ಮಂಗಳವಾರ, ಜೂನ್ 2, 2020
27 °C

ಹುಬ್ಬಳ್ಳಿ: ಪೊಲೀಸರ ಮೇಲೆ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್‌ಡೌನ್‌ ಉಲ್ಲಂಘಿಸಿ, ನಗರದ ಅರಳಿಕಟ್ಟಿ ಕಾಲೊನಿಯ ಮಸೀದಿಯಲ್ಲಿ ಪ್ರಾರ್ಥನೆಗೆ ಮುಂದಾದವರನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ.

ಕಲ್ಲೇಟು ಬಿದ್ದ ಐವರು ಪೊಲೀಸರನ್ನು ಹಾಗೂ ಪೊಲೀಸ್‌ ಲಾಠಿ ಏಟು ಬಿದ್ದು, ತಲೆಗೆ ಪೆಟ್ಟಾಗಿರುವ ನೂರ್‌ಜಹಾನ್‌ ನದಾಫ್‌ ಎಂಬ ಮಹಿಳೆಯನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.

‘ಕರ್ಫ್ಯೂ ಉಲ್ಲಂಘಿಸಿ ಮುಸ್ಲಿಮರು ಪ್ರಾರ್ಥನೆಗಾಗಿ ಗುಂಪಿನಲ್ಲಿ ಹೋಗುತ್ತಿದ್ದರು. ಸ್ಥಳಕ್ಕೆ ತೆರಳಿದ ಎಎಸ್‌ಐ ಮಲ್ಲಪ್ಪ ಕಾಳೆ ಹಾಗೂ ಸಿಬ್ಬಂದಿ, ‘ಪ್ರಾರ್ಥನೆಗೆ ಅವಕಾಶವಿಲ್ಲ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗುಂಪಾಗಿ ನಿಲ್ಲಬಾರದು’ ಎಂದು ತಡೆದಾಗ ‘ಪೊಲೀಸರು ಏನು ಮಾಡುತ್ತಾರೆ ನೋಡಿಯೇ ಬಿಡೋಣ’ ಎಂದು ಇತರರಿಗೆ ಪ್ರಚೋದಿಸಿ, ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಲ್ಲು, ಬಡಿಗೆ, ಇಟ್ಟಿಗೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ’‘ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

‘ಕಾಲೊನಿ ನಿವಾಸಿಗಳಿಗೆ ಬುದ್ಧಿ ಹೇಳಲು ಬಂದ ಅಂಜುಮನ್‌ ಸಂಸ್ಥೆಯ ಅಲ್ತಾಫ್‌ ಹಳ್ಳೂರು, ಮಹ್ಮದ್‌ ಯೂಸೂಫ್‌ ಖೈರಾತಿ ಅವರ ಮೇಲೂ ಕಲ್ಲು ತೂರಿದ್ದಾರೆ’ ಎಂದು ಎಸಿಪಿ ಎಂ. ಮಲ್ಲಾಪುರಿ ‘ಪ್ರಜಾವಾಣಿ’ಗೆ ತಿಳಿಸಿದರು.

21 ಜನರು ವಶಕ್ಕೆ: ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಬಲ್ಲಾಹುಣ್ಸಿಯಲ್ಲಿ ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 21 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

12 ಜನರ ಬಂಧನ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಹುನಗುಂದ ಹಾಗೂ ವೀರಾಪುರ ಗ್ರಾಮಗಳ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 12 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಒಟ್ಟು 15 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಬೀದರ್‌ ಜಿಲ್ಲೆಯ ಕಮಲನಗರದ ಖುರೇಷಿ ಬಡಾವಣೆಯಲ್ಲಿ ಒಂದೇ ಸ್ಥಳದಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದ 24 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

*
ಪೊಲೀಸರು ಇದ್ದಕ್ಕಿದ್ದಂತೆ ಬಂದು ಎಲ್ಲರ ಮೇಲೆ ಮೇಲೆ ಲಾಠಿ ಬೀಸಲು ಆರಂಭಿಸಿದರು.
-ದಾದಾಪೀರ್‌ ಮಹ್ಮದ್‌, ಸ್ಥಳೀಯ ನಿವಾಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು