ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಅಂಗಳಕ್ಕೆ ಕಾಲ ಹಾದಿ: ಕಾನನದಂಚಿನ ವಿದ್ಯಾರ್ಥಿಗಳಿಗೆ ತಪ್ಪದ ತೊಂದರೆ

ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಯ ಹಲವೆಡೆ ಶಾಲೆಯತ್ತ ನಡಿಗೆ ಅನಿವಾರ್ಯ
Last Updated 5 ಸೆಪ್ಟೆಂಬರ್ 2021, 21:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗುಡ್ಡಗಾಡು ಪ್ರದೇಶಗಳೇ ಅಧಿಕವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲ್ಲೂಕುಗಳ ವಿದ್ಯಾರ್ಥಿಗಳು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾನನದಂಚಿನ ಗ್ರಾಮಗಳ ಮಕ್ಕಳು, ಅರೆ ಮಲೆನಾಡು ಭಾಗವಾದ ಧಾರವಾಡ ಜಿಲ್ಲೆಯ ಅಳ್ನಾವರ, ಗದಗ ಜಿಲ್ಲೆಯ ನರಗುಂದದ ಗಡಿಗ್ರಾಮ ಲಖಮಾಪುರದ ವಿದ್ಯಾರ್ಥಿಗಳು ಇಂದಿಗೂ ಪ್ರತಿನಿತ್ಯ ಶಾಲಾ–ಕಾಲೇಜು ತಲುಪಲು ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಗಸೂರು ಪ್ರೌಢಶಾಲೆಗೆ ಮಾರುಗದ್ದೆ, ಮಕ್ಕಿಗದ್ದೆ ಭಾಗದ 40ಕ್ಕೂ ಅಧಿಕ ಮಕ್ಕಳು ಎಂಟು– ಹತ್ತು ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಾರೆ. ಸುಂಕಸಾಳ, ಹಿಲ್ಲೂರು, ಅಚವೆ ಮುಂತಾದ ಪ್ರದೇಶಗಳಲ್ಲೂ ಈ ಸಮಸ್ಯೆಯಿದೆ.

ಕಾರವಾರ ತಾಲ್ಲೂಕಿನ ಕೆರವಡಿ, ನಗೆ, ಕೋವೆ, ನೀರ್ಪಾಲು ಗ್ರಾಮಗಳಲ್ಲೂ ಹತ್ತಾರು ವಿದ್ಯಾರ್ಥಿಗಳು ಕಿಲೋಮೀಟರ್‌ಗಟ್ಟಲೆ ದೂರದಿಂದ ಕಾಲ್ನಡಿಗೆಯಲ್ಲೇ ಬರುತ್ತಾರೆ. ಕುಮಟಾದ ಸಂತೆಗುಳಿಯಲ್ಲಿರುವ ಉರ್ದು ಶಾಲೆಗೆ ಚಂದಾವರ ಕಡೆಯಿಂದ ಮಕ್ಕಳು ನಡಿಗೆಯಲ್ಲೇ ತಲುಪುತ್ತಾರೆ.

ಮುಂಡಗೋಡ ತಾಲ್ಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದಿಂದ ನಿತ್ಯವೂ ಮೂರು ಕಿಲೋಮೀಟರ್ ನಡೆದುಕೊಂಡು ವಿದ್ಯಾರ್ಥಿಗಳು ಅಂದಲಗಿ ಪ್ರೌಢಶಾಲೆಗೆ ಹೋಗುತ್ತಾರೆ. ಇದು ಕಾಡಿನ ಹಾದಿ ಆಗಿದ್ದು, ಕಾಡಾನೆಗಳು ಹಾಗೂ ವನ್ಯ ಪ್ರಾಣಿಗಳು ಆಗಾಗ ಎದುರಾಗುತ್ತವೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಅವರ ಸ್ವಗ್ರಾಮ ಅಂದಲಗಿ ಸನಿಹದಲ್ಲಿಯೇ ಇದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಲಂಬಾಪುರ,ಹೆಗ್ಗರಣಿ ಭಾಗದ ಕೆಲವು ಪ್ರಾಥಮಿಕ ಶಾಲೆಗಳಿಗೆ 5-6 ಕಿ.ಮೀ ದೂರದಿಂದ ನಡೆದು ಬರುವ ಮಕ್ಕಳಿದ್ದಾರೆ. ಪ್ರೌಢಶಾಲೆಗಳಿಗೆ ಹತ್ತಾರು ಕಿ.ಮೀ ದೂರದಿಂದ ಸೈಕಲ್ ಮೇಲೆ ಬರುತ್ತಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಗವ್ವಾಳಿ, ಕೊಂಗಳಾ, ದೇಗಾಂವ, ಅಬನಾಳಿ, ಡೊಂಗರಗಾಂವ, ಮಾನ, ಸಡಾ, ಹೊಳಂದ, ಪಾಲಿ, ವರ್ಕಡ, ಮೊಹಿಸೇತ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳಿವೆ. ಅಲ್ಲಿ 5ನೇ ತರಗತಿ ಪೂರೈಸಿದ ಮಕ್ಕಳು ಮುಂದಿನ ಶಿಕ್ಷಣಕ್ಕಾಗಿ ತಮ್ಮೂರಿನಿಂದ ಸರಾಸರಿ 4ರಿಂದ 8 ಕಿ.ಮೀ. ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಕಣಕುಂಬಿ, ಜಾಂಬೋಟಿ, ಶಿರೋಲಿ, ಲೋಂಡಾ ಗ್ರಾಮಗಳಲ್ಲಿಯ ಪ್ರೌಢಶಾಲೆಗಳಿಗೆ ಈ ಮಕ್ಕಳು ನಡೆದುಕೊಂಡೇ ಕ್ರಮಿಸಿ ತಮ್ಮ ಶಿಕ್ಷಣ
ಪೂರೈಸುತ್ತಿದ್ದಾರೆ.

ಕಾಲೇಜು ಶಿಕ್ಷಣಕ್ಕಾಗಿ ನಂದಗಡ, ಖಾನಾಪುರ, ಬೆಳಗಾವಿ ಅಥವಾ ಉತ್ತರ ಕನ್ನಡ ಜಿಲ್ಲೆಯ ರಾಮನಗರಕ್ಕೆ ಹೋಗಬೇಕು. ಅವರೂ ಸರಾಸರಿ 4–5 ಕಿ.ಮೀ ನಡೆಯಬೇಕಾಗುತ್ತದೆ. ಮುಖ್ಯ ರಸ್ತೆಗೆ ಬಂದು ಬಸ್ ಹಿಡಿಯಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹೊರತುಪಡಿಸಿದರೆ ಇತರ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲ.

ಕೆಲವೆಡೆ ಕಾಲೇಜು ಸಮಯಕ್ಕೆ ಹೊಂದಾಣಿಕೆ ಇಲ್ಲ. ಇದರಿಂದಲೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಥಣಿ ತಾಲ್ಲೂಕಿನ ತೆಲಸಂಗದಲ್ಲಿರುವ ಪದವಿ ಕಾಲೇಜಿಗೆ ಕನ್ನಾಳದವರು 4 ಕಿ.ಮೀ, ಬನ್ನೂರದಿಂದ 6 ಕಿ.ಮೀ, ಹಾಲಳ್ಳಿಯಿಂದ 6 ಕಿ.ಮೀ, ಫಡಾತರವಾಡಿ 4 ಕಿ.ಮೀ ಸೈಕಲ್‌, ದ್ವಿಚಕ್ರವಾಹನ ಅಥವಾ ಪರ್ಯಾಯ ವ್ಯವಸ್ಥೆ ಮೂಲಕ ಬರುವ ಸ್ಥಿತಿ ಇದೆ. ಕೆಲವರು ನಡೆದುಕೊಂಡೇ ಬರುತ್ತಾರೆ. ಚಿಕ್ಕೋಡಿ ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಸರ್ಕಾರಿ ಕಾಲೇಜಿನ ಸಮಯಕ್ಕೆ ತೆರಳಲು ಬಸ್ ಸೌಲಭ್ಯವಿಲ್ಲ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಕಿವಡಬೈಲ್ ಮತ್ತು ದೂಪೇನಟ್ಟಿ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಸುಮಾರು 4 ಕಿ.ಮೀ ನಡೆಯಬೇಕು. ಈ ಗ್ರಾಮದ ಹಲವು ಮಕ್ಕಳು ಶಾಲೆ ಸಮೀಪ ಇರುವ ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದು ಓದುತ್ತಿದ್ದರೆ, ಕೆಲವರು ಹಾಸ್ಟೆಲ್ ಸೇರಿದ್ದಾರೆ.

ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೂ ಪರದಾಟ...

ಗದಗ: ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಪ್ರತಿನಿಧಿಸುವ ನರಗುಂದ ಕ್ಷೇತ್ರದ ಗಡಿಗ್ರಾಮ ಲಖಮಾಪುರದ ಮಕ್ಕಳು ಪ್ರತಿನಿತ್ಯ ಶಾಲೆಗೆ ಮೂರು ಕಿ.ಮೀ ನಡೆಯುವ ಪರಿಸ್ಥಿತಿ ಇದೆ. ಅದೇರೀತಿ, ಗಜೇಂದ್ರಗಡ ತಾಲ್ಲೂಕಿನ ಹೊಸರಾಂಪುರ ಹಾಗೂ ದ್ಯಾಮುಣಸಿ ಮಕ್ಕಳು ಸಹ ನಡದೇ ಶಾಲೆಗೆ ಹೋಗುವ ಸ್ಥಿತಿ ಇದೆ.

ಗಡಿಗ್ರಾಮ ಲಖಮಾಪುರಕ್ಕೆ ಬಸ್‌ ವ್ಯವಸ್ಥೆ ಇಲ್ಲ. ಇಲ್ಲಿನ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ರಾಮದುರ್ಗ ಕ್ರಾಸ್‌ವರೆಗೆ ನಡೆದು ಬಂದು ಬಳಿಕ ಕೊಣ್ಣೂರು, ರಾಮದುರ್ಗ ಅಥವಾ ಸೂರ್ಯಬಾನಕ್ಕೆ ತೆರಳುತ್ತಾರೆ.

ಗಜೇಂದ್ರಗಡ ತಾಲ್ಲೂಕಿನ ದ್ಯಾಮುಣಸಿ ಮಕ್ಕಳು ದ್ಯಾಮುಣಸಿ ಹಳ್ಳ ದಾಟಿ ಸೂಡಿವರೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಒಂದರಿಂದ ಐದನೇ ತರಗತಿವರೆಗೆ ದ್ಯಾಮುಣಸಿಯಲ್ಲೇ ಶಾಲೆ ಇದೆ. ನಂತರದ ವಿದ್ಯಾಭ್ಯಾಸ ಪಡೆಯಲು ಮಕ್ಕಳು 3 ಕಿ.ಮೀ ದೂರ ನಡೆದು ಸೂಡಿ, ಗಜೇಂದ್ರಗಡ ಬಸ್‌ ಹಿಡಿಯಬೇಕಾದ ಪರಿಸ್ಥಿತಿ ಇದೆ. ಅದೇರೀತಿ ಹೊಸರಾಂಪುರ ವಿದ್ಯಾರ್ಥಿಗಳು ಬಸ್‌ ಇಲ್ಲದೇ ರಾಂಪುರ 3 ಕಿ.ಮೀ ನಡೆದುಬರುತ್ತಾರೆ.

‘ಗದಗ ಜಿಲ್ಲೆಯ ದ್ಯಾಮುಣಸಿ ರಸ್ತೆ ತೀವ್ರ ಹದಗೆಟ್ಟಿದ್ದು ಇಲ್ಲಿ ಬಸ್‌ ಓಡಿಸುವುದು ಕಷ್ಟ’ ಎನ್ನುತ್ತಾರೆ ಗದಗ ವಿಭಾಗ ಸಂಚಾರ ನಿಯಂತ್ರಣಾಧಿಕಾರಿ ಜಿ.ಐ.ಬಸವಂತಪುರ.

ಭೂಮಿಕಾ ಸಾಧನೆ

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಪಡೆದುಕೊಂಡವಳು ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಕೃಷ್ಣ ನಾಯ್ಕ. ಆಕೆ ತನ್ನ ಮನೆಯಿಂದ ಮುಖ್ಯರಸ್ತೆಗೆ ನಿತ್ಯವೂ ಐದಾರು ಕಿ.ಮೀ ದಟ್ಟವಾದ ಅಡವಿಯಲ್ಲಿ ನಡೆದು ಬರುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT