ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಸಭಾ ಚುನಾವಣೆ: ದ್ವೇಷಾಧಾರಿತ ರಾಜಕಾರಣ ನಡೆಯಲ್ಲ –ಮುಖ್ಯಮಂತ್ರಿ ಬೊಮ್ಮಾಯಿ

ಸಾಧನೆ ಮುಂದಿಟ್ಟು ಮತಯಾಚನೆ: ಮುಖ್ಯಮಂತ್ರಿ ಬೊಮ್ಮಾಯಿ
Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕರ್ನಾಟಕದಲ್ಲಿ ವ್ಯಕ್ತಿ ಅಥವಾ ದ್ವೇಷಾಧಾರಿತ ರಾಜಕಾರಣ ನಡೆಯುವುದಿಲ್ಲ. ವಿಷಯಾಧಾರಿತ ಹಾಗೂ ಅಭಿವೃದ್ಧಿಯಾಧಾರಿತವಾಗಿ ನಡೆಯುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡರು ಯಾವುದೇ ಟೀಕೆ, ಟಿಪ್ಪಣಿ ಮಾಡದೆ ಸಾಧನೆಗಳನ್ನು ಮುಂದಿಟ್ಟು‌ ಮತ ಕೇಳುತ್ತಿದ್ದಾರೆ. ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್‌ಗೆ ಚುನಾವಣೆ ಎದುರಿಸಲು ಕಷ್ಟವಾಗುತ್ತಿದೆ. ಇಲ್ಲ ಸಲ್ಲದ ಆರೋಪ ಮಾಡುತ್ತ, ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಕಾರ್ಯಕರ್ತರಲ್ಲಿ ಮತ್ತಷ್ಟು ಶಕ್ತಿ ತುಂಬಲು ಕೇಂದ್ರ ಗೃಹಸಚಿವ ಅಮಿತ್‌ ಶಾ ಪ್ರವಾಸ ಕೈಗೊಂಡಿದ್ದರು’ ಎಂದರು.

ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಯಾವ ಕ್ಷೇತ್ರಕ್ಕೂ, ಯಾರ ಹೆಸರನ್ನೂ ಅಧಿಕೃತವಾಗಿ ಅಂತಿಮಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜನಪರ ಬಜೆಟ್‌: ಪ್ರಸಕ್ತ ವರ್ಷದ ಬಜೆಟ್ ದುಡಿಯುವವರ, ಜನರ, ರೈತರ ಪರವಾಗಿರಲಿದೆ. ಶಿಗ್ಗಾವಿ, ಸವಣೂರ ಕ್ಷೇತ್ರಗಳ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡನೆಯಾಗಲಿದೆ ಎಂದು ಶಿಗ್ಗಾವಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿದ ನಂತರ ಅವರು ಹೇಳಿದರು.

‘ರಾಜ್ಯದ ಹಣಕಾಸಿನ ಪರಿಸ್ಥಿತಿ ಸದ್ಯ ಸುಧಾರಿಸಿದೆ. ಈ ಹಿಂದಿನ ಆಡಳಿತಗಳ ಸಾಲ ತೀರಿಸುವ ಹೊಣೆಗಾರಿಕೆಯೊಂದಿಗೆ, ಅಭಿವೃದ್ಧಿಯ ನೊಗವೂ ಹೊರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕೆ ಹೋಲಿಸಿದರೆ ಆಶಾದಾಯಕವಾಗಿದೆ’ ಎಂಬ ಭರವಸೆ ನೀಡಿದರು.

ಭಿನ್ನಮತ ಮರೆತು ಗೆಲುವಿಗೆ ತಂತ್ರ ರೂಪಿಸೋಣ’

ಬೆಳಗಾವಿ: ‘ನಾನು ಮತ್ತೊಮ್ಮೆ ಬೆಳಗಾವಿಗೆ ಬರುವೆ. ಅಷ್ಟರಲ್ಲಿ ಎಲ್ಲ ಭಿನ್ನಮತ ಮುಗಿದಿರಬೇಕು. ಬೆಂಗಳೂರು ಹೊರತುಡಿಸಿದರೆ ಬೆಳಗಾವಿಯಲ್ಲೇ ಹೆಚ್ಚು ಕ್ಷೇತ್ರಗಳು ಇವೆ. ಎಲ್ಲ 18 ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು. ಇದು ಎಲ್ಲರೂ ಒಂದಾಗಿದ್ದರೆ ಸಾಧ್ಯ. ಗೆಲುವಿಗೆ ಬೇಕಾದ ತಂತ್ರ ರೂಪಿಸೋಣ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಯುಕೆ–27 ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಈಗ 13 ಸೀಟ್‌ ಗೆದ್ದಿದ್ದೇವೆ. ಉಳಿದ ಕ್ಷೇತ್ರಗಳನ್ನೂ ಗೆಲ್ಲುವುದು ಕಷ್ಟವಲ್ಲ. ಬದಲಾವಣೆ ಹಾಗೂ ಗೆಲುವಿನ ಸಾಧ್ಯತೆಗಳ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು’ ಎಂಬುದಾಗಿಯೂ ಅವರು ಸೂಚನೆ ನೀಡಿದರು ಎಂದು ಮುಖಂಡರೊಬ್ಬರು ತಿಳಿಸಿದರು.

ಈ ಸಭೆಗೆ ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳನ್ನೂ ಆಹ್ವಾನಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT