ಶುಕ್ರವಾರ, ಫೆಬ್ರವರಿ 28, 2020
19 °C

ಬೆಳಗಾವಿಯಿಂದ ಬೆಂಗಳೂರಿಗೆ ಪ್ರತಿಭಟನಾ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ಪರ ಸಂಘಟನೆಗಳ ಒಕ್ಕೂಟವು ಫೆ. 15ರಿಂದ 18ರವರೆಗೆ ನಾಲ್ಕು ದಿನ ಬೆಳಗಾವಿಯಿಂದ ಬೆಂಗಳೂರಿನವರೆಗೆ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿದೆ.

‘15ರಂದು ಬೆಳಿಗ್ಗೆ 10ಕ್ಕೆ ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ, ರ‍್ಯಾಲಿ ಆರಂಭಗೊಳ್ಳಲಿದೆ’ ಎಂದು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಡಾ. ವಿಶ್ವನಾಥ ಜಿ.ಪಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಹದಾಯಿ ಯೋಜನೆ ಜಾರಿ, ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆ, ಕನ್ನಡಿಗರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 80ರಷ್ಟು ಮೀಸಲಾತಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ, ಔರಾದ್ಕಾರ ವರದಿ ಜಾರಿ, ಕನ್ನಡದಲ್ಲಿ ನಾಮಫಲಕಗಳ ಕಡ್ಡಾಯಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು, ಹುಬ್ಬಳ್ಳಿ ನಿಲ್ದಾಣಕ್ಕೆ ರಾಣಿ ಚನ್ನಮ್ಮ, ಕಲಬುರ್ಗಿ ನಿಲ್ದಾಣಕ್ಕೆ ಬಸವಣ್ಣ, ಮಂಗಳೂರು ನಿಲ್ದಾಣಕ್ಕೆ ರಾಣಿ ಅಬ್ಬಕ್ಕ, ಮೈಸೂರು ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಮಕರಣ ಮಾಡಬೇಕು. ಅದೇ ರೀತಿ, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ, ತುಮಕೂರು ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದೇವರ ಹೆಸರಿಡಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ನಾಮಕರಣ ಮಾಡಬೇಕು ಎಂಬ ಬೇಡಿಕೆಗಳನ್ನು ಒಕ್ಕೂಟ ಸರ್ಕಾರದ ಮುಂದಿಡಲಿದೆ. 18ರಂದು ರ‍್ಯಾಲಿ ಬೆಂಗಳೂರು ತಲುಪಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.

ಕರ್ನಾಟಕ ಸಂಗ್ರಾಮ ಸೇನೆಯ ಸಂಜು ಧುಮ್ಮಕನಾಳ ಮಾತನಾಡಿ, ’ರ‍್ಯಾಲಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿವೆ. ಆಯ್ದ ಸ್ಥಳಗಳಲ್ಲಿ ಪಾದಯಾತ್ರೆ ನಡೆಸಿದರೆ, ಉಳಿದಂತೆ ವಾಹನಗಳಲ್ಲಿ ರ‍್ಯಾಲಿ ಸಾಗಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಬಸವರಾಜ ಮಲ್ಕಾರೆ, ಮಂಜುನಾಥ, ಶಂಕರ, ವಿಜಯ ಹಾಗೂ ಪುಷ್ಪಾ ಹಿರೇಮಠ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)