ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಏಳಿಗೆ, ನಗರಗಳ ಅಭಿವೃದ್ಧಿ ನನ್ನ ಯೋಜನೆ: ವಿನಯ ಕುಲಕರ್ಣಿ

'ಯಡಿಯೂರಪ್ಪ ಅವರನ್ನು ಮುಗಿಸಲು ಪ್ರಯತ್ನಿಸಿದ್ದು ಶೇ 100ರಷ್ಟು ಜೋಶಿ ತಂಡವೇ'
Last Updated 25 ಏಪ್ರಿಲ್ 2019, 9:41 IST
ಅಕ್ಷರ ಗಾತ್ರ

* ಕ್ಷೇತ್ರದ ಮತದಾರರು ನಿಮ್ಮನ್ನೇ ಏಕೆಸಂಸದರನ್ನಾಗಿ ಆಯ್ಕೆ ಮಾಡಬೇಕು?

ನಾನೊಬ್ಬ ರೈತನ ಮಗ. ರೈತರ ಪರ ಕಾಳಜಿವುಳ್ಳವನು. ಹಾಗೆಯೇ ನಗರದ ಅಭಿವೃದ್ಧಿಯ ಕುರಿತೂ ಸಾಕಷ್ಟು ಕನಸಿದೆ. ಜಿಲ್ಲೆಯ ಅಂತರ್ಜಲಮಟ್ಟ ಕುಸಿದು ರೈತರು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದಾರೆ. ಕೆರೆ ತುಂಬಿಸಲು ಸಣ್ಣ ನೀರಾವರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಹಣವನ್ನು ಇವರು ನಿಲ್ಲಿಸಿದ್ದಾರೆ. ಅದನ್ನು ಮತ್ತೆ ಆರಂಭಿಸಿ ಕ್ಷೇತ್ರದ ಕೆರೆ ತುಂಬಿಸಬೇಕಿದೆ.ಹುಬ್ಬಳ್ಳಿ–ಧಾರವಾಡವನ್ನು ಶಿಕ್ಷಣ ಕೇಂದ್ರವನ್ನಾಗಿ ಮಾಡುವುದು, ವೇಗವಾಗಿ ಬೆಳೆಯುತ್ತಿರುವ ಅವಳಿ ನಗರದ ರಸ್ತೆಗಳ ಅಭಿವೃದ್ಧಿ, ಬಿಆರ್‌ಟಿಎಸ್ ಯೋಜನೆ ನ್ಯೂನ್ಯತೆ ಸರಿಪಡಿಸುವುದು, ಜಿಲ್ಲಾ ಸಚಿವನಾಗಿದ್ದಾಗ ರೂಪಿಸಿದ ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ ಇದೆ.

* ಜೋಶಿ ವೈಫಲ್ಯ ಏನು? ಅವರಿಗೆ ಏಕೆ ಮತ ಹಾಕಬಾರದು?

ಜೋಶಿ ಅವರು ರೈತ ಮತ್ತು ಬಡವರ ವಿರೋಧಿ. ಧಾರವಾಡಕ್ಕೆ ಮಂಜೂರಾದ ಐಐಟಿಯಲ್ಲೂ ಇವರ ಯೋಗದಾನಇಲ್ಲ. ಆದರೂ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಪಾಲಿಕೆ ಸದಸ್ಯರ ನಿಧಿಯ ಯೋಜನೆಗಳಿಗೂ ಇವರೇ ಗುದ್ದಲಿ ಪೂಜೆಗೆ ಹೋಗುತ್ತಾರೆ. ಆದರೆ ಸಂಸದರಾಗಿ ಕ್ಷೇತ್ರಕ್ಕೆ ತರಬಹುದಾಗಿದ್ದ ಯಾವ ಯೋಜನೆ ಮತ್ತು ಹಣವನ್ನೂ ತಂದಿಲ್ಲ. ಇದರೊಂದಿಗೆ ಸಮಾಜವನ್ನು ಒಡೆದು ಆಳುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡಿದ್ದಾರೆ. ಹೀಗಾಗಿ ಮೂರು ಬಾರಿ ಆಯ್ಕೆ ಆಗಿದ್ದಾರೆ.

* ಶಾಸಕರಾಗಿದ್ದಾಗಗೆಲ್ಲಲು ಸಾಧ್ಯವಾಗಿರಲಿಲ್ಲ? ಈಗ ಚುನಾವಣೆ ಗೆಲುವು ಸಾಧ್ಯವೇ?

ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಸಚಿವನಾಗುವುದನ್ನು ತಪ್ಪಿಸಿ, ಲೋಕಸಭೆಗೆ ಕಳುಹಿಸಲು ತಂತ್ರ ನಡೆದಿದೆ ಎಂದು ಬಿಜೆಪಿಯವರೇ ಅಪಪ್ರಚಾರ ಮಾಡಿದ್ದರು. ಹೀಗಾಗಿ ಕ್ಷೇತ್ರದಲ್ಲಿ ನನ್ನ ಗೆಲುವು ಬಯಸುವವರು ಅದನ್ನು ನಂಬಿದರು. ಆದರೆ ಈ ಬಾರಿ ಅಂಥ ಯಾವ ತಂತ್ರಗಾರಿಕೆಯೂ ನಡೆಯದು. ಶೇ 100ರಷ್ಟು ಗೆಲುವುದು ನಮ್ಮದೇ.

* ಮುಸ್ಲಿಮರಿಗೆಟಿಕೆಟ್ ತಪ್ಪಿದ್ದು ನಿಮಗೆ ಮುಳುವಾಗಲಿದೆಯೇ?

ಅಂಥ ಯಾವುದೂ ನನಗೆ ಮುಳುವಾಗದು. ಮುಸ್ಲಿಮರು ಸದಾ ನನ್ನೊಂದಿಗೆ ಇದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಬಾಗಲಕೋಟೆಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕರೆತಂದು ನಾಮಪತ್ರ ಹಾಕಿಸಿದ್ದಾರೆ. ಅವರಿಗೆ ಸೂಚಕರು ಇವರೇ ಆಗಿದ್ದಾರೆ.

* ಲಿಂಗಾಯತ ಹೋರಾಟದಿಂದ ಹಿಂದೆ ಸರಿದದ್ದುಏಕೆ? ಕಳೆದ ಚುನಾವಣೆಯಲ್ಲಿ ಅದು ಮುಳುವಾಯಿತೇ?

ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅದರಿಂದ ನನಗೆ ಯಾವುದೇ ಮುಳುವೂ ಆಗಿಲ್ಲ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದಾಗಿದೆ. ಹೀಗಾಗಿ ಹೋರಾಟದ ಒಂದು ಹಂತ ಪೂರ್ಣಗೊಂಡಿದೆ. ರಾಜಕೀಯ ಜೀವನದಲ್ಲಿರುವ ನಮಗೆ ಸೋಲು, ಗೆಲುವು ಸಾಮಾನ್ಯ. ಎದುರಿಸುವ ಗಟ್ಟಿ ಇದ್ದೇ ರಾಜಕಾರಣ ಮಾಡುತ್ತೇನೆ.

* ಜೆಡಿಎಸ್‌ ಜತೆಗಿನ ಮೈತ್ರಿ ನಿಮಗೆ ಎಷ್ಟರ ಮಟ್ಟಿಗೆ ನೆರವಾಗಲಿದೆ?

ನನ್ನ ಅಂದಾಜಿನಲ್ಲಿ 80ರಿಂದ 1 ಲಕ್ಷ ಮತಗಳು ನನಗೆ ಸಿಗಲಿವೆ.

* ಕಟ್ಟಡ ಕುಸಿದ ದುರಂತ ನಿಮ್ಮ ಗೆಲ್ಲುವಿಗೆ ತೊಡಕಾಗಲಿದೆಯೇ?

ಆ ದುರಂತ ನನಗೇಕೆ ಮುಳುವಾಗಲಿದೆ? ಪ್ರಹ್ಲಾದ ಜೋಶಿಗೆ ಬೇರೆ ಕೆಲಸವೇ ಇಲ್ಲ. ಅವರ ವಿರುದ್ಧ ಯಾರು ಸ್ಪರ್ಧಿಸುತ್ತಾರೋ ಅವರನ್ನು ವ್ಯವಸ್ಥಿತವಾಗಿ ಮುಗಿಸಲು ಒಂದು ತಂಡವನ್ನೇ ಕಟ್ಟಿಕೊಂಡಿದ್ದಾರೆ. ಬ್ಲಾಕ್‌ಮೇಲ್‌ ಮಾಡಲು, ವಕಾಲತು ಹಾಕಲು ಒಂದಷ್ಟು ಜನರನ್ನೇ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯೊಳಗಿರುವ ತಮಗಾಗದವರ ವಿರುದ್ಧವೂ ಇಂಥದ್ದೇ ಕಾರ್ಯತಂತ್ರ ಹೂಡುತ್ತಾ ಬಂದಿದ್ದಾರೆ. ಯಡಿಯೂರಪ್ಪ ವಿರುದ್ಧ ದಾಖಲೆ ಸಂಗ್ರಹಿಸಿ ಅವರನ್ನು ಮುಗಿಸಲು ಪ್ರಯತ್ನಿಸಿದ್ದು ಶೇ 100ರಷ್ಟು ಜೋಶಿ ತಂಡವೇ.

* ಜೋಶಿ ಅವರು ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನೀವು ಯಾರ ಹೆಸರಿನಲ್ಲಿ ಮತ ಕೇಳುತ್ತೀರಿ?

‘ಕನ್ಯೆ ನೋಡಲು ಹೋದವನು ನಮ್ಮಪ್ಪನ ನೋಡಿ ಕನ್ಯೆ ಕೊಡಿ ಎಂದನಂತೆ’ ಎಂಬುದು ಗ್ರಾಮೀಣ ಭಾಗದಲ್ಲಿನ ಒಂದು ಮಾತು. ಮತ ಕೇಳಲು ಜೋಶಿಗೆ ಯಾವುದೇ ನೈತಿಕತೆ ಇಲ್ಲ. ಹೀಗಾಗಿ ಮೋದಿ ಹೆಸರಿನಲ್ಲಿ ಕೇಳುತ್ತಿದ್ದಾರೆ.

* ನೀವು ಆರಿಸಿ ಬಂದರೆ ಆಸ್ತಿ, ಹಣ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ?

ನನ್ನ ಪಿತ್ರಾರ್ಜಿತ ಆಸ್ತಿ ಎಷ್ಟಿದೆ ಎಂಬುದು ಬಹುಶಃ ಅವರಿಗೆ ಗೊತ್ತಿಲ್ಲ ಎಂದೆನಿಸುತ್ತದೆ. ನಾನು ಶಾಸಕನಾಗುವ ಮೊದಲೇ ಮನೆ ಕಟ್ಟಿದ್ದೆ ಮತ್ತು ಹಾಲಿನ ಡೇರಿ ಆರಂಭಿಸಿದ್ದೆ. ನಮ್ಮ ಡೇರಿಯಲ್ಲಿರುವ ಎಮ್ಮೆ, ಆಕಳು ಕರುಗಳನ್ನು ಹಾಕುತ್ತಲೇ ಇರುತ್ತವೆ. ಮೂರು ಸಾವಿರ ಕುರಿಗಳಿವೆ. ಅವುಗಳೂ ಮರಿ ಹಾಕುತ್ತಿರುತ್ತವೆ. ಡೇರಿಯಿಂದ ನನ್ನ ಆದಾಯ ಹೆಚ್ಚಿದೆಯೇ ಹೊರತು ಮಂದಿ ಹಣದಿಂದಲ್ಲ. ಆದರೆ ಸಂಸದರಾದ ನಂತರ ಜೋಶಿ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಅವರ ದಾಖಲೆಯಿಂದಲೇ ತಿಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT