ಸೋಮವಾರ, ಮೇ 23, 2022
30 °C
ಗ್ರಾಹಕರನ್ನು ಆಕರ್ಷಿಸಲು ಮಳಿಗೆಗಳಲ್ಲಿ ರಿಯಾಯಿತಿ, ವಿವಿಧ ರೀತಿಯ ಕೊಡುಗೆ

ಅಕ್ಷಯ ತೃತೀಯ: ಹುಬ್ಬಳ್ಳಿಯಲ್ಲಿ ಚಿನ್ನ ಖರೀದಿಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳಿತಾಗುತ್ತದೆ’ ಎಂಬ ಪ್ರತೀತಿಯಂತೆ, ಜನ ಮಂಗಳವಾರ ಮಳಿಗೆಗಳಲ್ಲಿ ಉತ್ಸಾಹದಿಂದ ಚಿನ್ನಾಭರಣ ಖರೀದಿಸಿದರು. ರಂಜಾನ್‌ ರಜೆಯೂ ಇದ್ದ ಕಾರಣ ಸಂಜೆ ಹೆಚ್ಚು ಮಂದಿ ವಿವಿಧ ಅಂಗಡಿಗಳಿಗೆ ತೆರಳಿ ವಿವಿಧ ವಿನ್ಯಾಸದ ಆಭರಣಗಳನ್ನು ಖರೀದಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು. ಪೂರಕವಾಗಿ ಗ್ರಾಹಕರನ್ನು ಆಕರ್ಷಿಸಲು ಮಳಿಗೆಗಳಲ್ಲಿ ರಿಯಾಯಿತಿ ಜೊತೆಗೆ, ವಿವಿಧ ರೀತಿಯ ಕೊಡುಗೆಗಳನ್ನು ನೀಡಲಾಯಿತು.

ಕೋವಿಡ್‌ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಅಕ್ಷಯ ತೃತೀಯದಂದು ನಿರೀಕ್ಷೆಯಂತೆ ವ್ಯಾಪಾರ ನಡೆಯದಿದ್ದರಿಮದ, ಚಿನ್ನಾಭರಣ ವ್ಯಾಪಾರಿಗಳು ಬೇಸರಗೊಂಡಿದ್ದರು. ಈ ವರ್ಷ ಸಹ ನಾಲ್ಕನೇ ಅಲೆಯ ಆತಂಕವಿತ್ತು. ಆದರೆ, ಯಾವುದೇ ಸಮಸ್ಯೆ ಎದುರಾಗದೆ ಉತ್ತಮ ವ್ಯಾಪಾರ ನಡೆದಿದ್ದರಿಂದ ವ್ಯಾಪಾರಿಗಳು ಹರ್ಷಗೊಂಡರು. 

‘ವಿಶೇಷ ಕೊಡುಗೆ ನೀಡಿರುವುದರಿಂದ ಶುಭ ಸಮಾರಂಭಕ್ಕೆ ಚಿನ್ನ ಖರೀದಿಸಲು ಈ ಸಂದರ್ಭ ನೆರವಾಯಿತು. ಆಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ನೋಡುವುದೇ ಖುಷಿ, ಖರೀದಿಸಿದರೆ ಇನ್ನೂ ಖುಷಿ’ ಎಂದು ಗ್ರಾಹಕಿ ಜಯಾ ಸುರೇಶ್ ಹೇಳಿದರು.

ದರ ಇಳಿಕೆ: ‘10 ಗ್ರಾಂಗೆ ಸುಮಾರು ₹49,000 ಇದ್ದ ಚಿನ್ನದ ದರ ಸದ್ಯ ₹47,000 ಆಗಿದೆ. ಅಕ್ಷಯ ತೃತೀಯದೊಂದಿಗೆ ಈ ಕಾರಣದಿಂದಲೂ ಹೆಚ್ಚು ವ್ಯಾಪಾರವಾಗಿದೆ. ಕೋವಿಡ್‌ಗೂ ಹಿಂದಿನ ವರ್ಷಗಳಲ್ಲಿ ಆಗುತ್ತಿದ್ದ ವ್ಯಾಪಾರಕ್ಕಿಂತ ಹೆಚ್ಚು ವ್ಯಾಪಾರ ಆಗಿದ್ದು ಖುಷಿ ತಂದಿದೆ’ ಎಂದು ಕೆಜಿಪಿ ಜ್ಯುವೆಲ್ಲರ್ಸ್‌ ವ್ಯವಸ್ಥಾಪಕ ಮಂಜುನಾಥ್‌ ದೈವಜ್ಞ ತಿಳಿಸಿದರು.

‘ಉತ್ತಮ ಲಾಭ ಗಳಿಸುವ ನಿರೀಕ್ಷೆ ಸಾಕಾರವಾಯಿತು. ಪ್ರತಿ ಗ್ರಾಂ ಚಿನ್ನ ಖರೀದಿಸಿದರೂ ರಿಯಾಯ್ತಿ ಹಾಗೂ ಕೊಡುಗೆ ನೀಡಿದ್ದೇವೆ. ಗ್ರಾಹಕರೂ ಖುಷಿಗೊಂಡರು’ ಎಂದು ತನಿಷ್ಕ್ ಜ್ಯುವೆಲ್ಲರ್‌ನ ವ್ಯವಸ್ಥಾಪಕ ಮನೋಹರ್ ಹೇಳಿದರು.

₹3 ಕೋಟಿ ಆದಾಯ: ‘ಎಲ್ಲ ಚಿನ್ನದಂಗಡಿಗಳಿಗೆ ಭರ್ಜರಿ ವ್ಯಾಪಾರವಾಗಿದೆ. ದೀಪಾವಳಿ, ಯುಗಾದಿ, ದಸರಾದಂತೆ ಅಕ್ಷಯ ತೃತೀಯ ಸಹ ಶುಭದಿನ ಎಂಬ ಕಾರಣಕ್ಕೆ ಚಿನ್ನ ಖರೀದಿಸಲಾಗುತ್ತದೆ. ಈ ಬಾರಿ ಅಂದಾಜು ₹2 ಕೋಟಿ ಮೌಲ್ಯದ ಚಿನ್ನಾಭರಣಗಳು ಹಾಗೂ ಅಂದಾಜು ₹1 ಕೋಟಿ ಮೌಲ್ಯದ ಬೆಳ್ಳಿಯ ಆಭರಣಗಳು ಖರೀದಿಯಾಗಿವೆ’ ಎಂದು ಉತ್ತರ ಕರ್ನಾಟಕ ಜ್ಯುವೆಲ್ಲರ್‌ ಮಹಾಸಭಾದ ಅಧ್ಯಕ್ಷ ಗೋವಿಂದ ನಿರಂಜನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿನ್ನದ ದರ ಕಡಿಮೆಯಾದರೂ ಜಿ.ಎಸ್‌.ಟಿ ಕಾರಣ ಮಾರಾಟಗಾರರಿಗೆ ತುಂಬಾ ಲಾಭವಾಗದು. ಕಳೆದ ವರ್ಷಗಳಂತೆ ನಷ್ಟವಿಲ್ಲ ಎಂಬುದೇ ಸಮಾಧಾನ. ಈ ದಿನದಂದು ಚಿನ್ನ ಖರೀಸಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಚಿನ್ನ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಾಗುವ ಸಾಧ್ಯತೆಯಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು