ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಆಯ್ಕೆ: ಹೊರಟ್ಟಿಗೆ ಸಿಗುವುದೇ ಅವಕಾಶ?

Last Updated 2 ಡಿಸೆಂಬರ್ 2022, 13:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ ತಿಂಗಳ 19ರಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ದಿನ ಹಾಗೂ ಸಮಯವನ್ನು ನಿಗದಿಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಎರಡು ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯು ನೀಡಿರುವುದು ಇದಕ್ಕೆ ಇಂಬು ನೀಡಿದೆ.

ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿರುವ, ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದ ಬಸವರಾಜ ಹೊರಟ್ಟಿ ಸಭಾಪತಿ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ವಿವಿಧ ಪಕ್ಷಗಳಿಂದ ಏಳು ಬಾರಿ ವಿಧಾನ ಪರಿಷತ್‌ಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮೇ ತಿಂಗಳಲ್ಲಿ ಸಭಾಪತಿ ಸ್ಥಾನಕ್ಕೆ ಹಾಗೂ ಜೆಡಿಎಸ್‌ಗೆ ರಾಜೀನಾಮೆ ನೀಡಿ, 8ನೇ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದರು.

ಬಿಜೆಪಿಗೆ ಸೇರುವಾಗ ಸಭಾಪತಿ ಸ್ಥಾನ ನೀಡುವುದಾಗಿ ಹೊರಟ್ಟಿಗೆ ಹಿರಿಯ ಮುಖಂಡರು ಭರವಸೆ ನೀಡಿದ್ದರು. ಅದೇ ರೀತಿ ಸೆಪ್ಟೆಂಬರ್‌ನಲ್ಲಿ ನಡೆದ ಜಂಟಿ ಅಧಿವೇಶನದ ವೇಳೆ ಹಾಲಿ ಸಭಾಪತಿಯಾಗಿದ್ದ ರಘುನಾಥರಾವ್‌ ಮಲ್ಕಾಪುರೆ ಅವರನ್ನು ಬದಲಾಯಿಸಿ, ಹೊರಟ್ಟಿ ಅವರನ್ನು ಆಯ್ಕೆ ಮಾಡುವ ಪ್ರಯತ್ನ ನಡೆದಿತ್ತು. ಕೊನೆಯ ಗಳಿಗೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಧ್ಯೆಪ್ರವೇಶದಿಂದಾಗಿ ನೇಮಕ ಪ್ರಕ್ರಿಯೆಗೆ ತಡೆಯುಂಟಾಯಿತು. ಆ ಪ್ರಕ್ರಿಯೆ ಈಗ ಪೂರ್ಣಗೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಹೊರಟ್ಟಿಯವರ ಬೆಂಬಲಿಗರು.

ಅಧಿವೇಶನ ಆರಂಭಗೊಂಡ ಮೊದಲ ಅಥವಾ ಎರಡನೇ ದಿನ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹೊರಟ್ಟಿ ಅವರು ಈಗಾಗಲೇ ಹಲವು ವರ್ಷಗಳ ಕಾಲ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಮತ್ತೆ ಸಭಾಪತಿಯಾಗಿ ಆಯ್ಕೆ ಮಾಡುವ ಮೂಲಕ ಅವರ ಅನುಭವದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರು, ಹೊರಟ್ಟಿ ಅವರ ಬೆಂಬಲಿಗರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ನಮ್ಮ ಮನವಿಗೆ ಬೊಮ್ಮಾಯಿ, ಜೋಶಿ, ಶೆಟ್ಟರ್‌ ಹಾಗೂ ಬಿಜೆಪಿಯ ಹಿರಿಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿಯೇ ಹೊರಟ್ಟಿ ಅವರು ಸಭಾಪತಿಯಾಗುವ ವಿಶ್ವಾಸವಿದೆ’ ಎಂದು ಸಂಘದ ಸದಸ್ಯ ಜಿ.ಆರ್. ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲ್ಕಾಪುರೆ ಮನವೊಲಿಸುವ ಪ್ರಯತ್ನ?
ವಿಧಾನ ಪರಿಷತ್ತಿನ ಹಾಲಿ ಸಭಾಪತಿಯಾಗಿರುವ, ಬೀದರ್‌ ಜಿಲ್ಲೆಯ ರಘುನಾಥರಾವ್‌ ಮಲ್ಕಾಪುರೆ ಅವರನ್ನು ಸ್ಥಾನ ಬಿಟ್ಟು ಕೊಡುವಂತೆ ಮನವೊಲಿಸುವ ಪ್ರಯತ್ನವನ್ನು ಹಿರಿಯ ಮುಖಂಡರು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವರ್ಷದ ಮೇ ತಿಂಗಳಿನಲ್ಲಿ ಮಲ್ಕಾಪುರೆ ಅವರು ಸಭಾಪತಿಯಾಗಿ ನೇಮಕವಾಗಿದ್ದಾರೆ. ಇದಕ್ಕೂ ಮೊದಲು ಅವರು, ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎರಡನೇ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ರಾಜೀನಾಮೆ ನೀಡಿದ ನಂತರ ಮಲ್ಕಾಪುರೆ ಆ ಹುದ್ದೆಗೇರಿದ್ದರು.

ಕುರುಬ ಸಮುದಾಯಕ್ಕೆ ಸೇರಿದ ಮಲ್ಕಾಪುರೆ ಅವರನ್ನು ಸಭಾಪತಿ ಹುದ್ದೆಯಿಂದ ಕೆಳಗಿಳಿಸಬಾರದೆಂದು ಸಮುದಾಯದ ಮುಖಂಡರು, ಮಠಾಧೀಶರು ಒತ್ತಾಯಿಸುತ್ತಿರುವುದು ಪಕ್ಷದ ಮುಖಂಡರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಮಲ್ಕಾಪುರೆ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT