ಮಂಗಳವಾರ, ಮಾರ್ಚ್ 2, 2021
19 °C
ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣಕ್ಕೆ ನಿತಿನ್‌ ಗಡ್ಕರಿ ಶಂಕುಸ್ಥಾಪನೆ

‘ಹುಬ್ಬಳ್ಳಿ–ಹೊಸಪೇಟೆ ಕಾಮಗಾರಿ ಮಾರ್ಚ್‌ನಲ್ಲಿ ಅಂತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಹೊಸಪೇಟೆ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಶೇ 77ರಷ್ಟು ಮುಗಿದಿದ್ದು, ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ದಾವಣಗೆರೆ–ಹಾವೇರಿ ರಸ್ತೆ ಕೆಲಸವೂ ಇದೇ ಸಮಯಕ್ಕೆ ಮುಗಿಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣ ಮತ್ತು ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಚತುಷ್ಪಥ ರಸ್ತೆ ಮತ್ತು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘₹1,335 ಕೋಟಿ ವೆಚ್ಚದಲ್ಲಿ 144 ಕಿ.ಮೀ ಉದ್ದದ ಹುಬ್ಬಳ್ಳಿ-ಹೊಸಪೇಟೆ ರಸ್ತೆ ಕಾಮಗಾರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ಹುಬ್ಬಳ್ಳಿ-ಹಾವೇರಿ, ಹಾವೇರಿ-ದಾವಣಗೆರೆ ಮಾರ್ಗದ 6 ಪಥಗಳ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಮೂರು ಕಾಮಗಾರಿಗಳನ್ನು ಇದೇ ವರ್ಷದ ಮಾರ್ಚ್‌ ಒಳಗೆ  ಪೂರ್ಣಗೊಳಿಸಲಾಗುವುದು. ಹಿಂದಿನ ಮೂರು ವರ್ಷಗಳಲ್ಲಿ 10 ಹೊಸ ಯೋಜನೆಗಳ ಮೂಲಕ 626 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದರು.

‘ಭಾರತ ಮಾಲಾ ಯೋಜನೆಯಲ್ಲಿ ಬೇಲಿಕೇರಿ ಬಂದರನ್ನು ಕೇಂದ್ರದಿಂದ ಅಭಿವೃದ್ಧಿ ಪಡಿಸಲಾಗುವುದು. ಕರ್ನಾಟಕದಲ್ಲಿ ಕಬ್ಬು ಹೆಚ್ಚಾಗಿ ಬೆಳೆಯಲಾಗುತ್ತದೆ. ಕಬ್ಬಿನ ಕಾರ್ಖಾನೆಗಳು ಕೂಡ ಹೆಚ್ಚಿವೆ. ಕೇಂದ್ರ ಸರ್ಕಾರ ಬಜಾಜ್ ಹಾಗೂ ಟಾಟಾ ಕಂಪನಿಗಳ ಸಹಯೋಗದೊಂದಿಗೆ ಎಥೆನಾಲ್ ಆಧಾರಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿ ಕಾರುಗಳಿಗೆ ಎಥೆನಾಲ್ ಅನ್ನು ಇಂಧನವಾಗಿ ಬಳಸಲು ಕೇಂದ್ರ ನಿರ್ಧರಿಸಿದೆ. ಕಬ್ಬಿನಿಂದ ಎಥೆನಾಲ್  ಉತ್ಪಾದಿಸಬಹುದು’ ಎಂದರು. 

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಹಿಂದಿನ 60 ವರ್ಷಗಳಲ್ಲಿ ಆಗದ ಹೆದ್ದಾರಿಗಳ ಅಭಿವೃದ್ಧಿ ಕಾರ್ಯವನ್ನು ನಿತಿನ್‌ ಗಡ್ಕರಿ ಅವರು ಕೇವಲ ಆರು ವರ್ಷಗಳಲ್ಲಿ ಮಾಡಿದ್ದಾರೆ. ಇದರಿಂದ ರಸ್ತೆ ಅಪಘಾತ, ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಬದ್ಧವಿದ್ದು ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಕೋರಿದರು.

ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮಾತನಾಡಿ ‘ಗಡ್ಕರಿ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ₹77,297 ಕೋಟಿ ವೆಚ್ಚದ 222 ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದ್ದು, 8,819 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಂಡಿದ್ದು ಶ್ಲಾಘನೀಯ’ ಎಂದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣನವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್‌, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಎ.ಕೆ.ಪಾಂಡೆ, ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಗೋವಿಂದ ರಾಜು, ವಿಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾಮಗಾರಿ ಚುರುಕುಗೊಳಿಸಲು ಸೂಚಿಸಿ: ಶೆಟ್ಟರ್‌

ಹುಬ್ಬಳ್ಳಿ–ಧಾರವಾಡ ಬೈಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿಸಲು ಮತ್ತು ಹುಬ್ಬಳ್ಳಿ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ನಿತಿನ್‌ ಗಡ್ಕರಿಗೆ ಅವರಿಗೆ ಮನವಿ ಮಾಡಿದರು.

‘ಕೋವಿಡ್‌ನಿಂದಾಗಿ ಅನೇಕ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ. ಕಾಲಮಿತಿಯೊಳಗೆ ಮುಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಫ್ಲೈ ಓವರ್‌ ನಿರ್ಮಾಣ ಹುಬ್ಬಳ್ಳಿ ಜನರ ಬಹುದಿನಗಳ ಕನಸಾಗಿತ್ತು. ಅದು ಈಗ ನನಸಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು