ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ವರ್ಷ ಆರಂಭದ ನಂತರ ಶಿಕ್ಷಕರ ವರ್ಗಾವಣೆ ಬೇಡ

ಧಾರವಾಡ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹ
Last Updated 16 ಮೇ 2019, 9:49 IST
ಅಕ್ಷರ ಗಾತ್ರ

ಧಾರವಾಡ: ‘ಮೇ 29ರೊಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ, ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ಯಾವುದೇ ವರ್ಗಾವಣೆ ನಡೆಸಬಾರದು’ ಎಂದುಧಾರವಾಡ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಅಧ್ಯಕ್ಷ ಈರಣ್ಣಾ ಮರಗೋಡ ಅವರು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಎಸ್‌ಡಿಎಂಸಿ ಮತ್ತು ಮಕ್ಕಳಿಲ್ಲದೆ ಶಾಲೆಗಳಿಲ್ಲ. ಶಾಲೆ ಮತ್ತು ಮಕ್ಕಳಿಲ್ಲದೆ ಶಿಕ್ಷಕರು ಇಲ್ಲ ಎಂಬ ಸತ್ಯವನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ಕಠಿಣ ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಮತ್ತು ಶಿಕ್ಷಕರ ಸಂಘಗಳು ತಮ್ಮ ಆರ್ಥಿಕ ಬೇಡಿಕೆ, ವರ್ಗಾವಣೆ ಮತ್ತು ರಜೆಯ ಬೇಡಿಕೆ ಇಟ್ಟು ಶಾಲೆಗಳಿಂದ ದೂರ ಉಳಿಯುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

‘ಶಾಲಾ ಹಂತದಲ್ಲಿ ಎಸ್‌ಡಿಎಂಸಿ ಮತ್ತು ಪಂಚಾಯ್ತಿ, ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಎಸ್‌ಡಿಎಂಸಿ ಸಮನ್ವಯ ವೇದಿಕೆಯು ದಾಖಲಾತಿ ಆಂದೋಲನ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ, ಶಾಲೆಗಳ ಮೂಲಸೌಕರ್ಯಕ್ಕೆ ದಾನಿಗಳನ್ನು ಹುಡುಕುವ ಇತ್ಯಾದಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಶಿಕ್ಷಕರು ಇದು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

‘ಉತ್ತಮ ಸಂಬಳ, ಸಾಮಾಜಿಕ ಭದ್ರತೆ ಮತ್ತು ಹತ್ತು ಹಲವು ಸೌಲಭ್ಯಗಳನ್ನು ಹೊಂದಿರುವ ಶಿಕ್ಷಕರು ಹಗಲಿರುಳೆನ್ನದೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ದುಡಿಯಬೇಕು. ಶಾಲೆ ಮತ್ತು ಮಕ್ಕಳ ಶಿಕ್ಷಣ ನೀಡುವ ಕುರಿತು ತಮ್ಮ ಬದ್ಧತೆ ಮತ್ತು ನೈತಿಕ ಜವಾಬ್ದಾರಿ ಎಂಬುದನ್ನು ಎಸ್‌ಡಿಎಂಸಿ ಸಮನ್ವಯ ವೇದಿಕೆ ನಿರೀಕ್ಷಿಸುತ್ತದೆ’ ಎಂದು ಹೇಳಿದ್ದಾರೆ.

‘ಯಾವುದೇ ನಿರೀಕ್ಷೆಗಳಿಲ್ಲದೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ಸಮನ್ವಯ ವೇದಿಕೆ ದುಡಿಯುತ್ತಿದೆ. ಆದರೆ ಶಿಕ್ಷಕರು ಮಾತ್ರ ಸರ್ಕಾರಿ ಶಾಲೆಗಳ ಕುರಿತು ಅಸಡ್ಡೆ ಧೋರಣೆ ಹೊಂದಿದ್ದಾರೆ. ಜತೆಗೆ ಬಹುತೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಕೇವಲ ಸರ್ಕಾರಿ ಉದ್ಯೋಗಕ್ಕಾಗಿ ಶಾಲೆಗಳಲ್ಲಿ ಒಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಇಂಥವರ ಸಂಖ್ಯೆ ಹೆಚ್ಚಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ’ ಎಂದು ಈರಣ್ಣಾ ಆತಂಕ ವ್ಯಕ್ತಪಡಿಸಿದ್ದಾರೆ.

‘ಈ ನಿಟ್ಟಿನಲ್ಲಿ ನೌಕರರನ್ನು ಓಲೈಸುವುದನ್ನು ಸರ್ಕಾರ ನಿಲ್ಲಿಸಬೇಕು. ಅವರು ಜನ ಸೇವಕರು, ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದಾರೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ವೇದಿಕೆ ಪರವಾಗಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT