ಮಂಗಳವಾರ, ಡಿಸೆಂಬರ್ 7, 2021
24 °C

ಸಿದ್ದರಾಮಯ್ಯ ಅವರದು ʼಸಾಬ್ರು ಕಾ ಸಾಥ್ ಸಾಬ್ರು ಕಾ ವಿಕಾಸ್ʼ: ಕಟೀಲ್‌ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೆ, ಸಾಬ್ರಕಾ ಸಾತ್‌ ಸಾಬ್ರಕಾ ವಿಕಾಸ್‌ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ವ್ಯಂಗ್ಯವಾಡಿದರು.

ನಗರದ ಶ್ರೀನಿವಾಸ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್‌ ಚುನಾವಣೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಉಪಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಉಂಟಾಗಿದೆ. ಬಹುಸಂಖ್ಯಾತರ ಮತಗಳು ತಮಗೆ ದೊರೆಯದು ಎಂದು ಸಿದ್ದರಾಮಯ್ಯ ಅವರಿಗೆ ಪಕ್ಕಾ ಆಗಿದೆ. ಅದಕ್ಕಾಗಿ ತಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯಗೆ ತಾನು ಯಾವಾಗ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ತವಕ. ಆದರೆ, ಅದಕ್ಕೆ ಡಿ.ಕೆ. ಶಿವಕುಮಾರ ಪೈಪೋಟಿ ನೀಡುತ್ತಿದ್ದಾರೆ. ಈ ಜೋಡೆತ್ತು ಈಗ ಒಂದೊಂದು ದಿಕ್ಕಿನತ್ತ ಸಾಗುತ್ತಿದ್ದು, ಒಳಜಗಳ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್‌ ಎರಡು ಹೋಳಾಗಲಿದೆ’ ಎಂದು ಭವಿಷ್ಯ ನುಡಿದರು.

‘ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ಆರಂಭವಾಗಿದೆ. ಹೇಗಾದರೂ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬೇಕು ಎಂದು ಎರಡೂ ಪಕ್ಷಗಳು ಆರ್‌ಎಸ್‌ಎಸ್‌ಗೆ ಬಯ್ಯುವ ಕೆಲಸ ಮಾಡುತ್ತಿವೆ. ಆ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಅವರು ಮುಂದಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಭೌತಿಕವಾಗಿ ಕಾಂಗ್ರೆಸ್‌ ದಿವಾಳಿ’: ‘ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ ಇಬ್ಬರೂ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಅವರಲ್ಲಿರುವ ಒಂದು ಗುಂಪು ರಾಹುಲ್‌ ಗಾಂಧಿ ರಾಷ್ಟ್ರೀಯ ಅಧ್ಯಕ್ಷ ಆಗಬೇಕು ಎಂದರೆ, ಮತ್ತೊಂದು ಗುಂಪು ಸೋನಿಯಾ ಗಾಂಧಿ ಆಗಬೇಕು ಎನ್ನುತ್ತಿದೆ. ಸ್ವಾತಂತ್ರ್ಯಪೂರ್ವದ ಪಕ್ಷ ಇದೀಗ ವೈಚಾರಿಕವಾಗಿ, ಭೌತಿಕವಾಗಿ ದಿವಾಳಿಯಾಗಿದೆ’ ಎಂದ ನಳೀನ್‌, ‘ರಾಹುಲ್‌ ಗಾಂಧಿ ಡ್ರಗ್‌ ವ್ಯಸನಿ ಮತ್ತು ಡ್ರಗ್‌ ಪೆಡ್ಲರ್‌ ಎಂದು ಕೆಲವು ಮಾಧ್ಯಗಳು ವರದಿ ಮಾಡಿವೆ. ಇಂಥವರು ಹೇಗೆ ರಾಷ್ಟ್ರ ಮುನ್ನಡೆಸಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯೇ’: ‘ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಎಸ್‌ಸಿಯಿಂದ ಗುಮಾಸ್ತನವರೆಗೂ ಕುಟುಂಬದವರನ್ನೇ ನೇಮಿಸಿದ್ದರು. ಜೀವನ ಪೂರ್ತಿ ಅಪ್ಪ, ಮಕ್ಕಳು ಕುಟುಂಬ ರಾಜಕಾರಣವನ್ನೇ ಮಾಡುತ್ತ ಬಂದಿದ್ದಾರೆ. ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಅದಕ್ಕಾಗಿಯೇ ಅವರು ಆರ್‌ಎಸ್‌ಎಸ್‌ಗೆ ಬಯ್ಯುತ್ತಿರುವುದು. ಆರ್‌ಎಸ್‌ಎಸ್‌ ಶಾಖೆಗೆ ಬರಲು ಈಗಾಗಲೇ ಅವರಿಗೆ ಕರೆ ನೀಡಿದ್ದೇನೆ. ಅಲ್ಲಿ ಏನೇನು ಕಲಿಸುತ್ತಾರೆ ಎಂದು ಅವರೇ ತಿಳಿಯಲಿ’ ಎಂದು ನಳೀನ್ ಕುಮಾರ ಕಟೀಲ್ ಹೇಳಿದರು..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು