ಹುಬ್ಬಳ್ಳಿ: ಕಿಮ್ಸ್ ಬಳಿ ಇರುವ ಗಾಂಧೀಜಿ ಪ್ರತಿಮೆಯ ಆವರಣ ಶನಿವಾರ ಮಾಲಾರ್ಪಣೆ ಕಾರ್ಯಕ್ರಮ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ಸಾಕ್ಷಿಯಾಯಿತು. ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳುಗಾಂಧಿ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡುತ್ತಿದ್ದರೆ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್‌ನವರು ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಥಳಕ್ಕೆ ಬರುತ್ತಿದ್ದಂತೆ, ಕಾಂಗ್ರೆಸ್‌ನವರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಸ್ಥಳದಿಂದ ತೆರಳುವವರೆಗೂ ಘೋಷಣೆಗಳು ಮುಂದುವರಿದವು.
‘ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದು ಕಾಂಗ್ರೆಸ್. ಖಾಸಗಿಯವರಿಗೆಕೇಂದ್ರ ಸರ್ಕಾರ ಈಗ ಮಾರಾಟ ಮಾಡುತ್ತಿರುವ ಸರ್ಕಾರಿಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದು ನಮ್ಮ ಪಕ್ಷ ಎಂಬುದನ್ನು ಬಿಜೆಪಿ ಅರಿಯಬೇಕು’ ಎಂದು ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿದರು.
ಅಸಮಾಧಾನ:‘ಪಾಲಿಕೆ ಚುನಾವಣೆ ಬಳಿಕ ಪಕ್ಷದಲ್ಲಿ ಕೆಲವರು ನನ್ನ ವಿರುದ್ದ ತಿರುಗಿ ಬಿದ್ದಿದ್ದಾರೆ. ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಬ್ಯಾನರ್‌ನಲ್ಲೂ ಫೊಟೊ ಹಾಕದ ಮಟ್ಟಕ್ಕಿಳಿದಿದ್ದಾರೆ. ಆದರೆ, ಚುನಾವಣೆಯಲ್ಲಿ ನಿಜವಾಗಿ ಆಗಿದ್ದೇನು ಎಂಬುದನ್ನು ಅರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನಗೆ ಬೆಂಬಲ ನೀಡಿದ್ದಾರೆ.ನಮ್ಮ ಸಣ್ಣತನಗಳನ್ನು ಬಿಡೋಣ. ಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರರ ಬೆಂಬಲ ನಮಗಿದೆ. ಮೇಯರ್– ಉಪ ಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ’ ಎಂದರು.
ಮುಖಂಡ ಎಂ.ಎಸ್. ಹಿಂಡಸಗೇರಿ ಮಾತನಾಡಿ, ‘ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿರಲಿಲ್ಲ. ಸುಳ್ಳಿಗಾಗಿ ನೊಬೆಲ್ ಪ್ರಶಸ್ತಿ ಕೊಡುವುದಾದರೆ, ಮೊದಲು ಮೋದಿಗೆ ಅವರಿಗೆ ನೀಡಬೇಕು. ಇಂತಹ ಸುಳ್ಳುಗಳಿಂದಾಗಿಯೇ ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಭಾಷಣ ಕೇಳಲು ಜನ ಇರಲಿಲ್ಲ’ ಎಂದು ವ್ಯಂಗ್ಯವಾಡಿದರು.
ದೇಶ ಹಿಂದಕ್ಕೆ:ಯುವ ಕಾಂಗ್ರೆಸ್ ಮುಖಂಡ ಮೊಹಮದ್ ನಲಪಾಡ್ ‘ಪ್ರಧಾನಿ ಮೋದಿ ಅವರು ಏಳು ವರ್ಷದಲ್ಲಿ ದೇಶವನ್ನು ಇಪತ್ತು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ಮೂರು ವರ್ಷ ಏನೇನಾಗಲಿದೆಯೊ ದೇವರ ಬಲ್ಲ. ₹400 ಇದ್ದ ಅಡುಗೆ ಅನಿಲ ದರ ಈಗ ₹950 ಆಗಿದೆ. ಪೆಟ್ರೋಲ್ ನೂರರ ಗಡಿ ದಾಟಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶದ ಹಿತಕ್ಕಾಗಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು
ಶಾಸಕ ಪ್ರಸಾದ ಅಬ್ಬಯ್ಯ, ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ,ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್, ಮುಖಂಡರಾದ ಷಾಜಮಾನ್ ಮುಜಾಹೀದ್, ರಾಬರ್ಟ್ ದದ್ದಾಪುರಿ, ಸ್ವಾತಿ ಮಾಳಗಿ, ನಾಗರಾಜ ಗೌರಿ, ಸಂದೀಲ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.
ಒಳ್ಳೆಯದ್ದಕ್ಕೂ ಮುಂಚೆ ಕೆಟ್ಟದ್ದಾಗುತ್ತೆ: ನಲಪಾಡ್
‘ಒಳ್ಳೆಯದು ಆಗುವುದಕ್ಕೂ ಮುಂಚೆ ಕೆಟ್ಟದ್ದು ಆಗುತ್ತದೆ. ನನ್ನನ್ನು ಲೀಡರ್ ಮಾಡುವುದಕ್ಕಾಗಿಯೂ ದೇವರು ಇಂತಹದ್ದೊಂದು ಸ್ಥಿತಿ ನಿರ್ಮಿಸಿದ್ದ ಎನಿಸುತ್ತದೆ. ರಕ್ಷಾ ರಾಮಯ್ಯ ಜನವರಿವರೆಗೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರಲಿದ್ದಾರೆ. ಬಳಿಕ, ನಾನು ವಹಿಸಿಕೊಳ್ಳುವೆ.ತಾಂತ್ರಿಕ ದೋಷದಿಂದ ಅಂತಹದ್ದೊಂದು ಗೊಂದಲ ಸೃಷ್ಟಿಯಾಗಿತ್ತು. ನನಗೆ ಅಧ್ಯಕ್ಷ ಹುದ್ದೆ ಕೊಟ್ಟರೂ, ಕೊಡದಿದ್ದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವೆ’ ಎಂದು ಪ್ರಶ್ನೆಯೊಂದಕ್ಕೆ ನಲಪಾಡ್ ಪ್ರತಿಕ್ರಿಯಿಸಿದರು.
‘ಮತಾಂತರ ಕಾಯ್ದೆ ಹೆಸರಿನಲ್ಲಿ ಬಿಜೆಪಿ ಸಮಾಜವನ್ನು ಒಡೆಯಲು ಮುಂದಾಗಿದೆ. ನಾವೆಲ್ಲಾ ಭಾರತೀಯರು ಎಂಬುದಷ್ಟೇ ಮುಖ್ಯ. ದೇಶ ಮೊದಲು, ಧರ್ಮ ನಂತರ ಎಂಬುದನ್ನು ಬಿಜೆಪಿ ಅರಿಯಬೇಕು’ ಎಂದರು.
ಪ್ರತಿಭಟಿಸುವುದನ್ನು ಕಲಿತ ಕಾಂಗ್ರೆಸ್: ಜೋಶಿ ವ್ಯಂಗ್ಯ
ಕಾಂಗ್ರೆಸ್ ಸತ್ಯಾಗ್ರಹದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಕಾಂಗ್ರೆಸ್‌ನವರು ಬಹಳ ದಿನಗಳ ನಂತರ ಪ್ರತಿಭಟನೆ ಮಾಡುವುದನ್ನು ಕಲಿತಿದ್ದಾರೆ. ವಿರೋಧ ಪಕ್ಷದಲ್ಲಿದ್ದೇವೆ ಎಂಬ ಅರಿವು ಈಗ ಬಂದಿದೆ’ ಎಂದು ವ್ಯಂಗ್ಯವಾಡಿದರು.
‘50 ವರ್ಷಗಳ ಹಿಂದೆ ದೇಶದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಧಿಕಾರದುದ್ದಕ್ಕೂ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮಹಾನ್ ಭ್ರಷ್ಟಾಚಾರ ಮಾಡಿದೆ. ನಮ್ಮ ಸರ್ಕಾರ ಎಲ್ಲಾ ಕಡೆ ಪಾರದರ್ಶಕತೆ ತಂದಿದೆ.ದೇಶ ತುಕಡೆ ತುಕಡೆ ಮಾಡುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್‌ನವರು, ಈಗ ಬಿಜೆಪಿ ತುಕಡೆ ಮಾಡುತ್ತೇವೆ ಅನ್ನುತ್ತಿದ್ದಾರೆ. ಅದು ನಡೆಯುವುದಿಲ್ಲ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.