ಶುಕ್ರವಾರ, ಜನವರಿ 24, 2020
16 °C

ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸ್‌: ಜೋಶಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್‌ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಕೇಶ್ವಾಪುರದ ಹಳೇ ಬಾದಾಮಿ ನಗರದಿಂದ ಭುವನೇಶ್ವರಿ ನಗರದ ವರೆಗೆ ಸಿಆರ್‌ಎಫ್‌ ಅನುದಾನಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರತ್ವ(ತಿದ್ದುಪಡಿ) ಕಾಯ್ದೆಯಲ್ಲಿ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವ ಉದ್ದೇಶವೇ ಇಲ್ಲ. ದೇಶದ ಮೂಲ ನಿವಾಸಿಗಳು ಈಗಾಗಲೇ ಪೌರತ್ವ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕಾಯ್ದೆಯಲ್ಲಿ ಏನಿದೆ ಎನ್ನುವುದು ಕಾಂಗ್ರೆಸ್‌ ಮುಖಂಡರಿಗೂ ತಿಳಿದಿದೆ. ಆದರೂ, ಮುಸ್ಲಿಂ ಸಮುದಾಯದವರನ್ನು ಪ್ರೇರೇಪಿಸಿ, ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಿಸಲು ₹360 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲಾಗಿದೆ. ಇದು ಅಂತಿಮ ಹಂತದಲ್ಲಿದ್ದು, ಮುಂಬರುವ ಐದಾರು ತಿಂಗಳಲ್ಲಿ ಟೆಂಡರ್‌ ಕರೆದು, ಕಾರ್ಯಾದೇಶ ನೀಡಲಾಗುವುದು ಎಂದರು.

ಹುಬ್ಬಳ್ಳಿಯಿಂದ ದೆಹಲಿಗೆ ವಾರಕ್ಕೆ ಮೂರು ದಿನ ವಿಮಾನ ಸೌಲಭ್ಯವಿದೆ. ಅದನ್ನು ವಾರಕ್ಕೆ ಏಳು ದಿನ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಐದು ತಾಸಿನಲ್ಲಿ ರೈಲು ಮೂಲಕ ತಲುಪುವ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಹಳೇ ಮತ್ತು ಹೊಸ ಬಾದಾಮಿ ನಗರ, ಹೇಮಂತನಗರ, ಮಧುರಾ ಎಸ್ಟೇಟ್‌ ಕಾಲೊನಿಯ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂಬರು ಐದಾರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಹುಬ್ಬಳ್ಳಿ–ಧಾರವಾಡ ಮಹಾನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿಆರ್‌ಎಫ್‌ ಅಡಿ ₹460 ಕೋಟಿ ಅನುದಾನ ನೀಡಿದೆ. ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಕೆಲವು ರಸ್ತೆಗಳ ಟೆಂಡರ್‌ ಕರೆದು, ಗುತ್ತಿಗೆ ನೀಡದೆ ಬಿಟ್ಟಿತ್ತು. ಈಗ ಎಲ್ಲ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದು, ದೂಳು ಮುಕ್ತ ನಗರವಾಗಲಿದೆ ಎಂದರು.

ಬಾಲಭವನ ಉದ್ಯಾನದ ಅಧ್ಯಕ್ಷ ಜಿ.ಎಚ್‌. ಗಂಜಿ, ಮಲ್ಲಿಕಾರ್ಜುನ ಸಾವುಕಾರ, ಎಚ್‌.ಆರ್‌.ನಾಗರಾಜ, ಆದರ್ಶ ಉಪ್ಪಿನ, ಸಂತೋಷ ಚವ್ಹಾಣ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು