ಶಿವರಾಯ ಪೂಜಾರಿ
ಹುಬ್ಬಳ್ಳಿ: ಜಮೀನಿನಲ್ಲಿ ಕಳೆ ತೆಗೆಸುವುದು, ಎಡೆಕುಂಟೆ ಹೊಡೆಯುವುದು, ಬೆಳೆಗೆ ಔಷಧ ಸಿಂಪಡಿಸುವುದು.. ಹೀಗೆ ಬೆಳೆ ಬೆಳೆಯಲು ಮಾಡಬೇಕಾದ ಕೃಷಿ ಚಟುವಟಿಕೆಗಳು ಒಂದಾ, ಎರಡಾ...
ಒಂದು ಎಕರೆಗೆ ಕನಿಷ್ಠವೆಂದರೂ ₹8ರಿಂದ ₹10 ಸಾವಿರ ಖರ್ಚಾಗುತ್ತದೆ. ಅಲ್ಲದೆ, ಈ ಕೆಲಸಗಳಿಗೆ ಎತ್ತುಗಳು, ಕೂಲಿ ಕೆಲಸಗಾರರು ಸಿಗದೆ ರೈತರು ಪರದಾಡುವುದೂ ಉಂಟು. ಇದೆಲ್ಲದಕ್ಕೆ ಧಾರವಾಡ ಕೃಷಿ ವಿಶ್ವವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ‘ಸ್ನೇಹ ತಂಡ’ ಪರಿಹಾರ ಒದಗಿಸಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ರೈತಸ್ನೇಹಿಯಾಗಿ ಸುಧಾರಿತ ಯಂತ್ರಗಳನ್ನು ಸಂಶೋಧಿಸಿದೆ.
ಪೈಪ್, ಸೈಕಲ್ ಚಕ್ರ, ತಗಡಿನ ಡಬ್ಬಿ, ಕಬ್ಬಿಣದ ವಸ್ತುಗಳನ್ನು ಬಳಸಿ ಎಡೆಕುಂಟೆ ಹೊಡೆಯುವ, ಔಷಧ ಸಿಂಪಡಿಸುವ, ಕಾಳುಗಳನ್ನು ಸ್ವಚ್ಛಗೊಳಿಸುವ ಸಾಧನಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಕಡಿಮೆ ಖರ್ಚಿನಲ್ಲಿ ಇವುಗಳನ್ನು ಹೇಗೆ ತಯಾರಿಸಬಹುದು ಎಂದು ರೈತರಿಗೆ ಮಾಹಿತಿ ಒದಗಿಸುತ್ತಿದ್ದಾರೆ.
ಈ ಸಾಧನ ಬಳಸಿ ಏಕಕಾಲಕ್ಕೆ 10ರಿಂದ 12 ಸಾಲುಗಳಿಗೆ ಔಷಧ ಸಿಂಪಡಣೆ ಮಾಡಬಹುದು. ನೀರಿನ ಹನಿಗಳು ಸಣ್ಣದಾಗಿ ಬೀಳುವುದರಿಂದ ರಾಸಾಯನಿಕವು ಸುಲಭವಾಗಿ ಬೆಳೆಗಳಿಗೆ ತಲುಪುತ್ತದೆ. ದಿನವೊಂದಕ್ಕೆ 8ರಿಂದ 10 ಎಕರೆ ಜಮೀನಿಗೆ ಔಷಧ ಸಿಂಪಡನೆ ಮಾಡಬಹುದು. ಇದನ್ನು ತಯಾರಿಸಲು ವ್ಯಯಿಸಿದ್ದು ಕೇವಲ ₹450.
ಬೆಳೆಯ ಸಮತೋಲನ ಬೆಳವಣಿಗೆಗೆ ಹಾಗೂ ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯುವುದು ಅತ್ಯವಶ್ಯ. ಎತ್ತುಗಳನ್ನು ಬಳಸಿ ಎಡೆಹೊಡೆಯಲು ದಿನವೊಂದಕ್ಕೆ ₹1,500ರಿಂದ ₹2,000 ನೀಡಬೇಕಾದ ಸ್ಥಿತಿ ಇದೆ. ಆದರೆ ವಿದ್ಯಾರ್ಥಿಗಳು ತಯಾರಿಸಿದ ಎಡೆಕುಂಟೆ ಸಾಧನವನ್ನು ₹2,000 ಖರ್ಚಿನಲ್ಲಿ ಮನೆಯಲ್ಲಿಯೇ ತಯಾರಿಸಬಹುದು.
ಸೈಕಲ್ ಚಕ್ರ, ಕಬ್ಬಿಣದ ಪೈಪ್‌ಗಳನ್ನು ಬಳಸಿ ಈ ಸಾಧನ ತಯಾರಿಸಿದ್ದು, ಒಂದೇ ಸಮಯದಲ್ಲಿ 3 ಸಾಲುಗಳಲ್ಲಿ ಎಡೆ ಹೊಡೆಯಬಹುದು. ಒಂದೂವರೆ ಗಂಟೆಗಳಲ್ಲಿ 1 ಎಕರೆ ಎಡೆ ಹೊಡಬಹುದು.
ರೈತರು ತೊಗರಿ, ಕಡಲೆ, ಹೆಸರುಕಾಳು, ಉದ್ದು, ಅವರೆ ಬೆಳೆಗಳನ್ನು ಕಟಾವು ಮಾಡಿ, ಯಂತ್ರದಿಂದ ಅಥವಾ ನೆಲಕ್ಕೆ ಬಡಿದು ಫಸಲು ರಾಶಿ ಮಾಡುತ್ತಾರೆ. ಆದರೆ, ಇವುಗಳಲ್ಲಿ ಕಸ–ಕಡ್ಡಿ, ಸಣ್ಣ ಕಲ್ಲುಗಳು ಹಾಗೆಯೇ ಉಳಿದಿರುತ್ತವೆ. ಇವುಗಳನ್ನು ಬೇರ್ಪಡಿಸಿ ಕಾಳುಗಳನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ ವಿದ್ಯಾರ್ಥಿಗಳು ಸಂಶೋಧಿಸಿದ ಕಾಳು ಸ್ವಚ್ಛಗೊಳಿಸುವ ಯಂತ್ರ.
ತಗಡಿನ ಡಬ್ಬಿ, ಪೈಪ್, ಟೇಬಲ್ ಬಳಸಿ ₹400 ವೆಚ್ಚದಲ್ಲಿ ಈ ಸಾಧನ ತಯಾರಿಸಲಾಗಿದ್ದು, ಇದರಿಂದ 4 ಗಂಟೆಗೆ 5ರಿಂದ 8 ಕ್ವಿಂಟಲ್‌ಗಳಷ್ಟು ಕಾಳುಗಳನ್ನು ಸ್ವಚ್ಛಗೊಳಿಸಬಹುದು.
ಕೃಷಿಮೇಳದಲ್ಲಿನ ಈ ಮಳಿಗೆಗೆ ರೈತರು ಭೇಟಿ ನೀಡಿ ಮಾಹಿತಿ ಪಡೆದರು. ವಿದ್ಯಾರ್ಥಿಗಳ ಸಂಶೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಯಲ್ಲಿ ನಾವಿನ್ಯತೆ ತರಲು 2004ರಲ್ಲಿ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಅಗ್ರಿ ವಿದ್ಯಾರ್ಥಿಗಳಿಂದ ‘ಸ್ನೇಹ ತಂಡ’ ಆರಂಭಿಸಲಾಯಿತು. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಧನಗಳನ್ನು ಸಂಶೋಧಿಸಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ– ಪ್ರವೀಣ ವಿದ್ಯಾರ್ಥಿ ಕೃಷಿ ವಿಶ್ವವಿದ್ಯಾಲಯ ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.