ಹುಬ್ಬಳ್ಳಿ: ‘ಸರ್ಕಾರದಿಂದ ನಡೆಸುವ ಏಕೈಕ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ ಇದಾಗಿದೆ. ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಗುರುಶಿಷ್ಯ ಪರಂಪರೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ಸಂಗೀತ ಕಲಾಸಂಸ್ಕೃತಿ ಉಳಿಸಿ–ಬೆಳೆಸುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದು ಸಂಗೀತ ವಿದ್ಯಾರ್ಥಿ ಮಹೇಶ ಹುಂಡೇಕರ ಹೇಳಿದರು.
ಗಂಗೂಬಾಯಿ ಹಾನಗಲ್ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿ ಕೇಂದ್ರವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿರುವುದನ್ನು ಖಂಡಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಸಂಘಟನೆ ಗುರುಕುಲದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಲ್ಕು ವರ್ಷದ ಗುರುಶಿಷ್ಯ ಪರಂಪರೆಯ ಸಂಗೀತ ಕಲಿಕೆಯಲ್ಲಿ ಕರ್ನಾಟಕ ಸೇರಿದಂತೆ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯದಿಂದ ಬಂದ 19 ವಿದ್ಯಾರ್ಥಿಗಳು ಇದ್ದಾರೆ. ಎರಡು ವರ್ಷ ಮುಗಿದಿದ್ದು, ಈಗ ಏಕಾಏಕಿ ಗುರುಕುಲದಿಂದ ಹೊರಹೋಗಲು ಹೇಳುತ್ತಿದ್ದಾರೆ. 20 ದಿನಗಳಿಂದ ಊಟ, ಉಪಹಾರ, ನೀರು ಸಹ ಕೊಡುತ್ತಿಲ್ಲ. ಅಕ್ಕಪಕ್ಕದ ನಿವಾಸಿಗಳು ಊಟ ತಂದು ಕೊಡುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಸ್ಥಗಿತಗೊಳಿಸುತ್ತಾರೆ. ಮುಂದೇನು ಎನ್ನುವ ಆತಂಕ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.
‘ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳು ಬಂದಿದ್ದು, ಗುರುಕುಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇಲ್ಲಿಯೇ ಸಂಗೀತಾಭ್ಯಾಸ ಮಾಡಬೇಕು ಎಂದರೆ ಮೈಸೂರು ವಿಶ್ವವಿದ್ಯಾಲಯದಿಂದ ಪ್ರವೇಶ ಪಡೆಯಬೇಕು ಎನ್ನುತ್ತಾರೆ. ‘ಸರ್ಕಾರದ ನಿರ್ಧಾರ ಬರುವವರೆಗೆ ವಿದ್ಯಾರ್ಥಿಗಳು ಇಲ್ಲಿಯೇ ಇರಲಿ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅವರು ಹೇಳಿದ್ದರಿಂದ ಉಳಿಯಲಷ್ಟೇ ಅವಕಾಶ ನೀಡಿದ್ದಾರೆ’ ಎಂದರು.
‘ಸಂಗೀತ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಗುರುಗಳಿಂದ ಸಂಗೀತ ಕಲಿಯುವುದೇ ದೊಡ್ಡ ಹೆಮ್ಮೆ. ನಾವ್ಯಾರೂ ಪ್ರಮಾಣಪತ್ರಕ್ಕಾಗಿ ಇಲ್ಲಿ ಬಂದಿಲ್ಲ. ಸಂಗೀತ ಜ್ಞಾನಕ್ಕಾಗಿ ಬಂದಿದ್ದೇವೆ. ಸಂಗೀತ ಗುರುಗಳಿಗೆ ಗೌರವ ಸಂಭಾವನೆ ನೀಡದೆ ಅವಮಾನ ಮಾಡಿ ಹೊರಹಾಕಿದ್ದಾರೆ. ಗುರುಕುಲ ಮಾದರಿಯಲ್ಲಿ ದೊರೆಯುವ ಶಾಸ್ತ್ರೀಯ ಸಂಗೀತ ರದ್ದು ಮಾಡದಂತೆ ಮುಖ್ಯಮಂತ್ರಿಯವರಿಗೆ ಮನವಿ ಸಹ ನೀಡಿದ್ದೇವೆ. ಮೇ ತಿಂಗಳ ರಜೆ ಮುಗಿಸಿ ವಾಪಸ್ ಬಂದಾಗ, ರಜೆ ವಿಸ್ತರಿಸಲಾಗಿದ ಎಂದು, ಮೂರು ತಿಂಗಳು ವಿಸ್ತರಿಸಿದರು. ಈಗ ಗುರುಕುಲ ಬಿಟ್ಟು ಹೋಗಿ ಎನ್ನುತ್ತಿದ್ದಾರೆ’ ಎಂದು ಝೀ ವಾಹಿನಿಯ 2019ರ ಸೀಜನ್ 16 ವಿನ್ನರ್, ಗುರುಕುಲ ವಿದ್ಯಾರ್ಥಿ ಓಂಕಾರ ಪತ್ತಾರ ಹೇಳಿದರು.
ಸಂಗೀತ ವಿದ್ಯಾರ್ಥಿನಿ ಕಲಬುರ್ಗಿಯ ಸೌಖ್ಯಶ್ರೀ ಕುಲಕರ್ಣಿ, ‘ಸಂಗೀತದಲ್ಲಿ ಪದವಿ ಪಡೆದಿದ್ದು, ಗುರುಶಿಷ್ಯ ಪರಂಪರೆಯ ಸಂಗೀತ ಕಲಿಕೆಗೆ ಬಂದಿದ್ದೆ. ನನ್ನ ಜೊತೆ ಆರು ಮಂದಿ ಹುಡುಗಿಯರು ಇದ್ದಾರೆ. ಗುರುಕುಲ ಟ್ರಸ್ಟ್ ಮೈಸೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾಗಿದೆ ಎಂದು ನಮಗೆ ಪತ್ರ ನೀಡಿ ಸಹಿ ಹಾಕಿಸಿಕೊಂಡಿದ್ದಾರೆ. ಆಡಳಿತ ಮಂಡಳಿ ರದ್ದು ಪಡಿಸಿ, ವಿಶ್ವವಿದ್ಯಾಲಯ ಉಸ್ತುವಾರಿ ಅಧಿಕಾರಿಯನ್ನು ನೇಮಕ ಮಾಡಿದೆ. ಪಾಲಕರಲ್ಲಿ ಆತಂಕ ಕಾಡುತ್ತಿದ್ದು, ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ’ ಎಂದರು.
ಎಚ್ಚರಿಕೆ ಆಕ್ರೋಶ
ಪ್ರತಿಭಟನಾಕಾರರ ಮನವಿ ಆಲಿಸಲು ಶಹರ ತಹಶೀಲ್ದಾರ್ ಕಲಗೌಡ ಪಾಟೀಲ ಸ್ಥಳಕ್ಕೆ ಬಂದು ಮನವಿ ಪತ್ರ ನೀಡುವಂತೆ ವಿನಂತಿಸಿದರು. ‘ಗುರುಕುಲ ಟ್ರಸ್ಟ್ ಜಿಲ್ಲಾಡಳಿತದ ಅಡಿಯಲ್ಲಿ ಇರುವುದರಿಂದ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಶಕ್ತಿ ತೋರಿಸುತ್ತೇವೆ’ ಎಂದು ಎಚ್ಚರಿಸಿ ಹತ್ತು ನಿಮಿಷ ಅವಕಾಶ ನೀಡುವುದಾಗಿ ಹೇಳಿದರು. ಅಷ್ಟಾದರೂ ಜಿಲ್ಲಾಧಿಕಾರಿ ಬರದಿರುವುದನ್ನು ಗಮನಿಸಿ ಗೇಟ್ ಹಾರಿ ಒಳಗೆ ನುಗ್ಗಲು ಯತ್ನಿಸಿದರು. ಭದ್ರತೆಯಲ್ಲಿದ್ದ ಪೊಲೀಸರು ತಡೆಯೊಡ್ಡಿದರು. ನಂತರ ಜಿಲ್ಲಾಧಿಕಾರಿ ದಿವ್ಯಪ್ರಭು ದೂರವಾಣಿ ಮೂಲಕ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.
‘ವಿದ್ಯಾರ್ಥಿಗಳ ಸಮಸ್ಯೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಉನ್ನತ ಶಿಕ್ಷಣ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಪತ್ರ ವ್ಯವಹಾರ ಹಾಗೂ ಚರ್ಚೆ ನಡೆಸುತ್ತಿದೆ. ಶೀಘ್ರವೇ ಸಭೆ ನಡೆಯಲಿದ್ದು ಸಕಾರಾತ್ಮಕ ಪರಿಹಾರ ಸಿಗಲಿದೆ’ ಎಂದು ಭರವಸೆ ನೀಡಿದರು. ‘ಮಂಗಳವಾರ ಬೆಳಿಗ್ಗೆ ನಗರದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವಿದ್ದು ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ. ಅವರಿಗೆ ಇಲ್ಲಿಯ ವಿಷಯ ತಿಳಿಸಿ ಗುರುಕುಲಕ್ಕೆ ಭೇಟಿ ಮಾಡಿಸುತ್ತೇನೆ. ಸರ್ಕಾರದಿಂದ ನಿರ್ಧಾರ ಬರುವವರೆಗೂ ವಿದ್ಯಾರ್ಥಿಗಳಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗುವುದು’ ಎಂದು ಶಹರ ತಹಶೀಲ್ದಾರ್ ಕಲಗೌಡ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.