‘ಸಂಧಾನದಿಂದ ಇತ್ಯರ್ಥಕ್ಕೆ ಯತ್ನ’
‘ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿಯು ಉಸ್ತುವಾರಿ ನೋಡಿಕೊಳ್ಳುತ್ತಿದೆ. ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಸಹಾಯವಾಣಿಗೆ ಕರೆ ಮಾಡಿದರೆ ಅವರ ಮನೆಗೆ ಹೋಗಿ ದೂರು ಪಡೆಯಲಾಗುತ್ತದೆ’ ಎಂದು ಕೇಂದ್ರದ ಸಿಬ್ಬಂದಿ ಪ್ರಕಾಶ ತಿಳಿಸಿದರು. ‘ಪ್ರತಿವಾದಿಗೆ ನೋಟಿಸ್ ನೀಡಿ ಅವರ ಹೇಳಿಕೆ ಸಂಗ್ರಹಿಸಲಾಗುತ್ತದೆ. ಸಮಾಲೋಚಕರ ಮಧ್ಯಸ್ಥಿಕೆಯಲ್ಲಿ ದೂರದಾರರು ಹಾಗೂ ಪ್ರತಿವಾದಿಗಳ ಸಮಾಲೋಚನೆ ನಡೆಸಲಾಗುತ್ತದೆ. ಬಹುತೇಕ ಪ್ರಕರಣಗಳನ್ನು ಸಂಧಾನ ಮೂಲಕ ಪರಿಹರಿಸಲಾಗುತ್ತದೆ. ಇಲ್ಲಿ ಇತ್ಯರ್ಥವಾಗದ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅಲ್ಲಿ ಪರಿಹಾರ ಕಾಣದ ಪ್ರಕರಣಗಳನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ರವಾನೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳು ನ್ಯಾಯಾಲಯಕ್ಕೂ ಹೋಗುತ್ತವೆ’ ಎಂದರು.