ಹುಬ್ಬಳ್ಳಿ: ಪ್ರಾಚಾರ್ಯ ವೃತ್ತಿಗೆ ಬೈ, ಕೃಷಿಗೆ ಜೈ

ಹುಬ್ಬಳ್ಳಿ: ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಡಾ. ಪ್ರಕಾಶ ಹುಬ್ಬಳ್ಳಿ ತಮ್ಮ ವೃತ್ತಿಗೆ ವಿದಾಯ ಹೇಳಿ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ತಾವು ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಬಿ.ವಿ.ಬಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ, ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಅವರು ಒಂದು ವರ್ಷದ ಹಿಂದೆ ಕೃಷಿಯತ್ತ ಒಲವು ತೋರಿದರು. ಅವರ ಪತ್ನಿ ಕುಸುಮಾ ಹುಬ್ಬಳ್ಳಿ ಸಾವಯವ ಕೃಷಿಯಲ್ಲಿ ಹೊಂದಿದ್ದ ಆಸಕ್ತಿಯಿಂದ ಪ್ರಭಾವಿತರಾದರು. ಈ ದಂಪತಿ ಕಲಘಟಗಿ ತಾಲ್ಲೂಕಿನ ಹಿಂಡಸಗೇರಿ ಗ್ರಾಮದ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮೂಲಕ ತರಕಾರಿ ಬೆಳೆಯುವ ಬೇಸಾಯ ಆರಂಭಿಸಿದರು.
ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಹುಬ್ಬಳ್ಳಿ ನಗರದ ನಿವಾಸಿಗಳಿಂದ ಆನ್‌ಲೈನ್ ಮೂಲಕ ಆರ್ಡರ್ ತಗೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. 40 ಬಗೆಯ ದೇಶಿ ಮತ್ತು 15 ಬಗೆಯ ವಿದೇಶಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ನಾಟಿ ಮಾಡುವುದರಿಂದ ಹಿಡಿದು ಕಟಾವು ಮಾಡುವ ತನಕ ಬೆಳೆಯ ಸಂರಕ್ಷಣೆಯನ್ನು ಸಾವಯವ ವಿಧಾನದ ಮೂಲಕವೇ ನಿರ್ವಹಣೆ ಮಾಡುತ್ತಿರುವುದು ವಿಶೇಷ.
ಬೆಳೆಗಳ ಸುರಕ್ಷತೆಗೆ ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಬೇವಿನ ಎಣ್ಣೆ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ, ಕೀಟಗಳ ನಿರ್ವಹಣೆಗೆ ಸ್ಟಿಕಿ ಟ್ರ್ಯಾಪ್, ಲೈಟ್ ಟ್ರಾಪ್‌ಗಳನ್ನು ಬಳಸುತ್ತಿದ್ದಾರೆ. ಚೆಂಡು ಹೂವು ಬೆಳೆದು ಗ್ರಾಹಕರ ಮನೆ ಬಾಗಿಲಿಗೆ ‘ನೇಚರ್ ಫಸ್ಟ್ ಫಾರ್ಮ್’ ಮೂಲಕ ಸರಬರಾಜು ಮಾಡುತ್ತಿದ್ದಾರೆ.
ಈ ಕುರಿತು ’ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರಕಾಶ ‘ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಮಹಾರಾಷ್ಟ್ರದಲ್ಲಿದ್ದೆ. ಆಗ ನನ್ನ ಕೆಲಸದ ಬಗ್ಗೆ ತೃಪ್ತಿ ಇರಲಿಲ್ಲ. ಹೀಗಾಗಿ ಒಂದು ವರ್ಷದ ಹಿಂದೆ ಕೃಷಿಯಲ್ಲಿ ತೊಡಗಿಕೊಂಡೆ. ವರ್ಷಪೂರ್ತಿ ತರಕಾರಿ ಬೆಳೆಯುತ್ತೇವೆ. ಪಂಚತಾರಾ ಹೋಟೆಲ್‌ಗಳಲ್ಲಿ ಬಳಸುವ ವಿದೇಶಿ ಪದಾರ್ಥಗಳ ಬೆಳೆಗಳನ್ನೂ ಬೆಳೆಯುತ್ತಿದ್ದೇವೆ. ಸಾವಯವ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಮಾರ್ಗದರ್ಶನ ಕೂಡ ಮಾಡುತ್ತೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.