ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿನತ್ತ ಜನ; ಮುಗಿಯದ ಖರೀದಿ ಭರಾಟೆ

Last Updated 28 ಏಪ್ರಿಲ್ 2021, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಏ. 27ರಂದು ರಾತ್ರಿಯಿಂದಲೇ ಲಾಕ್‌ಡೌನ್ ಜಾರಿ ಮಾಡಿದ ಬೆನ್ನಲ್ಲೇ, ನಗರದ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ಜನ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಮುಗಿಬಿದ್ದರು. ಲಾಕ್‌ಡೌನ್‌ನಿಂದ ಬಂದ್ ಆಗುವ ವಿವಿಧ ಉದ್ಯಮಗಳ ಕಾರ್ಮಿಕರು ತಮ್ಮ ಊರಿನತ್ತ ಹೋಗಲು ಪ್ರಯಾಣ ಬೆಳೆಸಲು ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಜನತಾ ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿ, ದಾಜಿಬಾನಪೇಟೆ, ಕೊಪ್ಪಿಕರ ರಸ್ತೆ ಸೇರಿದಂತೆ ವಿವಿಧೆಡೆ ಖರೀದಿ ಭರಾಟೆ ಜೋರಾಗಿತ್ತು. ತರಕಾರಿ, ದಿನಸಿ ಸಾಮಾನು, ಹಣ್ಣುಗಳು ಖರೀದಿ ಸಾಮಾನ್ಯವಾಗಿತ್ತು. ಸಿದ್ಧಾರೂಢ ಮಠದ ಪ್ರವೇಶ ದ್ವಾರದ ಎದುರು ಬೀದಿ ಬದಿ ವ್ಯಾಪಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು.

‘ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ಅವಕಾಶ ನೀಡಿದರೂ, ಕೆಲ ವಸ್ತುಗಳನ್ನು ಮಾರುಕಟ್ಟೆಗೆ ಬಂದು ಖರೀದಿಸಬೇಕಾಗುತ್ತದೆ. ಹಾಗಾಗಿ, ಎರಡು ವಾರಕ್ಕೆ ಅಗತ್ಯವಿರುವ ಮುಖ್ಯ ಸಾಮಾನುಗಳನ್ನು ಇಂದೇ ಖರೀದಿಸಿಕೊಂಡು ಹೋಗುತ್ತಿದ್ದೇವೆ’ ಎಂದು ವಿದ್ಯಾನಗರ ನಿವಾಸಿ ಶಿವಲಿಂಗಪ್ಪ ಪೂಜಾರ ಹೇಳಿದರು.

ಹೋಟೆಲ್, ಬೇಕರಿ, ಮಾಲ್‌ಗಳು, ಅಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್ ಸೇರಿದಂತೆ ಲಾಕ್‌ಡೌನ್‌ ಮುಗಿಯುವವರೆಗೆ ಬಾಗಿಲು ತೆರೆಯದ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಳಿಗ್ಗೆಯಿಂದಲೇ ಬಸ್‌ಗಳಲ್ಲಿ ಲಗೇಜ್ ಸಮೇತ ಕುಟುಂಬಸಮೇತ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

‘ಬಾರ್‌ ಅಂಡ್ ರೆಸ್ಟೊರೆಂಟ್‌ನಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್ ಅವಧಿಯಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರುವುದರಿಂದ, ನಮಗೆ ಕೆಲಸವಿಲ್ಲ. ಹಾಗಾಗಿ, ಮಾಲೀಕರು ಎರಡು ರಜೆ ಕೊಟ್ಟಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಕೆಲಸಕ್ಕೆ ವಾಪಸ್ಸಾಗುತ್ತೇವೆ’ ಎಂದು ಗುಳೇದಗುಡ್ಡದ ಮಹೇಶ ಜಮಖಂಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT