ಹುಬ್ಬಳ್ಳಿ: ನಗರದ ತೋಳನಕೆರೆ ಬಳಿ ಬುಧವಾರ ಗುತ್ತಿಗೆದಾರ ಮೋಹನ ಚವ್ಹಾಣ್ ಅವರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟದ್ದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ದಳವಾಯಿ ಸೇರಿ ಹತ್ತು ಮಂದಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕ್ರೂಸರ್ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.

ಕೃಷ್ಣಪ್ಪ ಬಡಿಗೇರ, ನಾಜೀರಸಾಬ್ ನದಾಫ್, ರುದ್ರಪ್ಪ ಭಜಂತ್ರಿ, ಶಂಕರ ಹಿರೇಮೇಸ್ತ್ರಿ, ನಜೀರ್ ಮಕಾಂದಾರ, ಹನುಮಂತ ಕಲಕುಂಡ್ರ, ಚನ್ನಪ್ಪ, ಶೇಖಪ್ಪ ಕಲವಡ್ಡರ, ಭೀಮಪ್ಪ ಕಲವಡ್ಡರ ಬಂಧಿತರು. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆಗೆ ತಂಡ ರಚಿಸಲಾಗಿದೆ.

ಆರೋಪಿ ಬಸವರಾಜನನ್ನು ಧಾರವಾಡದ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆ.ಸಿ. ಪಾರ್ಕ್ ಬಳಿ ಹಾಗೂ ಉಳಿದ ಆರೋಪಿಗಳನ್ನು ಹುಬ್ಬಳ್ಳಿ–ಧಾರವಾಡ ಬೈಪಾಸ್ನ ತಾರಿಹಾಳ ಸೇತುವೆ ಅಕ್ಕಪಕ್ಕ ಬಂಧಿಸಲಾಗಿದೆ. ಅಪಹರಣಕ್ಕೊಳಗಾದ ಗುತ್ತಿಗೆದಾರ ಮೋಹನ ಅವರನ್ನು ಬೆಳಗಾವಿಯ ಬೈಲಹೊಂಗಲದ ಮುರಗೋಡ ಗ್ರಾಮದಲ್ಲಿ ರಕ್ಷಿಸಲಾಗಿದೆ.

ಕೆ.ಸಿ. ಪಾರ್ಕ್ ಹಾಗೂ ತಾರಿಹಾಳ ಬಳಿ ಆರೋಪಿಗಳ ವಾಹನ ತಡೆಯಲು ಯತ್ನಿಸಿದಾಗ, ಪೊಲೀಸ್ ಸಿಬ್ಬಂದಿ ಮೇಲೆ ಹಾಯಿಸಿಕೊಂಡು ಹೋಗಲು ಯತ್ನಿಸಿದ್ದರು. ಈ ಕುರಿತು ಎರಡು ಪ್ರಕರಣ ಹಾಗೂ ಅಪಹರಣಕ್ಕೆ ಸಂಬಂಧಿಸಿ ಒಂದು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು. ವಾಹನದ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

‘ನಾಲ್ಕು ವರ್ಷದ ಹಿಂದೆ ಅಶೋಕನಗರದ ಉಪಕೇಂದ್ರ ಕಾರಾಗೃಹದಲ್ಲಿ ಬ್ಯಾರಕ್ ನಿರ್ಮಿಸುವ ಗುತ್ತಿಗೆಯನ್ನು ಮೋಹನ ಅವರು ಪಡೆದಿದ್ದರು. ಅದನ್ನು ಬಸವರಾಜ ಅವರಿಗೆ ಉಪಗುತ್ತಿಗೆ ನೀಡಿದ್ದರು. ಕಾಮಗಾರಿಗೆ ಸಂಬಂಧಿಸಿ ಕೆಲವರು ಸೆಂಟ್ರಿಂಗ್ ಸಾಮಗ್ರಿ, ಕಾರ್ಮಿಕರನ್ನು ಪೂರೈಕೆ ಮಾಡಿದ್ದರು. ಅವರು ಬಸವರಾಜನಿಗೆ ಹಣ ಕೇಳಿದಾದ, ಮೋಹನ ಅವರು ಕೊಟ್ಟಾಗ ನೀಡುತ್ತೇನೆ ಎನ್ನುತ್ತಿದ್ದ. ನಂತರ ಅವರು, ಬಸವರಾಜ ಜತೆ ಸೇರಿ ಮೋಹನ ಅವರನ್ನು ಅಪಹರಿಸಿದ್ದರು. ಹಣ ನೀಡಿದ ನಂತರ ಬಿಡುವ ಯೋಜನೆ ಅವರದ್ದಾಗಿತ್ತು’ ಎಂದರು.

‘₹85 ಲಕ್ಷ ನೀಡಿದರೆ ಮಾತ್ರ ಮೋಹನ ಅವರನ್ನು ಬಿಡುತ್ತೇವೆ ಎಂದು ಆರೋಪಿಗಳು ಕುಟುಂಬದವರಿಗೆ ಕರೆ ಮಾಡಿ ತಿಳಿಸಿದ್ದರು. ಅಪಹರಣ ನಡೆದ ಸ್ಥಳದಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿ ಆಧರಿಸಿ, ಆರೋಪಿಗಳ ಮಾಹಿತಿ ಸಂಗ್ರಹಿಸಲಾಗಿತ್ತು. ಧಾರವಾಡ ಮತ್ತು ಬೆಳಗಾವಿ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ವಿವರಿಸಿದರು.

‘ಪ್ರಮುಖ ಆರೋಪಿ ಬಸವರಾಜನನ್ನು ಬಂಧಿಸುವ ವೇಳೆ, ಬಾಟಲಿಯಿಂದ ತಲೆಗೆ ಹೊಡೆದುಕೊಂಡು ಗಾಯಮಾಡಿಕೊಂಡಿದ್ದಾನೆ. ತನ್ನನ್ನೇ ಅಪಹರಣ ಮಾಡಿದ್ದಾರೆ, ಜತೆಗೆ ಇದ್ದವರು ತನ್ನ ಕಡೆಯವರಲ್ಲ ಎಂದು, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿಯಿದ್ದು, ಪರಿಶೀಲನೆ ನಡೆಯುತ್ತಿದೆ’ ಎಂದರು.

‘ಆರೋಪಿಗಳ ಮೇಲೆ ಬೇರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆಯೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಕಮಿಷನರ್ ತಿಳಿಸಿದರು.

ಒಂದೂವರೆ ವರ್ಷದ ಹಿಂದೆಯೂ ಮೋಹನ ಅವರನ್ನು ಅಪಹರಣ ಮಾಡಲಾಗಿತ್ತು. ಸಮಾಜದ ಮುಖಂಡರ ಮಧ್ಯಸ್ಥಿಕೆಯಲ್ಲಿ ರಾಜೀ ಸಂಧಾನ ಮಾಡಿ ವ್ಯವಹಾರ ಮುಗಿಸಿಕೊಂಡಿದ್ದರು

-ಎನ್. ಶಶಿಕುಮಾರ್ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.