ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆ ಸಂಗ್ರಹಕ್ಕೆ ಪಾಲಿಕೆ ಸದಸ್ಯರು ಕೈಜೋಡಿಸಿ

ತೆರಿಗೆ ಸಂಗ್ರಹ, ಆದಾಯ ಕ್ರೋಡೀಕರಣ ಸಭೆ: ಶಾಸಕ ಅರವಿಂದ ಬೆಲ್ಲದ ಸಲಹೆ
Published : 28 ಸೆಪ್ಟೆಂಬರ್ 2024, 15:33 IST
Last Updated : 28 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಇಲ್ಲಿಯ ಹು-ಧಾ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ತೆರಿಗೆ ಸಂಗ್ರಹ ಹಾಗೂ ಆದಾಯ ಕ್ರೋಡೀಕರಣದ ಕುರಿತು ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಶನಿವಾರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಯಿತು.

ಅವಳಿ ನಗರದಲ್ಲಿ ತೆರಿಗೆ ಸಂಗ್ರಹ ಹೆಚ್ಚಳ, ಬಾಕಿ ಉಳಿಯದಂತೆ ತೆರಿಗೆ ವಸೂಲಿಗೆ ಅನುಸರಿಸಬೇಕಾದ ಮಾರ್ಗ, ತೆರಿಗೆ ಪಾವತಿಸಲು ಜನರಿಗೆ ನೀಡಬಹುದಾದ ಸುಲಭ ವಿಧಾನ, ತೆರಿಗೆ ಪಾವತಿಸದವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ತೆರಿಗೆ ವಸೂಲಿ ಅಧಿಕಾರಿಗಳೊಂದಿಗೆ ಸೇರಿ ತೆರಿಗೆ ಸಂಗ್ರಹಿಸಿದರೆ ಪಾಲಿಕೆಗೆ ಪ್ರತಿವರ್ಷ ₹400 ಕೋಟಿಯಿಂದ ₹500 ಕೋಟಿವರೆಗೂ ಆದಾಯ ಸಂಗ್ರಹವಾಗಲಿದೆ. ಇದರಿಂದ ಅವಳಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು’ ಎಂದು ತಿಳಿಸಿದರು.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.38 ಲಕ್ಷ ಆಸ್ತಿಗಳಿವೆ. ಆದರೆ, ಈ ಎಲ್ಲ ಆಸ್ತಿಗಳಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ. ಅಕ್ರಮ ಸಕ್ರಮಗಳಲ್ಲಿ ಇರುವವರಿಂದ ತೆರಿಗೆ ಕಟ್ಟಿಸಿಕೊಂಡರೆ ಪಾಲಿಕೆಗೆ ಆದಾಯ ಹೆಚ್ಚಲಿದೆ. ಅಲ್ಲದೆ, ವಾರ್ಡ್‌ಗಳ ಅಭಿವೃದ್ಧಿಗೂ ಅನುಕೂಲ ಆಗಲಿದೆ’ ಎಂದರು.

‘ಪಾಲಿಕೆ ಸದಸ್ಯರು ಟಾರ್ಗೆಟ್‌ ಇಟ್ಟುಕೊಂಡು ನಿರ್ದಿಷ್ಟ ಸಮಯದೊಳಗೆ ತಮ್ಮ ವಾರ್ಡ್‌ಗಳಲ್ಲಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹವಾದರೆ ಅದರಲ್ಲಿನ ಶೇ 80ರಷ್ಟು ಹಣವನ್ನು ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನವಾಗಿ ನೀಡಲಾಗುವುದು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ನಿರೀಕ್ಷಿಸುವ ಅವಶ್ಯಕತೆ ಬರುವುದಿಲ್ಲ’ ಎಂದು ತಿಳಿಸಿದರು.

‘ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್ ಸದಸ್ಯರಿಗೆ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ನೀಡಬೇಕು. ವಾರ್ಡ್ ವ್ಯಾಪ್ತಿಯಲ್ಲಿ ಯಾವುದು ವಸತಿ, ವಾಣಿಜ್ಯ ಆಸ್ತಿಗಳಿವೆ ಎಂಬುದು ತಿಳಿದರೆ ತೆರಿಗೆ ಸಂಗ್ರಹಿಸಲು ಅನುಕೂಲ ಆಗುತ್ತದೆ’ ಎಂದು ಹೇಳಿದರು.

‘ಹೆಸ್ಕಾಂ, ರೈಲ್ವೆ ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳಿಂದ ತೆರಿಗೆ ಸಂಗ್ರಹ ಮಾಡಬೇಕು. ರೈಲ್ವೆ ಇಲಾಖೆಯಿಂದ ಕಳೆದ ಹಲವು ವರ್ಷಗಳಿಂದ ತೆರಿಗೆ ಸಂಗ್ರಹ ಮಾಡಿಲ್ಲ. ಈ ಬಗ್ಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮಾತನಾಡಿದ್ದೇನೆ. ತೆರಿಗೆ ವಸೂಲಿಗೆ ಬಂದರೆ ಪಾವತಿಸುವುದಾಗಿ ಹೇಳಿದ್ದಾರೆ. ಪಾಲಿಕೆ ಅಧಿಕಾರಿಗಳು ಯಾವುದೇ ಆಸ್ತಿ ತೆರಿಗೆ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಹೆಚ್ಚಿನ ತೆರಿಗೆ ಸಂಗ್ರಹದಿಂದ ಅವಳಿನಗರ ಅಭಿವೃದ್ಧಿ ಆಗುತ್ತದೆ. ಸಭೆಯಲ್ಲಿ ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸಿ ತೆರಿಗೆ ಸಂಗ್ರಹಿಸಲು ಎಲ್ಲರೂ ಶ್ರಮಿಸಬೇಕು. ತೆರಿಗೆ ಸಂಗ್ರಹಿಸಲು ಹೊರಗುತ್ತಿಗೆ ನೀಡಲು ಅವಕಾಶವಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಮಾಡಬಹುದು’ ಎಂದರು.

ಕಂದಾಯ ಉಪ ಆಯುಕ್ತ ವಿಶ್ವನಾಥ ಅವರು ಪಾಲಿಕೆ ವ್ಯಾಪ್ತಿಯ ಎಷ್ಟು ಆಸ್ತಿಗಳಿವೆ? ತೆರಿಗೆ ಸಂಗ್ರಹ ಹಾಗೂ ಪಾಲಿಕೆ ತೆರಿಗೆ ಸಂಗ್ರಹಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ ಹಾಗೂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT