ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್ ಲಸಿಕೆ ಬಗ್ಗೆ ಆತಂಕ ಬೇಡ: ಸಚಿವ ಜಗದೀಶ ಶೆಟ್ಟರ್

Last Updated 1 ಮಾರ್ಚ್ 2021, 14:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಕೋವಿಶೀಲ್ಡ್ ಲಸಿಕೆ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, 60 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ 45-59 ವರ್ಷದೊಳಗಿನವರಿಗೆಎರಡನೇ ಹಂತದ ಲಸಿಕೆ ಅಭಿಯಾನಕ್ಕೆ‌ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಕೊರೊನಾ ಸೋಂಕು ತಡೆಯುವ ಕೋವಿಶೀಲ್ಡ್ ಬಗ್ಗೆ ಕೆಲವರಲ್ಲಿ ಆತಂಕವಿದೆ. ಅದನ್ನು ಹೋಗಲಾಡಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು, ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಮುಖ್ಯಸ್ಥರು ಲಸಿಕೆ ಪಡೆಯುತ್ತಿದ್ದೇವೆ. ಸರ್ಕಾರದ ಕ್ರಮಗಳಿಂದಾಗಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಇದುವರೆಗೆ 28 ಸಾವಿರ ಮಂದಿಗೆ ಲಸಿಕೆ ನೀಡಲು ಗುರುತಿಸಲಾಗಿತ್ತು. ಆ ಪೈಕಿ ಮೊದಲ ಹಂತದಲ್ಲಿ 19,545 ಜನ ಲಸಿಕೆ ಪಡೆದಿದ್ದಾರೆ. 7,175 ಮಂದಿ ಎರಡನೇ ಸುತ್ತಿನ ಲಸಿಕೆ ಹಾಕಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ₹250 ಶುಲ್ಕದೊಂದಿಗೆ ಲಸಿಕೆ ನೀಡಲಾಗುತ್ತಿದೆ. ಜನ ಸ್ವಇಚ್ಛೆಯಿಂದ ಬಂದು ಲಸಿಕೆ ಪಡೆಯಬೇಕು’ ಎಂದು ಹೇಳಿದರು.

ಲಸಿಕೆ ಪಡೆದ ಶೆಟ್ಟರ್ ಸರ್ಕಿಟ್ ಹೌಸ್‌ಗೆ ತೆರಳು ಅರ್ಧ ತಾಸು ವಿಶ್ರಾಂತಿ ಪಡೆದರು. ಶುಶ್ರೂಷಾಧಿಕಾರಿಗಳಾದ ಸುಜಾತ ಜೆ., ಹೇಮಾ ಹಾಗೂ ಪ್ರದೀಪ್ ಅವರ ತಂಡ ಸಚಿವ ಶೆಟ್ಟರ್‌ಗೆ ಲಸಿಕೆ ನೀಡಿತು.

ಏಳು ಕಡೆ ಲಸಿಕೆ ಲಭ್ಯ: ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಜಿಲ್ಲಾಸ್ಪತ್ರೆ, ಕಲಘಟಗಿ, ಕುಂದಗೋಳ, ನವಲಗುಂದದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಹುಬ್ಬಳ್ಳಿಯ ಖಾಸಗಿ ಸುಚಿರಾಯು ಹಾಗೂ ಎಸ್‌ಡಿಎಂ ಆಸ್ಪತ್ರೆಯಲ್ಲಿ ಶುಲ್ಕಸಹಿತ ಲಸಿಕೆ ಸಿಗಲಿದೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ,ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಜಿಲ್ಲಾ ವೈದ್ಯಾಧಿಕಾರಿ ಡಾ. ಯಶವಂತ ಮದೀನಕರ, ಸಾಬೂನು ಮತ್ತು ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಬಿಜೆಪಿ ಮುಖಂಡ ಸಂತೋಷ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT