ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಿದ್ದರಾಮಯ್ಯರಿಂದ ಕನ್ನಡ ಸಾಹಿತ್ಯ ಪರಿಷತ್ತು ಕಡೆಗಣನೆ: ಮಹೇಶ ಜೋಶಿ ಕಿಡಿ

Published 13 ಜನವರಿ 2024, 12:24 IST
Last Updated 13 ಜನವರಿ 2024, 12:24 IST
ಅಕ್ಷರ ಗಾತ್ರ

ಧಾರವಾಡ: ‘ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ದಿನ ನಿಗದಿಗೆ ಪೂರ್ವಭಾವಿಸಭೆ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಗೆ ಮೂರು ಬಾರಿ ಸಮಯ ನೀಡಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದವರು. ಅವರು ಹಳೆಯ ಮೈಸೂರು ಭಾಗದವರು, ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವ ತಿಳಿದಿರುವವರು. ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದರು.

‘ಕರ್ನಾಟಕ ಎಂದು ನಾಮಕರಣವಾದ ನಂತರ ಮೊದಲ ಸಮ್ಮೇಳನ ಮಂಡ್ಯದಲ್ಲಿ ಜರುಗಿತ್ತು. ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಈ ವರ್ಷದಲ್ಲಿ ಮತ್ತೆ ಮಂಡ್ಯಕ್ಕೆ ಸಮ್ಮೇಳನ ನಿಗದಿಯಾಗಿದೆ. ಇದು ಕಾಕತಾಳೀಯ. 2024ರಲ್ಲಿ ಸಮ್ಮೇಳನ ಆಗಲೇಬೇಕು. ಸಮ್ಮೇಳನ ದಿನ ನಿಗದಿಮಾಡಲು ಆಸಕ್ತಿ ತೋರುತ್ತಿಲ್ಲ. ಸರ್ಕಾರಕ್ಕೆ ಪರಿಷತ್ತಿನ ಬಗ್ಗೆ ಗೌರವ ಕಡಿಮೆಯಾಗಿದೆ‘ ಎಂದು ಅನಿಸುತ್ತಿದೆ’ ಎಂದು ಹೇಳಿದರು.

‘ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಜೊತೆ ಚರ್ಚಿಸಿದ್ದೇನೆ. ಚಲುವರಾಯಸ್ವಾಮಿ ಅವರ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನ್ನೊಂದು ವಾರದಲ್ಲಿ ಭೇಟಿ ಮಾಡಿ ಸಮ್ಮೇಳನದ ದಿನ ನಿಗದಿ ಮಾಡಲು ಪ್ರಯತ್ನಿಸುತ್ತೇನೆ.

ಸಮ್ಮೇಳನ ಆಯೋಜನೆಗೆ ₹25 ಕೋಟಿ ಅನುದಾನ ಒದಗಿಸುವಂತೆ ಕೋರುತ್ತೇವೆ.

‘ನಾನು ಎಡಪಂಥದವನೂ ಅಲ್ಲ, ಬಲಪಂಥದವನೂ ಅಲ್ಲ. ಕನ್ನಡ ಪಂಥದವನು. ಸಿ.ಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಶಿಷ್ಟಾಚಾರ ಪಾಲಿಸಿ ಕರೆದರೆ ಮಾತ್ರ ಹೋಗುತ್ತೇನೆ’ ಎಂದರು.

‘ಸರ್ಕಾರವು ನಾಡಹಬ್ಬ ದಸರಾ, ಹಂಪಿ ಉತ್ಸವಗಳನ್ನು ಆಯೋಜಿಸಿದೆ. ಆದರೆ, ಕನ್ನಡದ ಹಬ್ಬ ಸಮ್ಮೇಳನ ಆಯೋಜನೆಗೆ ಆಸಕ್ತಿ ತೋರುತ್ತಿಲ್ಲ’ ಎಂದು ಅವರು ದೂರಿದರು.

‘ಕೊಲ್ಲಾಪುರದಲ್ಲಿ ಕನ್ನಡ ಫಲಕಗಳನ್ನು ಸುಟ್ಟಿರುವುದು ಖಂಡನೀಯ. ಈ ಕೃತ್ಯ ರಾಜಕೀಯ ಪ್ರೇರಿತ ಕುಚೇಷ್ಟೆ. ಮರಾಠಿಗರು ಕನ್ನಡಕ್ಕೆ ಗೌರವ ನೀಡಬೇಕು’ ಎಂದು ಪ್ರತಿಕ್ರಿಯಿಸಿದರು.

‘ಕನ್ನಡ ಶಾಲೆಗಳನ್ನು ಮುಚ್ಚಬಾರದು ಮತ್ತು ಈ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಲು ನಿರ್ಣಯಿಸಲಾಗಿದೆ. ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳು ನಿರ್ಣಯಕ್ಕೆ ಬೆಂಬಲ ಸೂಚಿಸಿದ್ಧಾರೆ. ಹಿಂದಿ ಹೇರಿಕೆಯನ್ನು ಒಪ್ಪಲ್ಲ’ ಎಂದರು.

‘ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ನವೆಂಬರ್‌ನಲ್ಲಿರೂಪಿಸಲಾಗಿದೆ. ಇನ್ನೂ ಅನುಷ್ಠಾನಗೊಳಿಸಿಲ್ಲ. ವಿಧೇಯಕ ಅನುಷ್ಠಾನಕ್ಕೆ ಸರ್ಕಾರವು ತಕ್ಷಣವೇ ಆಡಳಿತಾತ್ಮಕ ಆದೇಶ ಹೊರಡಿಸಬೇಕು. ಶಿಕ್ಷಣ, ಉದ್ಯೋಗ, ವ್ಯಾಪಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT