ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಿನಲ್ಲಿ ವೈನ್‌ ದ್ರಾಕ್ಷಿ‌ ಕೃಷಿ

ಹಾಸನದ ಬಾಳ್ಳುಪೇಟೆಯಲ್ಲಿ ಪ್ರಾಯೋಗಿಕ ಬೆಳೆ ಬೆಳೆದ ಪುಣೆಯ ಉದ್ಯಮಿ
Last Updated 6 ಮಾರ್ಚ್ 2021, 14:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾಸನ ಮಲೆನಾಡು ಮತ್ತು ಬಯಲುಸೀಮೆ ಮಿಶ್ರಿತ ಪ್ರದೇಶ. ಈ ಜಿಲ್ಲೆಯ ವಾಯುಗುಣ ಆಹ್ಲಾದಕರವಾಗಿರುತ್ತದೆ. ಹಾಗಾಗಿಯೇ ಇದು ‘ಬಡವರ ಊಟಿ’ ಎಂದು ಚಿರಪರಿಚಿತ. ಕಾಫಿ ಬೆಳೆಯನ್ನು ಕೂಡ ಇಲ್ಲಿ ಸಮೃದ್ಧವಾಗಿ ಬೆಳೆಯಲಾಗುತ್ತದೆ. ಇಂಥ ಭೂಮಿಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದ್ರಾಕ್ಷಿ ಕೃಷಿ ಮಾಡಲಾಗಿದೆ.

ಮಹಾರಾಷ್ಟ್ರದ ಪುಣೆಯ ಉದ್ಯಮಿಯೊಬ್ಬರು ಹಾಸನದ ಬಾಳ್ಳುಪೇಟೆಯಿಂದ 4 ಕಿಲೊ ಮೀಟರ್ ದೂರದ ಅಬಾನಾ ಗ್ರಾಮದಲ್ಲಿರುವ ತಮ್ಮ 6 ಎಕರೆ ಜಮೀನಿನ ಪೈಕಿ 2 ಎಕರೆಯಲ್ಲಿ ದ್ರಾಕ್ಷಿ ಕೃಷಿ ಮಾಡಿ‌ ಯಶಸ್ವಿಯಾಗಿದ್ದಾರೆ.

ಇದೇನು ಮಾಮೂಲಿ‌ ದ್ರಾಕ್ಷಿಯಲ್ಲ. ವೈನ್ ಉತ್ಪಾದನೆಗೆ ಬೇಕಾಗುವ ವೈನ್ ದ್ರಾಕ್ಷಿ. ಕೆಂಪು ವೈನ್‌ಗೆ ಬೇಕಾಗುವ ಸಿರಾಜ್, ಟೆಂಪರ್ ಲಿಲ್ಲೊ ತಳಿಗಳನ್ನು ಹಾಗೂ ಬಿಳಿ ವೈನ್‌ಗೆ ಬೇಕಾಗುವ ಸೆವಿನಿಯೊ ಬ್ಲಾ, ವಿಯೊನಿರ್ ತಳಿಗಳನ್ನು ಬೆಳೆದಿದ್ದಾರೆ. 2019ರ ಫೆಬ್ರುವರಿಯಲ್ಲಿ ಸಸಿ ನೆಡಲಾಯಿತು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಬೆಳೆಗೆ ಅಗತ್ಯವಾದ ರಾಸಾಯನಿಕ ಗೊಬ್ಬರಗಳನ್ನು ನೀಡಲಾಗಿದೆ. ಜತೆಗೆ 6 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಬಳಸಲಾಗಿದೆ. ಪ್ರತಿ ಎಕರೆಗೆ ಅಂದಾಜು ₹ 4 ಲಕ್ಷ ಖರ್ಚು ಮಾಡಲಾಗಿದೆ’ ಎನ್ನುತ್ತಾರೆ ಉದ್ಯಮಿ‌ ದೀಪಕ್ ಮೆಹ್ರಾ.

ಪೂರಕ ವಾತಾವರಣ: ದ್ರಾಕ್ಷಿ ಬೆಳೆಗೆ ಬೇಕಾಗುವಂಥ ಮಣ್ಣಿನ ಸತ್ವಇಲ್ಲಿದೆ. ಹಾಗಾಗಿ ಗುಣಮಟ್ಟದ ದ್ರಾಕ್ಷಿ ಬಂದಿದೆ. ಉತ್ತರ ಕರ್ನಾಟಕ‌ ಭಾಗದ ಜಿಲ್ಲೆಗಳಲ್ಲಿ ಬೆಳೆಯುವ ವೈನ್ ದ್ರಾಕ್ಷಿಗೆ ಹೋಲಿಸಿದರೆ ಇಲ್ಲಿ ಬೆಳೆದ ಬೆಳೆ ಕೈ ಸೇರಲು ಹೆಚ್ಚುವರಿಯಾಗಿ 10 ದಿನಗಳು ಬೇಕಾಗುತ್ತವೆ. ಕಾರಣ ಬಿಸಿಲಿನ ಪ್ರಮಾಣ ಹೆಚ್ಚಿರುವುದಿಲ್ಲ. ಬೆಳೆಯು ಹೆಚ್ಚು ಬಿಸಿಲು ಉಂಡಷ್ಟು ದ್ರಾಕ್ಷಿ ರುಚಿ, ಬಣ್ಣ ಹೆಚ್ಚಾಗುತ್ತದೆ. ಇಳುವರಿಯೂ ಅಧಿಕವಾಗುತ್ತದೆ. ಕೆಂಪು ವೈನ್ ದ್ರಾಕ್ಷಿಗೆ ಸಾಕಷ್ಟು ಬಿಸಿಲು ದೊರೆತಿದ್ದು, ಬಣ್ಣ, ರುಚಿ ಚೆನ್ನಾಗಿ ಬಂದಿದೆ ಎಂದು ವೈನ್‌ ದ್ರಾಕ್ಷಿ ಬೆಳೆಯಲು ಮಾರ್ಗದರ್ಶನ ನೀಡಿದ ದ್ರಾಕ್ಷಿ ಬೇಸಾಯ ಸಲಹೆಗಾರ ಡಾ. ವೀರನಗೌಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡುತ್ತಾರೆ.

ಇದೇ ಮೊದಲು: ‘ಮಲೆನಾಡಿನ ಭಾಗದಲ್ಲಿ ಪ್ರಾಯೋಗಿಕವಾಗಿ ವೈನ್ ದ್ರಾಕ್ಷಿ ಬೆಳೆದಿರುವುದು ಇದೇ ಮೊದಲು. ಬೆಳೆಯು ಉತ್ತಮವಾಗಿ ಬಂದಿರುವುದು ಹರ್ಷ ತಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ಬೆಳೆಯನ್ನು ಮುಂದುವರಿಸುವ ಇಂಗಿತವನ್ನು ಮೆಹ್ರಾ ಅವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

***

ಮೊದಲ ಬಾರಿ ವೈನ್‌ ದ್ರಾಕ್ಷಿ ಬೆಳೆದಿದ್ದು, ಮುಂದಿನ ವರ್ಷವೂ ಇದನ್ನೇ ಬೆಳೆಯುವ ಯೋಚನೆ ಇದೆ.

-ಮೊಹಾಕ್ ಮೆಹ್ರಾ, ದೀಪಕ್ ಮೆಹ್ರಾ ಅವರ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT