ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬೆಳೆ ಸಮೀಕ್ಷೆಗೆ ರೈತರ ನಿರುತ್ಸಾಹ

ಹಿಂಗಾರು ಬೆಳೆಗಳ ಆ್ಯಪ್‌ ಆಧಾರಿತ ಸಮೀಕ್ಷೆ; ತಿಂಗಳಾದರೂ ಕಾಣದ ಪ್ರಗತಿ
Last Updated 12 ಜನವರಿ 2022, 14:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಆ್ಯಪ್‌ ಆಧಾರಿತ ಸಮೀಕ್ಷೆ ಆರಂಭಗೊಂಡು ತಿಂಗಳಾಗುತ್ತಾ ಬಂದರೂ, ಜಿಲ್ಲೆಯ ರೈತರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ.

ಹಿಂಗಾರು ಕೃಷಿ ಬೆಳೆಗಳಾದ ಕಡಲೆ, ಗೋಧಿ, ಜೋಳ, ಕುಸುಬೆ ಹಾಗೂ ಸೋಯಾಬಿನ್ ಬೆಳೆಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ. ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಡಿ. 9ರಿಂದ ಸಮೀಕ್ಷೆ ಆರಂಭವಾಗಿದ್ದರೂ, ಇದುವರೆಗೆ ಕೇವಲ ಶೇ 23.12ರಷ್ಟು ಮಾತ್ರ ಪ್ರಗತಿಯಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ರೈತರ ಬೆಳೆ ಸಮೀಕ್ಷೆ: 2021-22’ ಎಂಬ ಹೆಸರಿನ ಆ್ಯಪ್‍ ಅನ್ನು ರೈತರು ಸ್ಮಾರ್ಟ್‌ಫೋನ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. ತಾವು ಬೆಳೆದಿರುವ ಬೆಳೆಯ ಚಿತ್ರ ತೆಗೆದು, ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಬೇಕು.

ಅಳ್ನಾವರ ಮುಂದು:

ಸದ್ಯ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಪೈಕಿ ಅಳ್ನಾವರ ತಾಲ್ಲೂಕಿನಲ್ಲಿ ಇದುವರೆಗೆ ಅತಿ ಹೆಚ್ಚು ಶೇ 46ರಷ್ಟು ಪ್ರಗತಿಯಾಗಿದೆ. ಅಣ್ಣಿಗೇರಿ ತಾಲ್ಲೂಕಿನಲ್ಲಿ ಅತಿ ಕಡಿಮೆ ಶೇ 11ರಷ್ಟು ಮಾತ್ರ ಸಮೀಕ್ಷೆ ನಡೆದಿದೆ. ಉಳಿದ ಯಾವ ತಾಲ್ಲೂಕುಗಳ ಪ್ರಗತಿಯೂ ಶೇ 30ರ ಗಡಿ ದಾಟಿಲ್ಲ.

‘ಸಮೀಕ್ಷೆ ಪಾರದರ್ಶಕವಾಗಿದ್ದರೂ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಕೆಲ ತಾಂತ್ರಿಕ ತೊಂದರೆಯು ಸಮೀಕ್ಷೆಗೆ ಸವಾಲಾಗಿದೆ. ಆದರೂ, ರೈತರು ಪಿಆರ್‌ಗಳ ಹಾಗೂ ಸ್ಮಾರ್ಟ್‌ಫೋನ್ ಬಳಕೆ ಗೊತ್ತಿರುವವರ ನೆರವು ಪಡೆದು ಸಮೀಕ್ಷೆ ಮಾಡುತ್ತಿದ್ದೇವೆ’ ಎಂದು ಹುಬ್ಬಳ್ಳಿಯ ರೈತ ಬಸವರಾಜ ಹಿರೇಮಠ ಹೇಳಿದರು.

‘ಬಿತ್ತನೆಯ ಆರಂಭದಲ್ಲೇ ಅಕಾಲಿಕ ಮಳೆ ಸುರಿದಿದ್ದರಿಂದ ಬೆಳೆ ಅಷ್ಟಾಗಿ ಮೇಲಕ್ಕೆ ಏಳಲಿಲ್ಲ. ಈಗ ಇರುವ ಬೆಳೆಯಲ್ಲೂ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸುವಂತಿಲ್ಲ. ಆದರೂ, ಆ್ಯಪ್‌ನಲ್ಲಿ ಸಮೀಕ್ಷೆ ಮುಗಿಸಿದ್ದೇವೆ. ಇದರಿಂದ ಕೃಷಿ ಇಲಾಖೆಯಿಂದ ವಿವಿಧ ಪ್ರಯೋಜನ ಪಡೆಯಲು ಸಮೀಕ್ಷೆ ಸಹಕಾರಿಯಾಗಿದೆ’ ಎಂದು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಯ ರೈತ ಈಶ್ವರಪ್ಪ ತಿಳಿಸಿದರು.

ರೈತರಿಗೇ ಆದ್ಯತೆ:

‘ಈ ಬಾರಿ ರೈತರೇ ಹೆಚ್ಚಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ, ಪಿಆರ್‌ (ಪ್ರೈವೇಟ್ ರೆಸಿಡೆನ್ಸಿ) ನೆರವಿನ ಸಮೀಕ್ಷೆ ನಿಧಾನಗೊಳಿಸಲಾಗಿತ್ತು. ಇದರಿಂದಾಗಿ,13,300 ಹಿಡುವಳಿಗಳ ಸಮೀಕ್ಷೆಯನ್ನು ಸ್ವತಃ ರೈತರು ಮಾಡಿದ್ದಾರೆ. ಉಳಿದಂತೆ, ಪಿಆರ್‌ಗಳು 41,491 ಹಿಡುವಳಿಗಳ ಸಮೀಕ್ಷೆ ನಡೆಸಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆ್ಯಪ್ ಆಧಾರಿತ ಬೆಳೆ ಸಮೀಕ್ಷೆಯ ಮಾಹಿತಿಯು ಬಹುಪಯೋಗಿಯಾಗಿದೆ. ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ ಬೆಳೆ ಖರೀದಿ, ಬೆಳೆ ವಿಮೆ, ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಕೃಷಿಗೆ ಸಂಬಂಧಿಸಿದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಈ ಮಾಹಿತಿಯನ್ನು ಸರ್ಕಾರ ಆಧಾರವಾಗಿ ಇಟ್ಟುಕೊಳ್ಳುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT