ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ: ₹1,573 ಕೋಟಿ ಬಜೆಟ್ ಮಂಡನೆ

Published 21 ಫೆಬ್ರುವರಿ 2024, 8:06 IST
Last Updated 21 ಫೆಬ್ರುವರಿ 2024, 8:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ ಪಕ್ಷವು 2024–25ನೇ ಸಾಲಿಗೆ ₹1573.35 ಕೋಟಿ ಗಾತ್ರದ ಬಜೆಟ್ ಅನ್ನು ಬುಧವಾರ ಮಂಡಿಸಿತು.

ವಾರ್ಡ್ ಅಭಿವೃದ್ಧಿಗೆ ₹75ಕೋಟಿ, ಪಾಲಿಕೆ ಆಸ್ತಿ ಸಮೀಕ್ಷೆ(ಜಿಐಎಸ್)ಗೆ ₹5ಕೋಟಿ, ಪಾಲಿಕೆ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ₹7ಕೋಟಿ, ನೃಪತುಂಗಬೆಟ್ಟದಿಂದ ಉಣಕಲ್ ಕೆರೆಯವರೆಗೆ ಜಿಪ್'ಲೈನ್ ಕಾಮಗಾರಿಗೆ ₹5ಕೋಟಿ, ಸಿದ್ಧಾರೂಢಮಠ, ಸಿದ್ದಪ್ಪಜ್ಜನ ಮಠ, ಶಿವಾನಂದ ಮಠದ ಅಭಿವೃದ್ಧಿಗೆ ₹1ಕೋಟಿ, ಉದ್ಯಾನ ನಿರ್ಮಾಣಕ್ಕೆ ₹5ಕೋಟಿ, ಸಾರ್ವಜನಿಕ ಆರೋಗ್ಯ ಸೇವೆಗೆ ₹9ಕೋಟಿ, ಆರ್ಥಿಕವಾಗಿ ಹಿಂದುಳಿದ ವರ್ಗದ ವ್ಯಕ್ತಿ ಮೃತಪಟ್ಟರೆ, ಅವರ ಶವಸಂಸ್ಕಾರಕ್ಕೆ ₹2ಕೋಟಿ, ಮಹಿಳೆಯರ ಸ್ವಾವಲಂಬನೆಗೆ ₹1ಕೋಟಿ ಹೀಗೆ ವಿವಿಧ ವರ್ಗವನ್ನು ತಲುಪುವ ಪ್ರಯತ್ನ ಬಜೆಟ್‌ನಲ್ಲಿ ಮಾಡಲಾಗಿದೆ.

ಪಾಲಿಕೆಯ ಇತಿಹಾಸದಲ್ಲೇ ಎರಡನೇ ಬಾರಿಗೆ ಮೇಯರ್ ವೀಣಾ ಬರದ್ವಾಡ ನೇತೃತ್ವದ ತಂಡ ₹1ಸಾವಿರ ಕೋಟಿ ಮೀರಿದ ಬಜೆಟ್‌ ಮಂಡಿಸಿದ ದಾಖಲೆ ಮಾಡದೆ. ಕಳೆದ ವರ್ಷ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ₹1,138.54 ಕೋಟಿ ಗಾತ್ರದ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದರು. ಸಾರ್ವಜನಿಕರಿಗೆ ಹೊಸ ತೆರಿಗೆ ವಿಧಿಸದೆ, ವಾಣಿಜ್ಯ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವ ಮೂಲಕ ತೆರಿಗೆ ನಿರ್ಧಾರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರು ಅವರು ₹12.71ಲಕ್ಷ ಉಳಿತಾಯ ಬಜೆಟ್‌ ಅನ್ನು ಸಭೆಗೆ ಮಂಡಿಸಿದರು.

ಹುಬ್ಬಳ್ಳಿ– ಧಾರವಾಡದ ಜನರ ಮನಗೆಲ್ಲುವ ಅಂಶಗಳ ಜತೆಗೆ, ಆದಾಯ ಹೆಚ್ಚಳಕ್ಕೆ ಬಜೆಟ್'ನಲ್ಲಿ ಒತ್ತು ನೀಡಲಾಗಿದೆ. ವ್ಯಾಪಾರ, ವ್ಯವಹಾರ ಚಟುವಟಿಕೆಗಳಿಗೆ ವಲಯ ಕಚೇರಿ ಹಂತದಲ್ಲಿಯೇ ಪರವಾನಗಿ ಪತ್ರ ನೀಡುವ ಕ್ರಮವನ್ನು ಸಹ ಪ್ರಸ್ತಾವಿಸಲಾಗಿದೆ.

‘ನಮ್ಮ ನಡೆ ಸುಸ್ಥಿರ ಅಭಿವೃದ್ಧಿಯ ಕಡೆ’ ಎಂಬ ಘೋಷವಾಕ್ಯದ ಬಜೆಟ್‌ನಲ್ಲಿ ಪಾಲಿಕೆಯ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡುವ ಯತ್ನ ನಡೆಸಲಾಗಿದೆ. ಪ್ರತಿ ವಲಯ ಕಚೇರಿ ವ್ಯಾಪ್ತಿಗೆ ಒಂದು ಎಲ್‌.ಇ.ಡಿ. ಶೈನ್ ಬೋರ್ಡ್ ಅಳವಡಿಸಿ, ಜಾಹೀರಾತು ಪ್ರದರ್ಶಿಸುವ ಮೂಲಕ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಕಸ ಕೊಡಿ, ಹಣ ಪಡಿ: ಮಹಾನಗರದಲ್ಲಿ ಕಸದ ಸಮಸ್ಯೆ ದಿನದಿಂದ ಹೆಚ್ಚಾಗಿರುವುದರಿಂದ ಅದರ ನಿರ್ವಹಣೆಗಾಗಿ ಕಸ ಕೊಡಿ, ಹಣ ಪಡಿ ಎನ್ನುವ ವಿನೂತನ ಯೋಜನೆ ಪರಿಚಯಿಸಲಾಗಿದೆ. ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಒಣತ್ಯಾಜ್ಯ ಸಂಗ್ರಹಿಸಿ ಹಣ ನೀಡಿ, ಪಾಲಿಕೆಯೊಂದಿಗೆ ಸಹಯೋಗಹೊಂದಿರುವ ಸಂಸ್ಥೆಗಳಿಗೆ ಈ ತ್ಯಾಜ್ಯವನ್ನು ಮರುಬಳಕೆಗಾಗಿ ನೀಡುವ ಯೋಜನೆ ಇದಾಗಿದೆ. ಇದರಿಂದ ಅಂದಾಜು ₹75 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಪಾಲಿಕೆಯ ಕಂದಾಯ ವಿಭಾಗ, ಎಂಜಿನಿಯರಿಂಗ್ ವಿಭಾಗ, ಆರೋಗ್ಯ ವಿಭಾಗದ ಕಾರ್ಯಗಳನ್ನು ವಲಯಮಟ್ಟದಲ್ಲಿಯೇ ನಿಯೋಜಿಸಲು ಅಗತ್ಯ ಸಿಬ್ಬಂದಿಯನ್ನು ನೀಯೋಜಿಸುವುದು. ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಿ, ಪಾಲಿಕೆ ಸದಸ್ಯರ ನಿಧಿಯನ್ನು ₹75 ಲಕ್ಷದಿಂದ ₹90ಲಕ್ಕೆ ಹೆಚ್ಚಿಸಲಾಗಿದೆ. ಪಾಲಿಕೆ ಅಭಿವೃದ್ಧಿ ಹಾಗೂ ಆಡಳಿತದ ದೃಷ್ಟಿಯಿಂದ ಮೂಲ ಸೌಲಭ್ಯ ಒದಗಿಸುವಿಕೆ, ಸ್ವಚ್ಛನಗರ ನಿರ್ಮಾಣ, ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡುವ ಸುಧಾರಣಾ ಕ್ರಮಗಳೂ ಬಜೆಟ್‌ನಲ್ಲಿವೆ.

ಪಾಲಿಕೆ ಜನಸ್ನೇಹಿಯಾಗುವ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ, ಸಿಬ್ಬಂದಿ ವರ್ಗಾವಣೆ ನೀತಿ, ದಕ್ಷ ಸಿಬ್ಬಂದಿಗೆ ಪುರಸ್ಕಾರ, ಸಾರ್ವಜನಿಕ ಕೆಲಸಗಳಿಗೆ ಸಮಯ ನಿಗದಿ, ಪಾಲಿಕೆಯಲ್ಲಿ ಕಡತ ವಿಲೇವಾರಿ ವಿಳಂಬವಾಗುವುದನ್ನು ತಪ್ಪಿಸಲು ಕಂದಾಯ ಕಡತ ಯಜ್ಞ ವಿಶೇಷ ಅಭಿಯಾನ ಮುಂದುವರಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ.

ಮೊದಲ ಮಹಡಿವರೆಗಿನ ಕಟ್ಟಡಗಳಿಗೆ ಪರವಾನಗಿಯನ್ನು ವಲಯ ಕಚೇರಿ ಹಂತದಲ್ಲಿಯೇ ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕಟ್ಟಡ ಪರವಾನಗಿ ಪಡೆಯದೆ ಇರುವ ಪ್ರಕರಣಗಳನ್ನು ಗುರುತಿಸಿ, ದಂಡ ಸಂಗ್ರಹಿಸುವ ಯೋಜನೆ ಪ್ರಸ್ತಾಪಿಸಲಾಗಿದೆ. ಅಂತಹ ಮನೆ/ಕಟ್ಟಗಳಿಗೆ ಪಿಐಡಿ ನಂಬರ್ ಫಲಕ ಅಳವಡಿಸಲು ಯೋಜನೆಗೆ ₹20 ಲಕ್ಷ ಬಜೆಟ್'ನಲ್ಲಿ ಮೀಸಲಿಡಲಾಗಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT