ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸ್ವಾತಂತ್ರ್ಯ ವೃಕ್ಷಕ್ಕೆ ಅಮೃತ ಮಹೋತ್ಸವ

ಬಿಡನಾಳ: ಸ್ವಾತಂತ್ರ್ಯದ ನೆನಪಿಗಾಗಿ ಶಾಲೆಯಲ್ಲಿ ಸಸಿ ನೆಟ್ಟಿದ್ದ ಶಿಕ್ಷಕರು, ವಿದ್ಯಾರ್ಥಿಗಳು
Last Updated 15 ಆಗಸ್ಟ್ 2022, 7:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಅಂದು ಆ ಗ್ರಾಮದ ಶಾಲೆಯ ಇಬ್ಬರು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಿರಿಯರೊಂದಿಗೆ ಶಾಲೆಯಂಗಳದಲ್ಲಿ ಬನ್ನಿ ಸಸಿ ನೆಟ್ಟರು. ಅಂದಿನಿಂದ ಆ ಗ್ರಾಮದಲ್ಲಿ ರಾತ್ರಿ 12ಕ್ಕೆ ಧ್ವಜಾರೋಹಣ ನೆರವೇರಿಸುತ್ತಾ, ಸ್ವಾತಂತ್ರ್ಯ ದಿನವನ್ನು ಹಬ್ಬವಾಗಿ ಆಚರಿಸಲಾಗುತ್ತಿದೆ. ಇದೀಗ ದೊಡ್ಡದಾಗಿ ಬೆಳೆದಿರುವ ಆ ವೃಕ್ಷಕ್ಕೆ ಅಮೃತ ಮಹೋತ್ಸವದ ಸಂಭ್ರಮ.

ಹುಬ್ಬಳ್ಳಿಯ ಬಿಡನಾಳ ಗ್ರಾಮವು ಇಂತಹದ್ದೊಂದು ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಿದೆ. 1913ರಲ್ಲಿ ಸ್ಥಾಪನೆಯಾಗಿದ್ದ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1947ರಂದು ನಡೆದ ಈ ಅಪರೂಪದ ಘಟನೆಗೆ 20 ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ಆ ಪೈಕಿ, ಸದ್ಯ 9 ಮಂದಿ ಬದುಕಿದ್ದಾರೆ.

ಅನುರಣಿಸುತ್ತಿದೆ:‘ನಾನಾಗ 4ನೇ ತರಗತಿ ಕಲಿಯುತ್ತಿದ್ದೆ. ಅವತ್ತು ಶುಕ್ರವಾರ. ಸಂಭ್ರಮದಿಂದ ಶಾಲೆಗೆ ಬಂದಿದ್ದ ಮುಖ್ಯಶಿಕ್ಷಕ ಭರಮಗೌಡ ಮತ್ತು ಶಿಕ್ಷಕ ಬಿಜಾಪುರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಇವತ್ತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬ್ರಿಟಿಷರ ದಾಸ್ಯದಿಂದ ದೇಶ ಮುಕ್ತವಾಗಿದೆ ಎಂದು ಹೇಳಿದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ’ ಎಂದು ಆ ಕ್ಷಣಕ್ಕೆ ಸಾಕ್ಷಿಯಾಗಿದ್ದ ಸಿದ್ದಪ್ಪ ಅಂದಾನಪ್ಪ ಮೇಟಿ ‘ಪ್ರಜಾವಾಣಿ’ಯೊಂದಿಗೆ ನೆನಪುಗಳನ್ನು ಬಿಚ್ಚಿಟ್ಟರು.

‘ಆಗ ಶಾಲೆ ಕಟ್ಟಡ ಶಿಥಿಲವಾಗಿದ್ದರಿಂದ, ಗ್ರಾಮದ ರೈತ ಚನ್ನಮಲ್ಲಪ್ಪ ಅಸುಂಡಿ ಎಂಬುವರು ತಮ್ಮ ಮನೆಯಲ್ಲಿ ಶಾಲೆ ನಡೆಸಲು ಜಾಗ ಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಇಬ್ಬರೂ, ಅದರ ಸವಿನೆನಪಿಗಾಗಿ ಶಾಲೆ ಬಳಿ ಸಸಿ ನೆಡೋಣ ಎಂದರು. ಆಗ, ಅಸುಂಡಿ ಅವರ ನೇತೃತ್ವದಲ್ಲಿ ಎಲ್ಲರೂ ಬನ್ನಿ ಸಸಿ ನೆಟ್ಟೆವು’ ಎಂದು ಮೆಲುಕು ಹಾಕಿದರು.

ಬೂಂದಿ, ಲಾಡು ಕೊಟ್ಟಿದ್ದರು:‘ಸ್ವಾತಂತ್ರ್ಯ ಸಿಕ್ಕ ವಿಷಯವನ್ನು ನಾವು ಸಂಭ್ರಮದಿಂದ ಊರ ಮಂದಿಗೆ ತಿಳಿಸಿದ್ದೆವು. ಶಿಕ್ಷಕರು ಮತ್ತು ಊರಿನ ಹಿರಿಯರು ವಿದ್ಯಾರ್ಥಿಗಳಿಗೆ ಬೂಂದಿ ಮತ್ತು ಲಾಡು ಹಂಚಿದ್ದರು. ಅಂದಿನಿಂದ ಊರಿನಲ್ಲಿ ಸ್ವಾತಂತ್ರ್ಯ ದಿನವನ್ನು ಹಬ್ಬದಂತೆ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ಹುಸೇನಸಾಬ ಅಲಿಸಾಬ ನದಾಫ ನೆನಪಿಸಿಕೊಂಡರು.

ಸ್ವಾತಂತ್ರ್ಯ ದಿನಾಚರಣೆಗಾಗಿ ಗ್ರಾಮವನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ. ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ. ಬೀದಿಯುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನೊಳಗೊಂಡ ಚಿತ್ರಗಳನ್ನು ಹಾಕಲಾಗಿದೆ.

‘75 ಸಸಿ ನೆಡಲಿರುವ ಹಿರಿಯರು’

‘ಹಿರಿಯರು ಬನ್ನಿ ಸಸಿ ನೆಟ್ಟಿದ್ದ ಸ್ಥಳದಲ್ಲಿ ನಂತರ ಮಾರುತಿ ದೇವಸ್ಥಾನ ನಿರ್ಮಾಣವಾಗಿದ್ದು, ಅದಕ್ಕೆ ಹಾನಿಯಾಗದಂತೆ ಸಂರಕ್ಷಿಸಿಕೊಂಡು ಬರಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸದ ಹಿನ್ನೆಲೆಯಲ್ಲಿ ಗ್ರಾಮದ ಆರ್‌.ಕೆ. ಪಾಟೀಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ75 ಸಸಿಗಳನ್ನು ನೆಡಲಾಗುವುದು. ಅಂದು ಸಸಿ ನೆಡುವ ಕ್ಷಣಕ್ಕೆ ಸಾಕ್ಷಿಯಾಗಿದ್ದ ಹಿರಿಯರಾದ ಸಿದ್ದಪ್ಪ ಅಂದಾನಪ್ಪ ಮೇಟಿ, ಹುಸೇನಸಾಬ ಅಲಿಸಾಬ ನದಾಫ, ಮಲ್ಲೇಶಪ್ಪ ಹಿರೂರ, ಸಿದ್ದಪ್ಪ ಮೇಟಿ, ಭರಮಪ್ಪ ಅಂಚಟಗೇರಿ, ಯಲ್ಲಪ್ಪ ಡೊಣಗನವರ ಸೇರಿದಂತೆ ಒಂಬತ್ತು ಮಂದಿ ಈ ಕಾರ್ಯ ನೆರವೇರಿಸಲಿದ್ದಾರೆ’ ಎಂದು ಗ್ರಾಮದ ಮುಖಂಡ ಮೋಹನ ಅಸುಂಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT