ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಕ ಹೊಂದಾಣಿಕೆಗೂ ಮುನ್ನ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಿ

Last Updated 1 ಡಿಸೆಂಬರ್ 2018, 9:52 IST
ಅಕ್ಷರ ಗಾತ್ರ

ಮದುವೆಗೆ ಸಿದ್ಧರಾದ ಹುಡುಗ–ಹುಡುಗಿ ಯಾರೇ ಆಗಿರಲಿ, ಜಾತಕ–ಕುಂಡಲಿ ತೋರಿಸುವುದು ಬೇಕಿದ್ದರೆ ಆಮೇಲೆ ಇಟ್ಟುಕೊಳ್ಳಲಿ, ಆದರೆ ಇಬ್ಬರೂ ಕೂಡ ಮದುವೆಗೆ ಮುನ್ನ ಎರಡು ಬಾರಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಐವಿ–ಏಡ್ಸ್‌ ರೋಗಗಳ ತಜ್ಞ ವೈದ್ಯ ಡಾ.ಭರತರಾಜ್ ಪಿ. ಯಾಳಗಿ ಅವರು.

ಕ್ಷಣಿಕ ಸುಖದ ಬೆನ್ನತ್ತಿ ಬದುಕನ್ನು ನಾಶ ಮಾಡಿಕೊಳ್ಳುವ ಜನರಿಗೆ ಕಿವಿಮಾತು ಹೇಳುವ ಅವರು, ಎಚ್‌ಐವಿ–ಏಡ್ಸ್‌ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಅರಿವು, ಜಾಗೃತಿ ಮೂಡಿದೆ. ಉತ್ತಮ ಔಷಧಿಗಳು ಲಭ್ಯವಾಗುತ್ತಿವೆ. ಎಚ್‌ಐವಿ/ಏಡ್ಸ್ ರೋಗ ಇಳಿಮುಖವಾಗಿದೆ. ಹಾಗಂತ ಈ ಮಾರಕ ರೋಗವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಹುಟ್ಟುವ ಮಗುವಿನ ಹಿತದೃಷ್ಟಿಯಿಂದಲಾದರೂ ಮೊದಲೇ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ಅವರು.

ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ದಿಸೆಯಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಡಾ.ಯಾಳಗಿ ಅವರು, ಈ ನಿಟ್ಟಿನಲ್ಲಿ ಅರಿವು–ಶಿಕ್ಷಣ– ಆಪ್ತ ಸಮಾಲೋಚನೆ ಬಹಳ ಮುಖ್ಯ ಎನ್ನುತ್ತಾರೆ. ಇದಕ್ಕಾಗಿ ಈ ಭಾಗದಲ್ಲಿ ಲಯನ್ಸ್, ರೋಟರಿ, ಪೊಲೀಸ್‌ ಇಲಾಖೆ, ಸಂಘ ಸಂಸ್ಥೆಗಳಲ್ಲಿ 5–6 ಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಎಚ್‌ಐವಿ ಹೊಂದಿರುವ ಸುಮಾರು 150–180 ಜೋಡಿಗಳ ಮದುವೆ ನಿಶ್ಚಯ ಆಗಿದ್ದನ್ನು ತಡೆದಿದ್ದಾರೆ. ‘ಎಚ್‌ಐವಿ ಹೊಂದಿದ್ದ ಯುವಕರು ಯುವತಿಯರ ಬಾಳನ್ನು ಹಾಳು ಮಾಡಲು ನಾವು ಅವಕಾಶ ಕೊಡಲಿಲ್ಲ. ಬಹಳಷ್ಟು ಮಂದಿಗೆ ತಾವು ಈ ಭಯಾನಕ ರೋಗ ಹೊಂದಿದ್ದೇವೆ ಎನ್ನುವ ಅರಿವೂ ಇರುವುದಿಲ್ಲ’ ಎನ್ನುವ ಅವರು, ‘ಹಾಗಂತ ಎಚ್‌ಐವಿ ಪೀಡಿತರಿಗೆ ಇದೇ ರೋಗವನ್ನು ಹೊಂದಿರುವವರೊಂದಿಗೆ ಮದುವೆ ಕೂಡ ಮಾಡಿಸಿದ್ದೇವೆ’ ಎನ್ನುತ್ತಾರೆ.

ಎಚ್‌ಐವಿ–ಏಡ್ಸ್ ಬಗ್ಗೆ ಜನಸಾಮಾನ್ಯರು ಮಾತ್ರವಲ್ಲ, ವೈದ್ಯರಿಗೆ ಕೂಡ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ವೈದ್ಯರಿಗೆ ಹೆಚ್ಚಿನ ತಿಳಿವಳಿಕೆ ಮೂಡಿದರೆ ಮಾತ್ರ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ನೀಡಲು ಸಾಧ್ಯ ಎನ್ನುವುದು ಅವರ ಅಭಿಮತ. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಮದುವೆಗೂ ಮುನ್ನ ವಧು–ವರರ ಎಚ್‌ಐವಿ–ಏಡ್ಸ್ ಪರೀಕ್ಷೆ ಮಾಡಿಸುವುದನ್ನು ಕಡ್ಡಾಯ ಮಾಡುವ ಕುರಿತು ವರದಿಯನ್ನು ಕೊಟ್ಟಿದ್ದರು. ಆದರೆ ಅದು ಯಾವುದೋ ಕಾರಣಕ್ಕೆ ಜಾರಿಯಾಗಲಿಲ್ಲ.

ಎಚ್‌ಐವಿ ಬಂದರೆ ಚಿಕಿತ್ಸೆಗಾಗಿ ಹಿಂದೆಲ್ಲ ಲಕ್ಷಾಂತರ ರೂಪಾಯಿ ಬೇಕಿತ್ತು. ಆದರೆ ಈಗ ಸುಧಾರಿತ, ಪರಿಣಾಮಕಾರಿ ಔಷಧಿಗಳಿಂದಾಗಿ ₹3–4ಸಾವಿರಕ್ಕೆ ಔಷಧ ಸಿಗುತ್ತದೆ. ಬಡವರಿಗೆ ಸರ್ಕಾರವೇ ಉಚಿತ ಔಷಧಿ ನೀಡುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಹತೋಟಿಯಲ್ಲಿಟ್ಟುಕೊಳ್ಳಬಹುದು.

‘ಸದ್ಯಕ್ಕೆ ಈ ರೋಗದ ಬಗ್ಗೆ ಜನಜಾಗೃತಿ ಮೂಡುತ್ತಿದೆ. ರೋಗ ತಪಾಸಣೆಗೆ ಬರುವವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಆದರೆ ರೋಗ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ನಿರಂತರ ಅರಿವು–ಶಿಕ್ಷಣ–ಜಾಗೃತಿ ಮೂಡಿಸುವ ಮೂಲಕ ಈ ರೋಗದ ವಿರುದ್ಧ ಜಯ ಸಾಧಿಸಬೇಕಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT