ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆ, ಆತಂಕಗೊಂಡ ನಿವಾಸಿಗಳು

Last Updated 8 ಫೆಬ್ರುವರಿ 2021, 11:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಹಳೆ ಬದಾಮಿ ನಗರದ ಒಂದನೇ ಕ್ರಾಸ್ ಬಳಿ‌ ಸೋಮವಾರ ಮಧ್ಯಾಹ್ನ ಅದಾನಿ ಗ್ಯಾಸ್ ಪೈಪ್ ಲೈನ್ ಒಡೆದು, ಅನಿಲ‌ ಸೋರಿಕೆಯಾದ ಪರಿಣಾಮ ಸುತ್ತಲಿನ ನಿವಾಸಿಗಳು ಕೆಲ ಕಾಲ ಆತಂಕಗೊಂಡಿದ್ದರು.

ಮೂರ್ನಾಲ್ಕು‌ ತಿಂಗಳಿನಿಂದ ಬದಾಮಿ ನಗರದಲ್ಲಿ ಒಳ ಚರಂಡಿಯ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ಮಣ್ಣನ್ನು ಅಗೆಯುವಾಗ ಗ್ಯಾಸ್ ಪೈಪ್ ಲೈನ್ ಒಡೆದಿದೆ. ಪರಿಣಾಮ ಸುಮಾರು ಅರ್ಧ ಗಂಟೆ ಕಾಲ ಗ್ಯಾಸ್ ಸೋರಿಕೆಯಾಗಿದೆ. ಅದನ್ನು ನೋಡಿದ ಸ್ಥಳೀಯರು ಗ್ಯಾಸ್ ಏಜೆನ್ಸಿಯವರಿಗೆ ಕರೆ ಮಾಡಿ, ಗ್ಯಾಸ್ ಸೋರಿಕೆಯನ್ನು ನಿಲ್ಲಿಸಿದ್ದಾರೆ.

'ಮಾರುಕಟ್ಟೆಗೆ ಹೋಗಿ ಮನೆಗೆ ಮರಳುತ್ತಿರುವಾಗ ದೊಡ್ಡ ಶಬ್ಧದೊಂದಿಗೆ ಪೈಪ್ ಲೈನ್'ನಿಂದ ಗ್ಯಾಸ್ ಸೋರಿಕೆಯಾಗುತ್ತಿತ್ತು. ಕೂಡಲೇ ಸುತ್ತಲಿನ ನಿವಾಸಿಗಳ ಮನೆಗೆ ತೆರಳಿ, ಸಂಪರ್ಕ ಕಲ್ಪಿಸಿರುವ ಗ್ಯಾಸ್ ವಾಲ್'ನ್ನು ಬಂದ್ ಮಾಡಲು ತಿಳಿಸಿದೆ' ಎಂದು ಪ್ರತ್ಯಕ್ಷದರ್ಶಿ, ಸ್ಥಳೀಯ ನಿವಾಸಿ ವೀಣಾ ಅಣ್ವೇಕರ ತಿಳಿಸಿದರು.

'ಭಾನುವಾರ ಸಂಜೆ‌ ಸಹ ಇದೇ ಸ್ಥಳದಲ್ಲಿ‌ ಪೈಪ್ ಲೈನ್'ನಿಂದ ಗ್ಯಾಸ್ ಸೋರಿಕೆ ಆಗುತ್ತಿತ್ತು. ಅದಾನಿ ಗ್ಯಾಸ್ ಸಿಬ್ಬಂದಿ ಬಂದು ಪೈಪ್ ಲೈನ್‌ ಸರಿಪಡಿಸಿದ್ದರು. ಇವತ್ತು ಅದೇ ಜಾಗದ ಪಕ್ಕದಲ್ಲಿರುವ ಮೇನ್ ಪೈಪ್ ಲೈನ್'ನಿಂದ ಗ್ಯಾಸ್ ಸೋರಿಕೆಯಾಗುತ್ತಿದೆ' ಎಂದು ಮನೋಹರ ಎಸ್.ಎಂ. ಆತಂಕ ವ್ಯಕ್ತಪಡಿಸಿದರು.
‌ಸ್ಥಳಕ್ಕೆ ಬಂದ ಅದಾನಿ ಗ್ಯಾಸ್ ಪೈಪ್ ಲೈನ್‌ನ ವಲಯ ಮೇಲ್ವಿಚಾರಕ ಸಾಗರ ಜಿ.ಬಿ‌, ಪೈಪ್ ಲೈನ್ ಸಂಪರ್ಕ ಇರುವ ಮೇನ್ ವಾಲ್'ನ್ನು ಬಂದ್ ಮಾಡಲು ಸಿಬ್ಬಂದಿಗೆ‌ ಸೂಚಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.

ನಂತರ ಮಾತನಾಡಿದ ಅವರು, 'ಬದಾಮಿ ನಗರದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ, ಐದಾರು‌ ಕಡೆ ಪೈಪ್ ಲೈನ್ ಒಡೆದಿದ್ದು, ಮರು ಜೋಡಿಸಿದ್ದೇವೆ. ಅನಾಹುತ ಆಗುವಷ್ಟು ಪ್ರಮಾಣದಲ್ಲಿ ಪೈಪ್ ಲೈನ್'ನಲ್ಲಿ ಗ್ಯಾಸ್ ಇರುವುದಿಲ್ಲ. ಸೋರಿಕೆ ಜಾಗದಲ್ಲಿ ಬೆಂಕಿ ತಾಗಿದರೆ ಮಾತ್ರ ಅಪಾಯ. ಈ ಭಾಗದಲ್ಲಿ ಸುಮಾರು 500 ಮನೆಗಳಿಗೆ ಗ್ಯಾಸ್ ಸಂಪರ್ಕ‌ ಕಲ್ಪಿಸಿದ್ದೇವೆ. ಸಮಸ್ಯೆ ಎದುರಾದರೆ ನಮ್ಮನ್ನು ಸಂಪರ್ಕಿಸುವಂತೆಯೂ ಹೇಳಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT