆಗಿಲ್ಲ ಮತ್ತು ಕೋವಿಡ್ ಭತ್ಯೆ ಬಂದಿಲ್ಲ ಎಂದು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರು, ಸಚಿವರ ಬಳಿ ಅಳಲು ತೋಡಿಕೊಂಡರು‌. ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯ ಮುಖಂಡರಿಗೆ ಸಚಿವರು ಸೂಚಿಸಿದರು.

ಕೋವಿಡ್ ನಿಯಮ ಲೆಕ್ಕಕ್ಕಿಲ್ಲ: ಸಿದ್ಧಾರೂಢ ಮಠ, ಹೆಗ್ಗೇರಿಯ ನ್ಯಾಯ ಬೆಲೆ ಅಂಗಡಿ ಹಾಗೂ ಆಸ್ಪತ್ರೆ ಭೇಟಿಯಲ್ಲಿ ಕೋವಿಡ್ ನಿಯಮ ಲೆಕ್ಕಿಸದೆ ಜನ ಗುಂಪುಗೂಡಿದ್ದರು. ಸ್ಥಳೀಯ ಕಾರ್ಯಕರ್ತರು ಸಚಿವರೊಂದಿಗೆ ಫೊಟೊ ತೆಗೆಸಿಕೊಳ್ಳಲು ಮುಗಿಬಿದ್ದರು‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು