ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಮಕ್ಕಳ ‘ಅಮ್ಮ’ ರತ್ನಾ ಮಾತಾಜಿ

ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ತ್ಯಾಗಮಯಿ ಮಾತೆ ರತ್ನಾ
Last Updated 8 ಮೇ 2022, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೊದಲೆಲ್ಲ ಹತ್ತಾರು ಮಕ್ಕಳ ಹೆತ್ತು ಸಲಹುತ್ತಿದ್ದರು. ಈಗೆಲ್ಲ ಒಂದು; ಹೆಚ್ಚೆಂದರೆ ಎರಡು ಮಕ್ಕಳ ಹೆತ್ತು ಪೋಷಿಸುವುದರಲ್ಲೇ ಪೋಷಕರು ಹೈರಾಣಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಮ್ಮ ಇದ್ದಾರೆ. ಇವರಿಗೆ ಒಂದಲ್ಲ; ಹತ್ತಲ್ಲ; ನೂರಾರು ಮಕ್ಕಳು. ಇವರ‍್ಯಾರಿಗೂ ಅವರು ಜನ್ಮ ನೀಡದಿದ್ದರೂ, ಅವರೆಲ್ಲರ ಪಾಲಿನ ಅಕ್ಕರೆಯ ಅಮ್ಮ ಇವರು. ಅವರೇ ರತ್ನಾ ಮಾತಾಜಿ.

ಕೇಶ್ವಾಪುರದಲ್ಲಿ ಸೇವಾ ಭಾರತಿ ಟ್ರಸ್ಟ್‌ ನಡೆಸುವ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ 2006ರಿಂದ ‘ಅಮ್ಮ’ನಾಗಿ ಅಲ್ಲಿನ ಅನಾಥ ಮಕ್ಕಳಿಗೆ ಅಮ್ಮನ ಪ್ರೀತಿ ಉಣಬಡಿಸುತ್ತ, ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ. ಮಕ್ಕಳ ನಲಿವಿನಲ್ಲಿ ತಮ್ಮ ಜೀವನದ ಕಹಿ ಘಟನೆಗಳನ್ನು ಮರೆಯುತ್ತಿದ್ದಾರೆ.

1999ರಲ್ಲಿ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಸೇವೆಯನ್ನೇ ದೀಕ್ಷೆಯಾಗಿ ಪಡೆದಿರುವ ಇವರು, ಹುಬ್ಬಳ್ಳಿಯ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ಒಂದೆರಡು ವರ್ಷದ ಮಟ್ಟಿಗೆ ಮಾತಾಜಿಯ ಜವಾಬ್ದಾರಿ ನಿರ್ವಹಿಸಲು ಬಂದವರು. ಆದರೆ ಒಂದು ದಿನ ನಡೆದ ಘಟನೆ ಅವರ ಬದುಕಿನಲ್ಲಿ ಅನಾಥ ಮಕ್ಕಳ ಪಾಲಿನ ಶಾಶ್ವತ ಅಮ್ಮನಾಗುವ ತಿರುವು ತಂದಿತು. ಹೀಗೆಂದು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಬಾಲ ಕಲ್ಯಾಣ ಕೇಂದ್ರದ ಎಲ್ಲ ಮಕ್ಕಳ ನನ್ನನ್ನು ಮಾತಾಜಿ ಎಂದೇ ಕರೆಯುತ್ತಿದ್ದರು. ಅದೊಂದು ದಿನ ಬಾಲಕಿಯೊಬ್ಬಳ ಬೆರಳುಗಳಿಗೆ ಗಾಯವಾದಾಗ ಅಮ್ಮಾ ಎಂದು ಕಿರುಚಿದಳು. ಅವಳ ಆ ಕೂಗಿಗೆ ನನ್ನ ಕರುಳು ಚುರುಕ್ಕೆಂದಿತು. ಅಮ್ಮನಾಗಿ ಅವಳನ್ನು ಸಂತೈಸಿದೆ. ಅಲ್ಲಿಂದ ಈವರೆಗೂ ಕೇಂದ್ರ ಬಿಟ್ಟು ಹೋಗುವ ಮನಸ್ಸನ್ನು ಬಿಟ್ಟೆ. ಈವರೆಗೆ ಇಲ್ಲಿ ನೂರಾರು ಮಕ್ಕಳು ನನ್ನ ಆರೈಕೆಯಲ್ಲಿ, ಜವಾಬ್ದಾರಿಯಲ್ಲಿ ಬೆಳೆದಿದ್ದಾರೆ. ಕಲಿತು, ಕೆಲಸಕ್ಕೆ ಸೇರಿ, ಮದುವೆಯಾಗಿದ್ದಾರೆ’ ಎಂದು ರತ್ನಾ ಮಾತಾಜಿ ಹೇಳಿದರು.

‘ಅಲೆಮಾರಿ ಜನಾಂಗದವರ ಮತ್ತು ಭಿಕ್ಷುಕರ ಪುಟ್ಟ ಮಕ್ಕಳು ಆಶ್ರಮ ಸೇರಿದಾಗ ಅಂತಹ ಮಕ್ಕಳನ್ನು ತಿದ್ದುವುದು ಸವಾಲೆನಿಸುತ್ತಿತ್ತು. ಇತರ ಮಕ್ಕಳೊಂದಿಗೆ ಹೊಂದಿಕೊಳ್ಳಲು ಅವರಿಗೆ ಕಷ್ಟವೆನಿಸುತ್ತಿತ್ತು. ಅಂಥವರನ್ನು ತಿದ್ದಿ ಬೆಳೆಸಿದ್ದೇನೆ. ಅಂಥ ಮಕ್ಕಳೂ ಓದಿ ನೌಕರಿ ಹಿಡಿದಿದ್ದಾರೆ’ ಎಂದು ಹೇಳುವಾಗ ಅವರ ಮೊಗದಲ್ಲಿ ಸಂತೃಪ್ತಿ ಗೋಚರಿಸಿತು.

‘ಹೆಣ್ಣುಮಕ್ಕಳು ದೊಡ್ಡವರಾಗುವಾಗ ಅನುಭವಿಸುವ ಭಯ, ದುಗುಡಗಳನ್ನು ನಿಭಾಯಿಸಿರುವೆ. ಎಷ್ಟೋ ಮಕ್ಕಳು ತಮಗೆನೋ ಆಗಿದೆ ಎಂದು ಐದಾರು ದಿನ ಊಟ ಬಿಟ್ಟು ಅಳುತ್ತ ಕಾಲಕಳೆಯುತ್ತಿದ್ದರು. ಅಂಥವರಿಗೆಲ್ಲ ಪ್ರೀತಿಯಿಂದ ತಿಳಿಹೇಳಿರುವೆ. ಹದಿಹರಯದ ಆಕರ್ಷಣೆ, ಅದರಿಂದ ಹೊರಬರುವ ಬಗೆ ಎಲ್ಲವನ್ನೂ ಅರುಹಿ ಪ್ರೌಢರನ್ನಾಗಿ ಬೆಳೆಸಿರುವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT