ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಜಲಧಾರೆ’ ಬಿತ್ತಿದ ನಿರಂತರ ನೀರಿನ ಕನಸು

Last Updated 1 ನವೆಂಬರ್ 2020, 6:14 IST
ಅಕ್ಷರ ಗಾತ್ರ

ಮೂಲಸೌಕರ್ಯಗಳ ಪೂರೈಕೆ ಸರ್ಕಾರಕ್ಕೆ ಇಂದಿಗೂ ಸವಾಲಾಗಿದೆ. ನೀರು, ರಸ್ತೆ, ವಿದ್ಯುತ್ ಸೇರಿದಂತೆ ಬದುಕಿಗೆ ಬೇಕಾದ ಅಗತ್ಯಗಳಿಗಾಗಿ ಜನ ಇಂದಿಗೂ ಬೀದಿಗಿಳಿದು ಪ್ರತಿಭಟಿಸುವುದು ಸಾಮಾನ್ಯ. ಜನಸಂಖ್ಯೆ ಏರಿದಂತೆ ಅಗತ್ಯಗಳು ಹೆಚ್ಚುತ್ತವೆ. ಹಾಗಾಗಿ, ಕೆಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೆಂಬುದು ಕನಸಿನ ಮಾತೇ ಸರಿ.

ಉತ್ತರ ಕರ್ನಾಟಕದ ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆ ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ಹಿಂದಿನಿಂದ ಜನರ ದಾಹ ಹಿಂಗಿಸುತ್ತಿದ್ದ ಕೆರೆ, ಕಟ್ಟೆ, ಬಾವಿಗಳಲ್ಲಿ ಈಗ ನೀರಿನ ಸೆಲೆ ಇಲ್ಲದಾಗಿದೆ. ಕೆಲವುಗಳ ಅಸ್ತಿತ್ವವಿದ್ದರೂ, ಅವುಗಳ ನೀರು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ದೂರದ ಜಲಾಶಯಗಳು, ಕೆರೆಗಳು ಹಾಗೂ ಅಲ್ಪಸ್ವಲ್ಪ ಸಿಗುವ ಕೊಳವೆ ಬಾವಿಗಳೇ ಇಂದಿಗೂ ಜನರ ಅಗತ್ಯಗಳನ್ನು ಪೂರೈಸುತ್ತಿವೆ.

ಎರಡು ವರ್ಷಗಳಿಂದ ಈ ಭಾಗಕ್ಕೆ ಮಳೆರಾಯನ ಕೃಪೆ ಹೆಚ್ಚಾಗಿದೆ. ಇದರಿಂದಾಗಿ, ಜಿಲ್ಲೆಯ ಅಕ್ಕಪಕ್ಕದಲ್ಲಿ ಹರಿಯುವ ನದಿಗಳು ತುಂಬಿ ಹರಿಯುತ್ತಿವೆ. ಕೆರೆ, ಕುಂಟೆಗಳು ಮೈದುಂಬಿವೆ. ಇದೇ ಹೊತ್ತಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ‘ಜಲಧಾರೆ’ ಯೋಜನೆಯಡಿ, ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಗೆ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿದೆ. ಯೋಜನೆಗೆ ಸಂಬಂಧಿಸಿದ ಕೆಲಸಗಳಿಗೆ ಚಾಲನೆಯೂ ಸಿಕ್ಕಿದೆ.

ಅವಳಿನಗರಗಳಾದ ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯ ಕೆಲ ವಾರ್ಡ್‌ಗಳನ್ನು ಹೊರತುಪಡಿಸಿದರೆ, ಜಿಲ್ಲೆಯ ಪಟ್ಟಣಗಳು ಸೇರಿದಂತೆ ಹಳ್ಳಿಗಳಲ್ಲಿ ಇಂದಿಗೂ ನಿಗದಿತ ದಿನಗಳಲ್ಲಷ್ಟೇ ನೀರು ಪೂರೈಕೆಯಾಗುತ್ತಿದೆ. ಹಾಗಾಗಿ, ಜಲಧಾರೆ ಯೋಜನೆಯು ಗ್ರಾಮಗಳ ಜನರಲ್ಲಿ24X7 ನೀರಿನ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿದೆ.

353 ಗ್ರಾಮಗಳಿಗೆ ಅನುಕೂಲ:

ಜಿಲ್ಲೆಯ ಧಾರವಾಡ, ಹುಬ್ಬಳ್ಳಿ (ಮಹಾನಗರ ಪಾಲಿಕೆ ವ್ಯಾಪ್ತಿ ಹೊರತುಪಡಿಸಿ), ಕಲಘಟಗಿ, ಕುಂದಗೋಳ, ನವಲಗುಂದ ತಾಲ್ಲೂಕುಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಒಟ್ಟು 353 ಗ್ರಾಮಗಳಿಗೆ 24X7 ನೀರು ಪೂರೈಕೆಯಾಗಲಿದೆ.

2011ರ ಜನಗಣತಿಯ ಪ್ರಕಾರ, ಯೋಜನೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದಲ್ಲಿ 7.95 ಲಕ್ಷ ಜನರಿದ್ದಾರೆ. ಹಾಗಾಗಿ, ಮುಂದಿನ 32 ವರ್ಷದಲ್ಲಿ ಸೃಷ್ಟಿಯಾಗಬಹುದಾದ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಅಂದರೆ, 2052ರ ಹೊತ್ತಿಗೆ ಜನಸಂಖ್ಯೆ ಪ್ರಮಾಣ 11.24 ಲಕ್ಷವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯ ಕೆಲ ಭಾಗಗಳ ದಾಹ ತಣಿಸುತ್ತಿರುವ ಸವದತ್ತಿ ತಾಲ್ಲೂಕಿನಲ್ಲಿ ಮಲಪ್ರಭಾ ನದಿಗೆ ನಿರ್ಮಿಸಿರುವ ನವಿಲುತೀರ್ಥ ಜಲಾಶಯದಿಂದಲೇ ನೀರು ಪೂರೈಕೆಯಾಗಲಿದೆ. ಸವದತ್ತಿಯಿಂದಲೇ ನೀರನ್ನು ಶುದ್ಧೀಕರಿಸಿ ಪೈಪ್‌ಲೈನ್‌ಗಳ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಆಗಲಿದೆ.

₹1041.80 ಕೋಟಿಯ ಯೋಜನೆ:

ಗ್ರಾಮೀಣ ಭಾಗದ ದಾಹ ಹಿಂಗಿಸುವ ಈ ಮಹತ್ವಕಾಂಕ್ಷಿ ಯೋಜನೆಯ ಮೊತ್ತ ₹1041.80 ಕೋಟಿ. ಈ ಪೈಕಿ ಯೋಜನೆಯ ಅನುಷ್ಠಾನಕ್ಕೆ ₹900.46 ಕೋಟಿ ಹಾಗೂ ಪೂರ್ಣಗೊಂಡ ಬಳಿಕ ಐದು ವರ್ಷಗಳ ನಿರ್ವಹಣೆಗಾಗಿ ₹141.34 ಕೋಟಿ ಮೀಸಲಿಡಲು ಉದ್ದೇಶಿಸಲಾಗಿದೆ.

‘ಮೂರು ವರ್ಷದ ಯೋಜನೆ ಇದಾಗಿದ್ದು, 2021ರ ಮಾರ್ಚ್‌ನಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಸದ್ಯ ಯೋಜನೆಯ ಪ್ರಾಥಮಿಕ ಸಮೀಕ್ಷೆ ವರದಿ ಪೂರ್ಣಗೊಂಡಿದ್ದು, ವಿವರಣಾತ್ಮಕ ಸಮೀಕ್ಷೆ ವರದಿ ಸಿದ್ಧಪಡಿಸಲಾಗುತ್ತಿದೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಪಂಚಾಯ್ತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್ ಎಂ. ರಾಜಶೇಖರ್.

‘ಡಿಬಿಒಟಿ (ನಿರ್ಮಾಣ, ನಿರ್ವಹಣೆ, ಹಸ್ತಾಂತರ) ಮಾದರಿಯ ಯೋಜನೆ ಇದಾಗಿದೆ. ಭೂ ಸ್ವಾಧೀನ ಸೇರಿದಂತೆ ಎಲ್ಲಾ ಕೆಲಸಗಳನ್ನು ಗುತ್ತಿಗೆದಾರರೇ ಪೂರ್ಣಗೊಳಿಸುತ್ತಾರೆ. ಐದು ವರ್ಷದ ನಿರ್ವಹಣೆ ಬಳಿಕ, ಸರ್ಕಾರಕ್ಕೆ ಹಸ್ತಾಂತರಿಸುತ್ತಾರೆ. ಇದರಿಂದ ಯೋಜನೆ ವಿಳಂಬ ತಪ್ಪಲಿದೆ’ ಎಂದು ಅವರು ಹೇಳುತ್ತಾರೆ.

ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಯೋಜನೆ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸರಣಿ ಸಭೆ ನಡೆಸಿದ್ದಾರೆ. ಅಧಿಕಾರಿಗಳ ಜತೆಯೂ ಚರ್ಚಿಸಿ ಯೋಜನೆಯ ಕೆಲಸಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಯೋಜನೆಯ ಅಧ್ಯಯನಕ್ಕಾಗಿ ಎಲ್.ಎನ್.ಟಿ ಕಂಪನಿಗೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.

ವಿಳಂಬದ ಹಾದಿ ಹಿಡಿಯದಿರಲಿ:

ನಿರಂತರ ನೀರು ಪೂರೈಕೆಯ ಕನಸು ಈ ಭಾಗದ ಜನರಿಗೆ ಹೊಸತೇನಲ್ಲ. ಅವಳಿನಗರಕ್ಕೆ 24X7 ನೀರು ಕೊಡುವ ಯೋಜನೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ನಾಲ್ಕು ವರ್ಷದ ಹಿಂದೆಯೇ ಚಾಲನೆ ನೀಡಲಾಗಿತ್ತು. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಟೆಂಡರ್ ಪಡೆದಿದ್ದ ಕಂಪನಿಯ ನಿರ್ಲಕ್ಷ್ಯ ಹಾಗೂ ಕಾಮಗಾರಿ ವಿಳಂಬದಿಂದಾಗಿ, ಸದ್ಯ 22 ವಾರ್ಡ್‌ಗಳಿಗಷ್ಟೇ ನಿರಂತರ ನೀರು ಪೂರೈಕೆಯಾಗುತ್ತಿದೆ. ಈಗ ಮರು ಟೆಂಡರ್ ಕರೆದು ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ.

ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳ ವಿಳಂಬ ಜನರ ಸಂಕಷ್ಟವನ್ನು ದಿನೇ ದಿನೇ ಹೆಚ್ಚಿಸುತ್ತದೆ. ಜತೆಗೆ, ವರ್ಷದಿಂದ ವರ್ಷಕ್ಕೆ ಯೋಜನೆಯ ವೆಚ್ಚವೂ ಏರಿಕೆಯಾಗುತ್ತದೆ. ಹಾಗಾಗಿ, ಇಂತಹ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಬದ್ಧತೆಯನ್ನು ಸರ್ಕಾರ ತೋರಬೇಕು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಯೋಜನೆಗಳ ಪ್ರಗತಿ ಬಗ್ಗೆ ನಿಗಾ ವಹಿಸಿ ಸಕಾಲದಲ್ಲಿ ಪೂರ್ಣಗೊಳ್ಳುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT