ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಟೋಲ್‌ ಸಂಗ್ರಹ ನಿಲ್ಲಿಸಲು ಆಗ್ರಹ

Last Updated 9 ಏಪ್ರಿಲ್ 2022, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಕ್ರಮವಾಗಿ ಟೋಲ್‌ ಸಂಗ್ರಹ ಮಾಡಲಾಗುತ್ತಿದ್ದು, ಕೂಡಲೇ ಟೋಲ್ ಸಂಗ್ರಹ ನಿಲ್ಲಿಸಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಿಂದ ಹೊಸಪೇಟೆವರೆಗಿನ 143.78 ಕಿ.ಮೀ ಹೆದ್ದಾರಿಯಲ್ಲಿ ₹2,293 ಕೋಟಿ ಮೊತ್ತದ ಚತುಷ್ಪಥ ಹಾಗೂ ₹1,625 ಕೋಟಿ ವೆಚ್ಚದ ಎರಡು ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ 2016ರಲ್ಲಿ ಚಾಲನೆ ನೀಡಲಾಯಿತು. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷಗಳ ಗುರಿ ನೀಡಲಾಗಿದ್ದರೂ, ಈವರೆಗೆ ಪೂರ್ಣಗೊಂಡಿಲ್ಲ’ ಎಂದು ದೂರಿದರು.

‘ಕಾಮಗಾರಿ ಪೂರ್ಣಗೊಳಿಸದೆ ಟೋಲ್‌ ಸಂಗ್ರಹಿಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಲಾಗುತ್ತಿದೆ. ಇದರಿಂದ ಬಸ್‌ ಪ್ರಯಾಣ ದರ ಏರಿಕೆಯಾಗಿ, ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಹೆದ್ದಾರಿ ಸುತ್ತಲಿನ ಹಳ್ಳಿಗರು, ರೈತರಿಂದ ಟೋಲ್‌ ವಸೂಲಿ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಹೆದ್ದಾರಿಯಲ್ಲಿ ಪ್ರತಿ 2 ಕಿ.ಮೀ.ಗೆ ಬಿರುಕು ಉಂಟಾಗಿದೆ. ಹೀಗಿದ್ದರೂ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ, ಜನರನ್ನು ಲೂಟಿ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘‌ಕಾಮಗಾರಿ ಪೂರ್ಣಗೊಳಿಸದೆ ಟೋಲ್‌ ಸಂಗ್ರಹಿಸಬಾರದು ಹಾಗೂ ರೈತರಿಂದ ಹಣ ಪಡೆಯಲೇಬಾರದೆಂದು ಜಿಲ್ಲಾಡಳಿತ ಆದೇಶಿಸಬೇಕು. ಇಲ್ಲವಾದರೆ, ಜನರೇ ಟೋಲ್‌ ನೀಡುವುದನ್ನು ನಿಲ್ಲಿಸಬೇಕು. 15 ದಿನದೊಳಗೆ ಜಿಲ್ಲಾಧಿಕಾರಿ, ಎಸ್‌ಪಿ ಖುದ್ದು ಪರಿಶೀಲಿಸಿ, ಕ್ರಮ ಕೈಗೊಳ್ಳದಿದ್ದ,ರೆ ಕಾಂಗ್ರೆಸ್‌ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್ ಚುನಾವಣೆ ನಡೆಸದ ಕಾರಣ ಮುಂದಿನ ವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದರು.

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ, ನೆಲವಡಿ ಗ್ರಾಮದ ಪ್ರದೀಪ ಕೆಂಚನಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT