ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಾವಯವ ಕ್ರಾಂತಿಗೆ ಬೇಕಿದೆ ಉತ್ಸಾಹ, ಪ್ರೋತ್ಸಾಹ

Published 18 ಡಿಸೆಂಬರ್ 2023, 7:34 IST
Last Updated 18 ಡಿಸೆಂಬರ್ 2023, 7:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಾರುಕಟ್ಟೆಯ ತಂತ್ರಗಾರಿಕೆಯಲ್ಲಿ ಸಿಲುಕಿ ವೇಗವಾಗಿ ಫಸಲು ಸಿಗಬೇಕು, ಹೆಚ್ಚು ಹಣವನ್ನೂ ಗಳಿಸಬೇಕೆಂಬ ಆಸೆಯಿಂದ  ರಾಸಾಯನಿಕ, ಕೀಟನಾಶಕಗಳನ್ನು ಯತೇಚ್ಛವಾಗಿ ಬಳಸುತ್ತಿದ್ದ ಬಹುತೇಕ ರೈತರು ಇದೀಗ ನೈಸರ್ಗಿಕ ವಿಧಾನವಾದ ಸಾವಯವ ಕೃಷಿ ಪದ್ಧತಿಯತ್ತ ಹೊರಳುತ್ತಿದ್ದಾರೆ. ತಮ್ಮ ಪ್ರಯತ್ನದ ಜೊತೆಜೊತೆಗೆ ಸರ್ಕಾರದ ಪ್ರೋತ್ಸಾಹವೂ ಸಿಕ್ಕರೆ, ‘ಸಾವಯವ ಕೃಷಿ ಕ್ರಾಂತಿ’ ಸಾಧ್ಯ ಎಂಬ ಅಭಿಪ್ರಾಯ ರೈತರದ್ದಾಗಿದೆ.

ಅತಿಯಾದ ರಸಗೊಬ್ಬರ, ಕೀಟನಾಶಕ ಮೊದಲಾದ ರಾಸಾಯನಿಕಗಳ ಬಳಕೆಯಿಂದ ಧಾರವಾಡ ಜಿಲ್ಲೆ ಸೇರಿದಂತೆ ದೇಶದಾದ್ಯಂತ ಕೃಷಿ ಭೂಮಿ ರೋಗಪೀಡಿತವಾಗಿದೆ. ಪರಿಣಾಮ ಭೂಮಿಯಲ್ಲಿ ಮೂಡುವ ಬೆಳೆಗಳು ವಿಷಮಯವಾಗಿದ್ದು, ಇಂತಹ ಆಹಾರ ಸೇವಿಸುವುದರಿಂದ ಸಾವಿರಾರು ರೋಗಗಳು ಬಾಧಿಸುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದು, ಜೀವಿತಾವಧಿ ಕಡಿಮೆಯಾಗುತ್ತಿರುವುದು, ಪ್ರಾಣಿಗಳ ಮಾರಣಹೋಮ, ಪರಿಸರ ಮಾಲಿನ್ಯ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಇದೇ ಕಾರಣ ಎಂಬುದು ತಜ್ಞರ ಅಭಿಮತ. ಇದು ಎಚ್ಚರಿಕೆಯ ಕರೆಗಂಟೆಯೂ ಹೌದು.

ಇಂತಹ ವಿಷಮ ಪರಿಸ್ಥಿತಿಯಿಂದ ಹೊರಬರಲು ಇರುವ ದಾರಿಗಳಲ್ಲಿ ಸಾವಯವ ಕೃಷಿ ಪದ್ಧತಿ ಪ್ರಮುಖವಾದದ್ದು. ಸತ್ವ ಕಳೆದುಕೊಂಡು ರೋಗದಿಂದ ಬಳಲುತ್ತಿರುವ ಭೂಮಿಗೆ ‘ಸಾವಯವ’ ಚಿಕಿತ್ಸೆ ನೀಡಿ,  ಉಪಚಾರ ಮಾಡಬೇಕಿದೆ.

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು, ಆರೋಗ್ಯಕರ ಕೃಷಿ ಚಟುವಟಿಕೆಗೆ ಪೂರವಾದ ಬೀಜೋಪಚಾರ, ಗೊಬ್ಬರ, ಕೀಟನಾಶಕ ತಯಾರಿಸಿ, ಅವುಗಳಿಂದ ಸತ್ವಯುತ ಬೆಳೆ ಬೆಳೆಯುವ ಕ್ರಮವಿದು. ಇದರಿಂದ ಭೂಮಿಯ ಫಲವತ್ತತೆ ಚಿರಕಾಲ ಉಳಿಯುತ್ತದೆ. ಇಲ್ಲಿ ಬೆಳೆದ ಉತ್ಪನ್ನಗಳ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಮ್ಮ ಆರೋಗ್ಯದೊಂದಿಗೆ ಭೂಮಿಯ ಆರೋಗ್ಯವೂ ವೃದ್ಧಿಸುತ್ತದೆ.

ಭೂಮಿಯನ್ನು ರೋಗಮುಕ್ತವಾಗಿಸಲು ಇತ್ತೀಚಿನ ವರ್ಷಗಳಲ್ಲಿ ಹಲವು ರೈತರು ಸಾವಯವ  ಕೃಷಿಯ ಕಂಕಣ ತೊಟ್ಟಿದ್ದಾರೆ. ಆರಂಭದಲ್ಲಿ ಲಾಭ–ನಷ್ಟ ಲೆಕ್ಕಿಸದೆ, ದೀರ್ಘಕಾಲದ ಪ್ರಯೋಜನೆ ಪಡೆಯಲು ಇನ್ನೂ ಹೆಚ್ಚಿನ ರೈತರು ಉತ್ಸಾಹ ತೋರಬೇಕಿದೆ. ಅದಕ್ಕೆ ತಕ್ಕಂತೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳೂ ಸಿಗಬೇಕಿದೆ. ಅಗತ್ಯ ಜಾಗೃತಿ, ಯೋಜನೆ, ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆ ಮೊದಲಾದ ಸೌಕರ್ಯಗಳ ಬಗ್ಗೆ ಸರ್ಕಾರ ಯೋಚಿಸಬೇಕು, ಯೋಜಿಸಬೇಕು ಎಂದು ರೈತರು ಆಗ್ರಹಿಸುತ್ತಾರೆ.

‘ಹೆಚ್ಚು ಪ್ರಚಾರ ಅವಶ್ಯ’

ಅಳ್ನಾವರ: ‘ಹೆಚ್ಚಿನ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆ ಮತ್ತಷ್ಟು ಪ್ರಚಾರ ಹಾಗೂ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರೈತರಲ್ಲಿ ಆಸಕ್ತಿ ಇದ್ದರೂ ಮಾಹಿತಿ ಕೊರತೆಯಿಂದ ಮನೆಗೆ ಬೇಕಾದಷ್ಟು ಮಾತ್ರ ಬೆಳೆ ಬೆಳೆಯುತ್ತಿದ್ದಾರೆ’ ಎಂದು ಕುಂಬಾರಕೊಪ್ಪ ಗ್ರಾಮದ ರೈತ ಅಶೋಕ ಜೋಡಟ್ಟಿಯವರ ಹೇಳಿದರು.

ಪೂರಕ ಮಾಹಿತಿ: ರಾಜಶೇಖರ ಸುಣಗಾರ, ರಮೇಶ ಓರಣಕರ, ಬಸನಗೌಡ ಪಾಟೀಲ

ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ರೈತ ಈಶ್ವರ ಮಾಳಣ್ಣವರ ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪನ್ನು ದೇಶಪಾಂಡೆ ಫೌಂಡೇಷನ್‌ ಅಧಿಕಾರಿಗಳು ವೀಕ್ಷಿಸಿದರು
ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ರೈತ ಈಶ್ವರ ಮಾಳಣ್ಣವರ ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪನ್ನು ದೇಶಪಾಂಡೆ ಫೌಂಡೇಷನ್‌ ಅಧಿಕಾರಿಗಳು ವೀಕ್ಷಿಸಿದರು
ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ರೈತ ಬಸವರಾಜ ಗಾಣಿಗೇರ ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆ
ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ರೈತ ಬಸವರಾಜ ಗಾಣಿಗೇರ ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆ
ಅಂಕಿ–ಅಂಶ 43 21–22ನೇ ಸಾಲಿನಲ್ಲಿ ಸಾವಯವ ಕೃಷಿ ಪ್ರಮಾಣಪತ್ರ ಪಡೆದ ರೈತರು 21 22–23 ನೇ ಸಾಲಿನಲ್ಲಿ ಪ್ರಮಾಣಪತ್ರ ಪಡೆದ ರೈತರು
ಮಣ್ಣಿನ ಗುಣಮಟ್ಟ ಕಾಪಾಡಲು ಸಾವಯವ ಕೃಷಿ ಸಹಕಾರಿಯಾಗಿದೆ. ದರ ಮತ್ತು ಇಳುವರಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಈ ಪದ್ಧತಿಗೆ ಒತ್ತು ನೀಡುತ್ತಿದ್ದೇನೆ
ಮೈಲಾರಪ್ಪ ಗುಡ್ಡಪ್ಪನವರ ರೈತ ಕುರುಬಗಟ್ಟಿ (ಉಪ್ಪಿನಬೆಟಗೇರಿ)
ಸಾವಯವ ವಿಧಾನದಲ್ಲಿ ಮೆಣಸಿನಕಾಯಿ ಶೇಂಗಾ ಬೆಳೆದಿದ್ದೇನೆ. ಕೃಷಿಗೆ ಬೇಕಾದ ಸಾವಯವ ಅಂಶಗಳನ್ನು ಮನೆಯಲ್ಲೇ ತಯಾರಿಸುತ್ತೇನೆ
ಬಸವರಾಜ ಗಾಣಿಗೇರ ರೈತ ಹಿರೇಹರಕುಣಿ (ಕುಂದಗೋಳ)
ಸರ್ಕಾರದಿಂದ ಅಗತ್ಯ ನೆರವು ಸಿಕ್ಕರೆ ಅನುಕೂಲವಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಲು ಸೆಗಣಿ ಗೊಬ್ಬರ ಆಕಳು ಗಂಜಲು ಬಳಸುತ್ತಿರುವೆ
ಷಣ್ಮುಖ ಅಂಗಡಿ ರೈತ ತರ್ಲಘಟ್ಟ (ಕುಂದಗೋಳ)
‘ರೈತರಿಂದಲೇ ಮಾರಾಟ’
‘ಮೊದಲು ನಾನೂ ಯತೇಚ್ಛವಾಗಿ ರಾಸಾಯನಿಕಗಳ ಬಳಕೆ ಮಾಡುತ್ತಿದ್ದೆ. ನಂತರ ಸಾವಯವ ಕೃಷಿ ಪದ್ಧತಿಯಲ್ಲೇ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಆರಂಭಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಕಣ್ಣೇರಿ ಮಠ ಹಾಗೂ ಖಾಸಗಿ ಸಂಸ್ಥೆಗಳು ಸಾವಯವ ಕೃಷಿಕರಿಗೆ ನೆರವು ನೀಡುತ್ತಿದ್ದಾರೆ. ರೈತರೇ ಸೇರಿಕೊಂಡು ಸಾವಯವ ಸಿರಿಧಾನ್ಯ ಒಕ್ಕೂಟ ಹುಬ್ಬಳ್ಳಿ  ಎಪಿಎಂಸಿಯಲ್ಲಿ ಬಸವೇಶ್ವರ ಕೃಷಿಕರ ಸಂಘ ಗಾಮನಗಟ್ಟಿಯಲ್ಲಿ ಸಿದ್ಧೇಶ್ವರಪ್ಪ ರೈತರ ಉತ್ಪಾದಕರ ಸಂಘ ಸ್ಥಾಪಿಸಿಕೊಂಡು ಮಧ್ಯವರ್ತಿಗಳಿಲ್ಲದೆ ನೇರವಾಗಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ’ ಎಂದು ಗಾಮನಗಟ್ಟಿಯ ರೈತ ಈಶ್ವರ ಮಾಳಣ್ಣವರ ತಿಳಿಸಿದರು.
‘ರೈತರಿಗಿರಲಿ ತಾಳ್ಮೆ’
‘ರಾಸಾಯನಿಕ ಬಳಕೆಯಿಂದ ನಿತ್ರಾಣಗೊಂಡ ಭೂಮಿ ಚೇತರಿಸಿಕೊಳ್ಳಲು ಸಮಯಬೇಕು. ಬೇಗ ಇಳುವರಿ ಸಿಗಲಿಲ್ಲ ಹೆಚ್ಚು ಫಸಲು ಬರಲಿಲ್ಲ ಎಂದು ಸಾವಯವ ಕೃಷಿಕರು ಮತ್ತೆ ರಾಸಾಯನಿಕ ಬಳಸಬಾರದು. ತಾಳ್ಮೆ ಇರಬೇಕು. ಸಾವಯವ ಕೃಷಿ ವಿಧಾನದಿಂದ ನಾನು ಉತ್ತಮ ಆದಾಯ ಗಳಿಸುತ್ತಿರುವೆ. ಇತರರಿಗೂ ಮಾರ್ಗದರ್ಶನ ನೀಡುತ್ತಿದ್ದೇನೆ’ ಎಂದು ಅಗಡಿ ರೈತ ಬಸಯ್ಯ ಮಂಟೆಯ್ಯನವರ ಹೇಳಿದರು.
ಸಾವಯವ ಕೃಷಿಗೆ ಪ್ರಮಾಣ ಪತ್ರ
ಸಾವಯವ ಕೃಷಿ ಮಾಡುವ ರೈತರಿಗೆ ಕರ್ನಾಟಕ ರಾಜ್ಯ ಸಾವಯವ ಕೃಷಿ ಪ್ರಮಾಣೀಕರಣ ಸಂಸ್ಥೆಯಿಂದ ಪ್ರಮಾಣ ಪತ್ರ ನೀಡಲಾಗುತ್ತಿದೆ. ಮೂರು ವರ್ಷ ಕೃಷಿಭೂಮಿಗೆ ಅಧಿಕಾರಿಗಳು ಭೇಟಿ ನೀಡಿ ಮಣ್ಣು ಬೆಳೆ ಪರಿಶೀಲಿಸುವರು. ಮೂರು ವರ್ಷದ ನಂತರ ಭೂಮಿ ಸಾವಯವ ಪದ್ಧತಿಗೆ ಹೊಂದಿಕೊಳ್ಳುವುದರಿಂದ ಪ್ರಮಾಣ ಪತ್ರ ನೀಡಲಾಗುತ್ತದೆ.
‘500 ಹೆಕ್ಟೇರ್‌ನಲ್ಲಿ ಪಿಕೆವಿವೈ’
‘ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ (ಪಿಕೆವಿವೈ) ಕಲಘಟಗಿ ತಾಲ್ಲೂಕಿನ ದುಮವಾಡ ಹೋಬಳಿಯ 500 ಹೆಕ್ಟೇರ್‌ ಮಾವು ಬೆಳೆಯುವ ಭೂಮಿಯಲ್ಲಿ ಸಾವಯವ ಪದ್ಧತಿ ಅಳವಡಿಸುವ ಕಾರ್ಯ ಜಾರಿಯಲ್ಲಿದೆ. ಮೂರು ವರ್ಷಗಳವರೆಗೆ ಜೈವಿಕ ಗೊಬ್ಬರ ಮತ್ತಿತರ ಸಾವಯವ ಚಟುವಟಿಕೆಗಳಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಹೆಕ್ಟೇರ್‌ಗೆ ₹31000 ನೀಡಲಾಗುತ್ತದೆ. ತರಬೇತಿ ನೆರವು ಪ್ರಮಾಣಪತ್ರಕ್ಕಾಗಿ ಹೆಕ್ಟೇರ್‌ಗೆ ₹19000 ಶುಲ್ಕ ಪಡೆಯಲಾಗುತ್ತದೆ’ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಶಾಂತ್ ದೇವರಮನೆ ತಿಳಿಸಿದರು. ‘ಸದ್ಯಕ್ಕಿಲ್ಲ ಹೊಸ ಯೋಜನೆ’ ‘ಸಾವಯವ ಕೃಷಿಕರಿಗಾಗಿ ಕೃಷಿ ಇಲಾಖೆಯಿಂದ ಸದ್ಯ ಯಾವುದೇ ಹೊಸ ಯೋಜನೆ ಅನುಷ್ಠಾನಗೊಂಡಿಲ್ಲ. ಎರಡು ವರ್ಷದ ಹಿಂದೆ ಎರೆಹುಳು ಗೊಬ್ಬರ ಘಟಕ ಜೀವಾಮೃತ ತೊಟ್ಟಿ ನಿರ್ಮಾಣ ಡ್ರಂ ಖರೀದಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು. ಈ ಯೋಜನೆಗಳು ಸದ್ಯ ಮುಂದುವರಿದಿಲ್ಲ. ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ನೀಡುವ ತರಬೇತಿಯಲ್ಲಿ ಸಾವಯವ ವಿಧಾನದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಆಸಕ್ತ ರೈತರಿಗೆ ಈಗಾಗಲೇ ಸಾವಯವ ಕೃಷಿ ಮಾಡುತ್ತಿರುವ ರೈತರ ಮೂಲಕ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕಿ ಆಶಾ ಹೇಳಿದರು. ‘ರಿಯಾಯ್ತಿ ದರದಲ್ಲಿ ಹಸಿರೆಲೆ ಗೊಬ್ಬರ ವಿತರಿಸಿದ್ದೇವೆ. ಬೇಡಿಕೆ ಅನುಸಾರ ಎರೆಹುಳು ಗೊಬ್ಬರ ವಿತರಣೆ ಮಾಡಲಾಗುವುದು. ಪ್ರಮಾಣಪತ್ರ ಪಡೆದರೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಅನುಕೂಲವಾಗುತ್ತದೆ’ ಎಂದು ಕುಂದಗೋಳದ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ತಿಳಿಸಿದರು.
ಪ್ರಾತ್ಯಕ್ಷಿಕೆ ಜಾಗೃತಿ ಮಾರ್ಗದರ್ಶನ
‘ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಾವಯವ ಕೃಷಿ ಸಂಸ್ಥೆ ಮೂಲಕ 2006ರಿಂದ ಸಾವಯವ ಕೃಷಿ ವಿಧಾನ ವಿಸ್ತರಣೆಗೆ ಸಂಶೋಧನೆ ನಡೆಸಲಾಗುತ್ತಿದೆ. 17 ಬಗೆಯ ಬೆಳೆಗಳನ್ನು ಬೆಳೆ ವಿಧಾನವನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುವ ಜೊತೆಗೆ ಜೈವಿಕ ಗೊಬ್ಬರ ಜೈವಿಕ ಕೀಟನಾಶಕ ಜೈವಿಕ ರೋಗನಾಶಕ ವಿತರಣೆ ಮಾಡಲಾಗುತ್ತಿದೆ. ಸುಮಾರು 50 ಎಕರೆಯಲ್ಲಿ ನಿರಂತರ ಸಂಶೋಧನೆ ನಡೆಸಿ ರೈತರಲ್ಲಿ ಭರವಸೆ ತುಂಬುತ್ತಿದ್ದೇವೆ. ರೈತರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಲಾಗಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀಪಾದ ಕುಲಕರ್ಣಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT