ಸೋಮವಾರ, ಅಕ್ಟೋಬರ್ 25, 2021
25 °C
ಫೇಸ್‌ಬುಕ್‌ನಲ್ಲಿ ಸ್ನೇಹದ ನೆಪ, ಮೆಸೇಂಜರ್‌ ಮೂಲಕ ಹಣ ಕೀಳುವ ಯತ್ನ

ಹೆಚ್ಚುತ್ತಿದೆ ನಕಲಿ ಖಾತೆ ಸೃಷ್ಟಿ ತಂತ್ರ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಫೇಸ್‌ಬುಕ್‌ ಮೂಲಕ ಸ್ನೇಹದ ಹಸ್ತ ಚಾಚುವ ನೆಪದಲ್ಲಿ ನಕಲಿ ಖಾತೆ ಸೃಷ್ಟಿಸುವ ಮತ್ತು ಹಣ ದೋಚುವ ಘಟನೆಗಳು ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಇದರಿಂದ ಜನರಲ್ಲಿ ಮೋಸಕ್ಕೆ ಒಳಗಾಗುವ ಆತಂಕ ಹೆಚ್ಚಾಗುತ್ತಲೇ ಇದೆ.

ನಿಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರೂ ಮತ್ತೊಮ್ಮೆ ಸ್ನೇಹ ಬಯಸಿ ಆ ಕಡೆಯಿಂದ ವಿನಂತಿ ಬರುತ್ತದೆ. ಅದನ್ನು ಒಪ್ಪಿಕೊಂಡರೆ; ಮೆಸೇಂಜರ್‌ ಮೂಲಕ ಎಲ್ಲಿದ್ದೀಯಾ? ಎನ್ನುವ ಮೊದಲ ಪ್ರಶ್ನೆ. ತುರ್ತಾಗಿ ಒಂದಷ್ಟು ಹಣ ಬೇಕಿತ್ತು. ನಾಳೆಯೇ ವಾಪಸ್‌ ಕೊಡುತ್ತೇನೆ ಎನ್ನುವ ಸಂದೇಶಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ. ನಿಜವಾದ ಸ್ನೇಹಿತನೆಂದು ನಂಬಿ ಹಣ ಕೊಟ್ಟರೆ ಮೋಸ ಹೋಗಿದ್ದೀರಿ ಎನ್ನುವುದು ಸ್ಪಷ್ಟ.

ಫೇಸ್‌ಬುಕ್‌ ಬಂಡವಾಳ ಮಾಡಿಕೊಂಡು ನಕಲಿ ಖಾತೆ ಸೃಷ್ಟಿಸುವ, ಅವರ ಹೆಸರಿನಲ್ಲಿಯೇ ಸ್ನೇಹ ಕೋರಿ ವಿನಂತಿ ಕಳುಹಿಸುವ ಘಟನೆಗಳೂ ನಡೆಯುತ್ತಿವೆ. ಇನ್ನೂ ಕೆಲವರು ಅತಿ ಕಡಿಮೆ ಮೊತ್ತದಲ್ಲಿ ಬೆಲೆಬಾಳುವ ಸಾಮಗ್ರಿಗಳನ್ನು ಕಳುಹಿಸಿಕೊಡುವುದಾಗಿ ಹೇಳಿ ಮುಂಗಡ ಹಣ ಪಡೆಯುತ್ತಿದ್ದಾರೆ. ಬಹಳಷ್ಟು ಜನ ಇದನ್ನೇ ಸತ್ಯವೆಂದು ನಂಬಿ ಹಣ ಕಳೆದುಕೊಂಡಿದ್ದಾರೆ.‌ ಇನ್ನೂ ಕೆಲವರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಹೆಸರಿನಲ್ಲಿ ಅವರ ಫೋಟೊ ಬಳಸಿ ನಕಲಿ ಖಾತೆಯನ್ನು ಸೃಷ್ಟಿ ಮಾಡಿ ಹಣ ದೋಚುತ್ತಿದ್ದಾರೆ.

ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದ್ದ ಕ್ರಿಕೆಟ್‌ ಕೋಚ್‌ ಶಿವಾನಂದ ಗುಂಜಾಳ ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿ ನನ್ನ ಸ್ನೇಹಿತರ ಬಳಿ ವ್ಯಕ್ತಿಯೊಬ್ಬ ಹಣ ಕೇಳಿದ್ದ. ಹಣ ಕಳುಹಿಸುವ ಮುನ್ನ ನನಗೆ ಫೋನ್‌ ಕರೆ ಮಾಡಿದಾಗ ಖಾತೆ ಹ್ಯಾಕ್‌ ಆಗಿರುವುದು ಗೊತ್ತಾಯಿತು’ ಎಂದರು.

ಕಾಂಗ್ರೆಸ್‌ನ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ‘ವೈಯಕ್ತಿಕ ಫೇಸ್‌ಬುಕ್‌ ಖಾತೆಯಲ್ಲಿರುವ ಮಾಹಿತಿ ಹಾಗೂ ಫೋಟೊ ಹಾಕಿ ನಕಲಿ ಖಾತೆ ಸೃಷ್ಟಿಸಿದ ವ್ಯಕ್ತಿಯೊಬ್ಬ ಫೋನ್‌ ಪೇ ನಂಬರ್‌ ಕೊಟ್ಟು ನನ್ನ ಸ್ನೇಹಿತರ ಬಳಿ ಹಣಕ್ಕೆ ಕೋರಿಕೆ ಸಲ್ಲಿಸಿದ್ದ. ದಾಖಲೆಗಳ ಸಮೇತ ಸೈಬರ್‌ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದೇನೆ’ ಎಂದರು.

ಹಿಂದೇಟು: ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡುವುದು ಮತ್ತು ನಕಲಿ ಖಾತೆ ಸೃಷ್ಟಿಸುವುದು ಹೆಚ್ಚಾಗುತ್ತಿದೆ. ಈ ಕುರಿತು ದೂರು ದಾಖಲಾದರೆ ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳ ಪತ್ತೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಬಹಳಷ್ಟು ಜನ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ ಎಂದು ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆ ಪಿಎಸ್‌ಐ ರಾಘವೇಂದ್ರ ಗೊರ್ಲ ತಿಳಿಸಿದರು.

 

ಹಣದಾಸೆ ತೋರಿಸಿ ಕಾರ್ಮಿಕರ ಬಳಕೆ!

ಸೈಬರ್‌ ಅಪರಾಧಗಳ ಜಾಡು ಹಿಡಿದು ಹೋದ ಪೊಲೀಸರಿಗೆ ಅಮಾಯಕರು ಹಾಗೂ ಕೂಲಿ ಕಾರ್ಮಿಕರ ಹಣ ದೋಚುವವರಿಗೆ ದಾಳವಾದ ಸಂಗತಿ ಬಯಲಾಗಿದೆ.

‘ಅನಕ್ಷರಸ್ಥ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಅವರ ಬ್ಯಾಂಕ್‌ ಖಾತೆಯನ್ನೇ ನೀಡಿ ಸಾಮಾಜಿಕ ತಾಣದಲ್ಲಿ ಹಣ ದೋಚಲಾಗುತ್ತಿದೆ. ಹೀಗೆ ಹಣ ದೋಚಿ ನೂರಾರು ರೂಪಾಯಿಗೆ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾವಿರಾರು ರೂಪಾಯಿ ನೀಡುವ ಮೂಲಕ ಅವರನ್ನು ಒಲಿಸಿಕೊಳ್ಳುವ ಕೆಲಸ ಕೂಡ ನಡೆಯುತ್ತಿದೆ. ಬ್ಯಾಂಕ್‌ ಖಾತೆ ಹಾಗೂ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ಹೋದಾಗ ಅಮಾಯಕ ಕೂಲಿ ಕಾರ್ಮಿಕರು ಸಣ್ಣ ಮೊತ್ತಕ್ಕೆ ಬಲಿ‍ಪಶುಗಳಾಗುತ್ತಿರುವುದು ಬೆಳಕಿಗೆ ಬಂದಿದೆ’ ಎಂದು ರಾಘವೇಂದ್ರ ಗೊರ್ಲ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು