ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctors Day: ಚಿಕಿತ್ಸೆ ಜೊತೆ ಆತ್ಮವಿಶ್ವಾಸ ಮೂಡಿಸುವ ವೈದ್ಯರು

ಸವಾಲುಗಳ ನಡುವೆ ನಿರಂತರ ಸೇವಾ ಕಾರ್ಯ
Published 1 ಜುಲೈ 2023, 8:05 IST
Last Updated 1 ಜುಲೈ 2023, 8:05 IST
ಅಕ್ಷರ ಗಾತ್ರ

ಶಿವರಾಯ ಪೂಜಾರಿ

ಹುಬ್ಬಳ್ಳಿ: ರೋಗಿಗಳ ಪಾಲಿಗೆ ವೈದ್ಯರೇ ಜೀವನಧಾತರು. ಭುಜದ ಮೇಲೆ ಕೈಯಿಟ್ಟು, ‘ನಿಮಗೇನೂ ಆಗಿಲ್ಲ. ಬೇಗನೇ ಗುಣಮುಖರಾಗುವಿರಿ’ ಎಂದು ಹೇಳಿದರೆ ಸಾಕು, ರೋಗಿಯಲ್ಲಿ ಒಮ್ಮೆಲೇ ಆತ್ಮವಿಶ್ವಾಸ ಚಿಗುರುತ್ತದೆ. ಅನಾರೋಗ್ಯಕ್ಕೆ ಸಂಬಂಧಿಸಿದ ಚಿಂತೆ ನಿಧಾನವಾಗಿ ಕಣ್ಮರೆಯಾಗುತ್ತದೆ. ಜನರ ಆರೋಗ್ಯ ಸುಧಾರಿಸಲೆಂದೇ ಕೆಲವರು ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜೀವ ಪಣಕ್ಕಿಟ್ಟು ರೋಗಿಗಳನ್ನು ಬದುಕಿಸಲು ಪ್ರಯತ್ನಿಸುತ್ತಾರೆ. ಅಂಥವರಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಜುಲೈ 1ರ ವೈದ್ಯರ ದಿನಾಚರಣೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಜಿ.ಟಿ. ಪದಕಿ ಬರೀ ₹ 2ರ ಶುಲ್ಕ ಮತ್ತು ಮಂಡ್ಯದ ಡಾ. ಶಂಕರೇಗೌಡ ₹ 5 ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಬೆಂಗಳೂರಿನ ವೈದ್ಯ ಡಾ. ರಾಹುಲ್ ಕೂಡ ಬರೀ ₹ 10ರ ಶುಲ್ಕದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಇವರ ಸೇವೆಯನ್ನು ಮರೆಯಲಾಗದು.

ಅದೇ ರೀತಿ ಹುಬ್ಬಳ್ಳಿ–ಧಾರವಾಡ ದಲ್ಲೂ ವೈದ್ಯರು ರೋಗಿಗಳನ್ನು ಗುಣಮುಖರನ್ನಾಗಿಸುವ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಅವರ ಆರೈಕೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಥ ಕೆಲ ವೈದ್ಯರು ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ. ತಮ್ಮ ವೃತ್ತಿಯ ವೈಶಿಷ್ಟ್ಯತೆಯನ್ನು ವಿವರಿಸಿದ್ದಾರೆ.

ಡಾ. ಸಚಿನ್ ಹೊಸಕಟ್ಟಿ
ಡಾ. ಸಚಿನ್ ಹೊಸಕಟ್ಟಿ
ಡಾ. ಎಸ್.ಎಸ್.ಸಾಲಿಮಠ
ಡಾ. ಎಸ್.ಎಸ್.ಸಾಲಿಮಠ
ಡಾ. ಬಿ.ಸಿ.ರಾಯ್
ಡಾ. ಬಿ.ಸಿ.ರಾಯ್

ಡಾ. ವೆಂಕಟೇಶ

20 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವೆಂಕಟೇಶ ಮೊಗೇರ ಮೂತ್ರಪಿಂಡ ಕಸಿ ತಜ್ಞರು. ಸದ್ಯ ಹುಬ್ಬಳ್ಳಿಯ ಕಿಮ್ಸ್‌ನ ಮೂತ್ರಪಿಂಡ ವಿಭಾಗದ ಮುಖ್ಯಸ್ಥರು. ಕಿಮ್ಸ್‌ನಲ್ಲಿ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದ ಮೊದಲಿಗರು ಎಂಬ ಹೆಗ್ಗಳಿಕೆ ಇವರದ್ದು. ‘ಕಿಡ್ನಿ ಕಸಿ ವೈದ್ಯಕೀಯ ಕ್ಷೇತ್ರದಲ್ಲೇ ಸವಾಲಿನ ಕೆಲಸ. ಈವರೆಗೆ 79 ಜನರಿಗೆ ಕಿಡ್ನಿ ಕಸಿ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ 1000ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಿದ್ದೇನೆ. 49 ವರ್ಷದ ವ್ಯಕ್ತಿಯೊಬ್ಬರಿಗೆ ಲೀವರ್ ವೈಫಲ್ಯ ಆಗಿತ್ತು. ಅವರ ಹೆಂಡತಿಯೇ ಅರ್ಧ ಲಿವರ್ ಕೊಟ್ಟಿದ್ದರಿಂದ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಯಿತು. ಎರಡು ವರ್ಷಗಳ ಬಳಿಕ ಆ ವ್ಯಕ್ತಿಗೆ ಕಿಡ್ನಿ ವೈಫಲ್ಯಗೊಂಡಿತು. ಅಪಘಾತದಲ್ಲಿ ಮೆದುಳು ನಿಷ್ಟ್ರಿಯಗೊಂಡ ವ್ಯಕ್ತಿಯ ಕಿಡ್ನಿ ಪಡೆದು ಇವರಿಗೆ ಕಸಿ ಮಾಡಲಾಯಿತು. ಹುಬ್ಬಳ್ಳಿ ಭಾಗದಲ್ಲಿ ಮೊದಲ ಬಾರಿಗೆ ನಡೆದ ಪ್ರಯೋಗವಿದು’ ಎನ್ನುತ್ತಾರೆ ಡಾ.ವೆಂಕಟೇಶ ಮೊಗೇರ. ‘ದೇಶದಲ್ಲಿ ಅಂಗಾಂಗಗಳ ಅಗತ್ಯ ಇರುವವರ ಸಂಖ್ಯೆ ಬಹಳಷ್ಟಿದೆ. ಆದರೆ ದಾನಿಗಳ ಸಂಖ್ಯೆ ಶೇ 1ಕ್ಕಿಂತಲೂ ಕಡಿಮೆ ಇದೆ. ದೇಹದ ಹಲವು ಅಂಗಗಳನ್ನು ದಾನ ನೀಡಲು ಅವಕಾಶವಿದೆ. ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಮುಂದಾಗಬೇಕು’ ಎಂದು ಅವರು ಹೇಳುತ್ತಾರೆ. ಡಾ. ವೆಂಕಟೇಶ ಮೊಗೇರ ಅವರು ವಿವಿಧ ಸಂಘ–ಸಂಸ್ಥೆಗಳಿಂದ ಐಎಂಎ ಪ್ರೆಸೆಡೆಂಟ್ ಅವಾರ್ಡ್‌ ಐಕಾನಿಕ್ ನೆಪ್ರೊಲಾಜಿಸ್ಟ್ ಹುಬ್ಬಳ್ಳಿ ಅವಾರ್ಡ್‌ ಉತ್ತರ ಕರ್ನಾಟಕದ ಸಾಧಕರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಡಾ. ಸಚಿನ್ ಹೊಸಕಟ್ಟಿ

ಕೊರೊನಾ ತೀವ್ರವಾಗಿ ವ್ಯಾಪಿಸಿದ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯದಲ್ಲಿ ನಿರತರಾದ ವೈದ್ಯರಲ್ಲಿ ಹುಬ್ಬಳ್ಳಿಯ ಡಾ. ಸಚಿನ್ ಹೊಸಕಟ್ಟಿ ಕೂಡ ಒಬ್ಬರು. ಕೊರೊನಾ ಮೊದಲನೇ ಅಲೆಯಲ್ಲಿ ಕಿಮ್ಸ್‌ ಆಸ್ಪತ್ರೆಗೆ ದಾಖಲಾದ ಮೊದಲ ರೋಗಿಗೆ ಚಿಕಿತ್ಸೆ ನೀಡಿದವರು ಇವರೇ.

‘ಸುಮಾರು 10ರಿಂದ 12 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರಲ್ಲಿ ಧೈರ್ಯ ತುಂಬಿ ಗುಣಮುಖರನ್ನಾಗಿಸಿದ್ದಾರೆ. ಜನರು ಕೊರೊನಾ ಪರೀಕ್ಷೆಗೆ ಬಾರದ ಹಿನ್ನೆಲೆಯಲ್ಲಿ ಉದ್ಯಾನ ಕ್ರೀಡಾಂಗಣಗಳಲ್ಲಿ ಕೋವಿಡ್ ಕ್ಯಾಂಪ್ ಹಮ್ಮಿಕೊಂಡು ತಪಾಸಣೆ ನಡೆಸಿ ಸೋಂಕಿತರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.

‘ಹುಬ್ಬಳ್ಳಿ ಫಿಟ್‌ನೆಸ್ ಕ್ಲಬ್’ ಆರಂಭಿಸಿ ಮ್ಯಾರಥಾನ್ ಹಮ್ಮಿಕೊಂಡು ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಿರುವ ಇವರು ವೈದ್ಯ ವೃತ್ತಿಯ ಜೊತೆಗೆ ಪರಿಸರ ಕಾಳಜಿಯುಳ್ಳವರು. ಪರಿಸರ ಜಾಗೃತಿ ಮೂಡಿಸಲು ತಂಡವೊಂದನ್ನು ಕಟ್ಟಿಕೊಂಡು ಧಾರವಾಡ ಜಿಲ್ಲೆಯಲ್ಲಿ ಈವರೆಗೆ 20 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಇವರ ಸೇವೆಗೆ ಹಲವು ಸಂಘ–ಸಂಸ್ಥೆಗಳಿಂದ 60ಕ್ಕೂ ಅಧಿಕ ಪ್ರಶಸ್ತಿಗಳು ಸಂದಿವೆ.

ಎಸ್‌.ಎಸ್‌. ಸಾಲಿಮಠ

ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಹರ್ಲಾಪುರದ ಡಾ. ಎಸ್‌.ಎಸ್‌.ಸಾಲಿಮಠ ಅವರು 2006ರಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೂ ಯಾವುದೇ ರೋಗಿಗಳಿಂದ ಕನ್ಸಲ್ಟೇಷನ್ ಶುಲ್ಕ ಪಡೆಯದೇ ಚಿಕಿತ್ಸೆ ನೀಡುತ್ತಿದ್ದಾರೆ.

‘ಬಡ ಕುಟುಂಬವಾಗಿದ್ದರಿಂದ ತಮ್ಮ ವೈದ್ಯಕೀಯ ಶಿಕ್ಷಣಕ್ಕೆ ಬೇರೆಯವರು ಆರ್ಥಿಕ ಸಹಾಯ ಮಾಡಿದರು. ಅವರಿಗಾಗಿ ಈ ಸೇವೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ಡಾ. ಎಸ್‌.ಎಸ್‌.ಸಾಲಿಮಠ. ಕಿಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿನ ರೋಗಿಗಳ ಮೇಲೆ ಸಂಶೋಧನೆ ಮಾಡಿ ವೆಂಟಿಲೇಟರ್‌ ಹಾಕಿದ್ದರೂ ಟ್ಯೂಬ್‌ನ ನಳಿ ಮೂಲಕ ಆಹಾರ ನೀಡುವ ವಿಧಾನ ಕಂಡು ಹಿಡಿದಿದ್ದಾರೆ. ಹುಬ್ಬಳ್ಳಿ–ಧಾರವಾಡ ಸರ್ಕಾರಿ ನೌಕರರಿಗೆ ‘ಉಚಿತ ಆರೋಗ್ಯ ಸಹಾಯವಾಣಿ’ ಆರಂಭಿಸಿದ್ದಾರೆ.

ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗೆ ಬಿ.ಪಿ ಡಯಾಬಿಟೀಸ್ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ’ವೈದ್ಯರು ದಿನನಿತ್ಯವೂ ಸವಾಲುಗಳನ್ನು ಎದುರಿಸುತ್ತಾರೆ. ನಿತ್ಯವೂ ನಮ್ಮದು ಭಗವಂತನ ವಿರುದ್ಧದ ಹೋರಾಟ. ಜೀವ ಪಣಕ್ಕಿಟ್ಟು ರೋಗಿಗಳನ್ನು ಬದುಕಿಸಲು ಪ್ರಯತ್ನಿಸುತ್ತೇವೆ.ಅವರ ಸುಖ–ದುಃಖಗಳಲ್ಲಿ ಭಾಗಿಯಾಗುತ್ತೇವೆ. ರೋಗಿಗಳು ಆಸ್ಪತ್ರೆಯಿಂದ ಆರೋಗ್ಯವಾಗಿ ಸಂತಸದಿಂದ ಮನೆಗೆ ಮರಳಿದರೆ ಅದುವೇ ನಮ್ಮ ಸಂತೋಷ’ ಎನ್ನುತ್ತಾರೆ ಡಾ. ಸಾಲಿಮಠ.

ಡಾ. ಬಿ.ಸಿ.ರಾಯ್ ನೆನಪಲ್ಲಿ ಆಚರಣೆ
ಬಿ.ಸಿ.ರಾಯ್‌. ವೈದ್ಯಕೀಯ ಕ್ಷೇತ್ರದ ಮಹಾನ್‌ ತಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜ ಸೇವಕರಾಗಿ ಹೆಸರಾಗಿದ್ದರು. ವೈದ್ಯಲೋಕಕ್ಕೆ ಇವರು ನೀಡಿದ ಕೊಡುಗೆ ಅನನ್ಯ ಅದ್ವಿತೀಯ. ಇದನ್ನು ಗಮನಿಸಿಯೇ ಅವರು ಜನಿಸಿದ ಜುಲೈ 1ನೇ ತಾರೀಖನ್ನೇ ದೇಶದಲ್ಲಿ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಡಾ. ಬಿ.ಸಿ.ರಾಯ್‌ ಅವರು ಜನಿಸಿದ್ದು 1882ರ ಜುಲೈ 1. ಕೊನೆಯುಸಿರೆಳೆದಿದ್ದು 1962ರ ಜುಲೈ 1ರಂದು. ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು ಸಂಭವಿಸಿದ್ದು ಕಾಕತಾಳೀಯ. ಪ್ಲೇಗ್‌ನಿಂದ ಪಶ್ಚಿಮ ಬಂಗಾಳ ನಲುಗಿಹೋಗಿತ್ತು. ಈ ರೋಗ ಸಾವಿರಾರು ಜನರನ್ನು ಬಲಿ ಪಡೆಯುತ್ತಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಬಿ.ಸಿ.ರಾಯ್‌ ಅವರು ಜೀವದ ಹಂಗು ತೊರೆದು ರೋಗಿಗಳನ್ನು ಬದುಕಿಸಿದ್ದರು. ಸ್ವಂತ ಹಣದಲ್ಲೇ ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆಗೆ ಬೇಕಾದ ವೆಚ್ಚ ಭರಿಸಿದ್ದರು.ಮಹಿಳೆಯರಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ಆರಂಭಿಸಿದ್ದರು. ಇವರ ನೆನಪಿಗಾಗಿ ರಾಷ್ಟ್ರದಾದ್ಯಂತ ವೈದ್ಯರ ದಿನ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿವರ್ಷ ಡಾ. ಬಿ.ಸಿ.ರಾಯ್‌ ಪ್ರಶಸ್ತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT