ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಹುಡುಕಾಟ

Last Updated 3 ಡಿಸೆಂಬರ್ 2021, 6:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿರಿದಾದ ಕೊಠಡಿಗಳು, ಮಂದ ಬೆಳಕು, ಒಂದೇ ಕೊಠಡಿಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಂಚದ ವ್ಯವಸ್ಥೆ ಇಲ್ಲದೆ ನೆಲದ ಮೇಲೆ ಮಲಗುವ ಮಕ್ಕಳು... ಇವಿಷ್ಟು ಕಂಡು ಬಂದಿದ್ದು ಧಾರವಾಡದ ಸಪ್ತಾಪುರದ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಬಾಡಿಗೆ ಕಟ್ಟಡದಲ್ಲಿ.

2020–21ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೆಚ್ಚುವರಿಯಾಗಿ ಬಾಡಿಗೆ ಕಟ್ಟಡಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಬೇಕಾದ ವ್ಯವಸ್ಥೆ ಹಾಗೂ ಹಾಲಿ ವಿದ್ಯಾರ್ಥಿ ನಿಲಯದ ಸುಧಾರಣೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ.

ಸಪ್ತಾಪುರ ನಂ.1 ಮತ್ತು ನಂ.2 ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಕಟ್ಟಡಗಳನ್ನು ಪಡೆದು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಪ್ತಾಪುರ ನಂ.1 ವಿದ್ಯಾರ್ಥಿ ನಿಲಯದಲ್ಲಿ 115 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಅವಕಾಶ ಇದೆ. ಈ ಬಾರಿ 160 ಹಾಗೂ ಕಳೆದ ಬಾರಿಯ 208 ವಿದ್ಯಾರ್ಥಿಗಳು ಸೇರಿ ಒಟ್ಟು 368 ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ, ಹೆಚ್ಚುವರಿಯಾಗಿ ಬಾಡಿಗೆ ಕಟ್ಟಡ ತೆಗೆದುಕೊಳ್ಳಲಾಗಿದೆ. ಆದರೆ, ಬಾಡಿಗೆ ಕಟ್ಟಡದಲ್ಲಿ ಇನ್ನಷ್ಟೇ ಮೂಲಸೌಲಭ್ಯ ಕಲ್ಪಿಸಬೇಕಿದೆ. ಸಣ್ಣ ಕೊಠಡಿಗಳಲ್ಲಿ 20ರಿಂದ 25 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದೆ. ಊಟ ಮತ್ತು ಕುಡಿಯುವ ನೀರನ್ನು ವಿದ್ಯಾರ್ಥಿಗಳುಸಪ್ತಾಪುರ ನಂ.2 ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕಟ್ಟಡದಿಂದಲೇ ತರಬೇಕಾದ ಪರಿಸ್ಥಿತಿ ಇದೆ.

‘ಧಾರವಾಡದಲ್ಲಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 2,711 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 1,906 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ 805 ವಿದ್ಯಾರ್ಥಿಗಳು ದಾಖಲೆ ತರುವುದು ಬಾಕಿ ಉಳಿದಿದೆ’ ಎಂದು ಸಮಾಜಕಲ್ಯಾಣ ಇಲಾಖೆ ಧಾರವಾಡ ಜಿಲ್ಲಾ ಜಂಟಿ ನಿರ್ದೇಶಕ ಡಾ. ಎನ್‌.ಆರ್‌. ಪುರುಷೋತ್ತಮ ತಿಳಿಸಿದರು.

‘ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಮೂರು ಕಟ್ಟಡಗಳನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. ತ್ವರಿತವಾಗಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಕಟ್ಟಡಗಳ ಅವಶ್ಯಕತೆ:ಧಾರವಾಡದ ಸಪ್ತಾಪುರ ನಂ.4 ವಿದ್ಯಾರ್ಥಿ ನಿಲಯ, ಬಸವನಗರ ನಂ.5, ಸೈದಾಪುರಹಾಗೂ ಮಾಳಮಡ್ಡಿ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚು ಅರ್ಜಿ ಸಲ್ಲಿಕೆ ಆಗಿದ್ದು, ಬಾಡಿಗೆ ಕಟ್ಟಡ ಹುಡುಕಲಾಗುತ್ತಿದೆ ಎಂದು ಅವರು ತಿಳಿಸಿದರು.

2,589 ಜನರ ವಿದ್ಯಾರ್ಥಿ ವೇತನ ಬಾಕಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೆಟ್ರಿಕ್‌ ನಂತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಹಲವು ಕಾರಣಗಳಿಂದ ಸಕಾಲದಲ್ಲಿ ವಿದ್ಯಾರ್ಥಿಗಳನ್ನು ತಲುಪುತ್ತಿಲ್ಲ.

ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಧಾರವಾಡ ಜಿಲ್ಲೆಯಲ್ಲಿ 9,303 ಅರ್ಜಿಗಳು ಸಲ್ಲಿಕೆ ಆಗಿದ್ದು, 6,714 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆ. 2,589 ವಿದ್ಯಾರ್ಥಿಗಳಿಗೆ ಮಂಜೂರಾಗಬೇಕಿದೆ.

ತಾಂತ್ರಿಕ ಸಮಸ್ಯೆ ಕಾರಣ: ‘ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಯನ್ನು ಅವರ ಖಾತೆಯೊಂದಿಗೆ ಜೋಡಿಸದೆ ಇರುವುದು ಹಾಗೂ ಕಾಲೇಜಿಗೆ ದಾಖಲಾಗಿರುವ ದೃಢೀಕರಣ ಮಾಹಿತಿ ನೀಡದ ಕಾರಣ ಕೆಲವರ ವಿದ್ಯಾರ್ಥಿ ವೇತನ ಬಾಕಿ ಇದೆ. ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ’ ಎಂದು ಎನ್‌.ಆರ್‌. ಪುರುಷೋತ್ತಮ ತಿಳಿಸಿದರು.

ಪ.ಜಾ, ಪ.ಪಂ ವಿದ್ಯಾರ್ಥಿ ವೇತನ ವಿವರ

ತಾಲ್ಲೂಕು;ಅರ್ಜಿ ಸಲ್ಲಿಕೆ;ಮಂಜೂರಾತಿ

ಧಾರವಾಡ;5,366;2,395

ಹುಬ್ಬಳ್ಳಿ;3,306;2,412

ಕಲಘಟಗಿ;218;216

ಕುಂದಗೋಳ;166;159

ನವಲಗುಂದ;247;244

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT