ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಕಳೆದುಕೊಂಡ ಹಣ ಮರಳಿ ಕೊಡಿಸುವುದಾಗಿ ಪಂಜಾಬಿನ ಸೈಬರ್ ಕ್ರೈಂ ಪೊಲೀಸ್ ಹೆಸರಲ್ಲಿ ನಗರದ ಅಮಿತ್ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದಲೇ ₹80,500 ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಅಮಿತ್ ಅವರು ಪಂಜಾಬಿನ ಅಮೃತಸರಕ್ಕೆ ತೆರಳಲು ಹೋಟೆಲ್ ಕಾಯ್ದಿರಿಸಲು ಗೂಗಲ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ, ಆ ವ್ಯಕ್ತಿಗೆ ₹2 ಸಾವಿರ ಫೋನ್–ಪೇ ಮಾಡಿದ್ದರು. ಅದಕ್ಕೆ ರಸೀದಿ ನೀಡಿಲ್ಲವೆಂದು ಪಂಜಾಬಿನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮತ್ತೆ ಗೂಗಲ್‌ನಲ್ಲಿ ನಂಬರ್ ಹುಡುಕಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪಂಜಾಬಿನ ಸೈಬರ್ ಕ್ರೈಂ ಪೊಲೀಸ್ ಎಂದು ಕರೆ ಮಾಡಿದ ವ್ಯಕ್ತಿ, ಹಣ ಮರಳಿ ಕೊಡಿಸುವುದಾಗಿ ಹೇಳಿ ಅವರ ಮೊಬೈಲ್‌ಗೆ ರಸ್ಟ್ ಡೆಸ್ಕ್ ಆ್ಯಪ್ ಅಳವಡಿಸಿಕೊಳ್ಳಲು ತಿಳಿಸಿದ್ದಾನೆ. ನಂತರ ಅವರ ಫೋನ್–ಪೇ ಯುಪಿಎನ್ ನಂಬರ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹1.49 ಲಕ್ಷ ವಚನೆ: ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿಸದಿದ್ದರೆ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ಧಾರವಾಡ ದೇಸಾಯಿಗಲ್ಲಿಯ ಶ್ರೀರಂಗ ಎಸ್. ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ₹1.49 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಶ್ರೀರಂಗ ಅವರಿಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶಾಖೆ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ ವಂಚಕ, ಬಾಕಿ ಹಣ ಪಾವತಿಸಲು ಹೇಳಿದ್ದಾನೆ. ಕಾರ್ಡ್ ಬಳಸದಿದ್ದರೂ ಬಾಕಿ ಮೊತ್ತ ಹೇಗೆ ತೋರಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಅದಕ್ಕೆ, ಕಾರ್ಡ್ ಬ್ಲಾಕ್ ಮಾಡುವುದಾಗಿ ಬೆದರಿಸಿದ ವಂಚಕ ಅವರಿಂದ ಕ್ರೆಡಿಟ್ ಕಾರ್ಡ್ ನಂಬರ್, ಸಿಸಿವಿ ನಂಬರ್ ಹಾಗೂ ಮುಕ್ತಾಯ ದಿನಾಂಕದ ಮಾಹಿತಿ ಪಡೆದಿದ್ದಾನೆ. ನಂತರ, ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ, ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಓಎಲ್‌ಎಕ್ಸ್‌ನಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲೆಂದು ಅದರಲ್ಲಿ ಜಾಹೀರಾತು ನೀಡಿದ ವ್ಯಕ್ತಿಗೆ ₹95 ಸಾವಿರ ವರ್ಗಾಯಿಸಿದ ನಗರದ ಹರಿಶಂಕರ ಪಿ.ವಿ. ಅವರಿಗೆ, ವಸ್ತುಗಳನ್ನು ಕಳುಹಿಸದೆ ವಂಚಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ಇಲ್ಲಿನ ಸಂತೋಷನಗರದ ನಾಗರಾಜ ಕೆ. ಅವರ ಮನೆ ಬಾಗಿಲು ಮುರಿದು, ₹1.09 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.