ಭಾನುವಾರ, ಮಾರ್ಚ್ 7, 2021
22 °C
ನ್ಯಾಯಬೆಲೆ ಅಂಗಡಿಗೆ ಸೀಮಿತ ವ್ಯಾಪ್ತಿ ಇಲ್ಲ

ಎಲ್ಲಿ ಬೇಕಾದರೂ ಪಡೆಯಿರಿ ಪಡಿತರ

ಫೋನ್‌ ಇನ್‌ ನಿರ್ವಹಣೆ: ಬಿ.ಎನ್‌. ಶ್ರೀಧರ, ಆರ್‌. ಮಂಜುನಾಥ್‌, ರಾಮಕೃಷ್ಣ ಸಿದ್ರಪಾಲ, ಪ್ರಮೋದ್‌ ಜಿ.ಕೆ., ರವಿ ಬಳೂಟಗಿ, ಗಣೇಶ ವೈದ್ಯ, ಚಂದ್ರಪ್ಪ. ಚಿತ್ರಗಳು: ತಾಜುದ್ದೀನ್‌ ಆಜಾದ್‌ Updated:

ಅಕ್ಷರ ಗಾತ್ರ : | |

Prajavani

ರಾಜ್ಯ ಸರ್ಕಾರ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಗ್ರಾಹಕರು ಯಾವ ಊರಿನಲ್ಲಿ, ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದು. ಸರ್ಕಾರಿ ರಜೆ ಮತ್ತು ಮಂಗಳವಾರ ಹೊರತುಪಡಿಸಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರ ತನಕ, ಸಂಜೆ 4ರಿಂದ ರಾತ್ರಿ 8ರ ತನಕ ಪಡಿತರ ಲಭ್ಯ ಇರುತ್ತದೆ. ತಿಂಗಳ ಮೊದಲ ವಾರದಿಂದ ಅಂತ್ಯದವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಪಡಿತರ ವಿತರಿಸಲಾಗುತ್ತಿದೆ. ಪಡಿತರದಾರರಿಗೆ ಬಯೊಮೆಟ್ರಿಕ್‌ ಕಡ್ಡಾಯ ಆಗಿರುವುದರಿಂದ ಪ್ರತಿ ನ್ಯಾಯ ಬೆಲೆ ಅಂಗಡಿಯಲ್ಲಿ ದಾಸ್ತಾನು ಇರುವ ಪಡಿತರದ ಬಗ್ಗೆ ಮಾಹಿತಿ ಸಿಗುತ್ತದೆ. ಯಾರು, ಎಷ್ಟು ಪಡಿತರ ಪಡೆಯುತ್ತಾರೆ ಎನ್ನುವ ಮಾಹಿತಿಯೂ ಲಭ್ಯವಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಲಭಿಸುತ್ತದೆ. ನಿಮಗೆ ಪಡಿತರ ಸಿಗದಿದ್ದರೆ ಸಹಾಯವಾಣಿಗೆ ಕರೆ ಮಾಡಿ...

ಹೀಗೆ ಕರಾರುವಾಕ್ಕಾಗಿ ಉತ್ತರ ನೀಡಿದವರು ಆಹಾರ ಇಲಾಖೆ ಧಾರವಾಡ ಜಿಲ್ಲೆಯ ಹಿರಿಯ ಉಪನಿರ್ದೇಶಕ ಡಾ. ಸದಾಶಿವ ಮರ್ಜಿ. ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಜನರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ಕಾರ್ಯಕ್ರಮ ಫೇಸ್‌ಬುಕ್‌ ಲೈವ್‌ ಇದ್ದ ಕಾರಣ ಮಂಡ್ಯ, ತುಮಕೂರು, ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ ಕರೆ ಮಾಡಿದ್ದರು. ಬೇರೆ ಜಿಲ್ಲೆಗಳ ಜನರ ಸಮಸ್ಯೆಗಳನ್ನು ಅಲ್ಲಿನ ಅಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು. ತಮ್ಮ ಅಧಿಕಾರಿ ವರ್ಗದವರ ಜೊತೆ ಬಂದಿದ್ದ ಸದಾಶಿವ ಅವರು ಜಿಲ್ಲೆಯಿಂದ ಕರೆ ಮಾಡಿದ ಅನೇಕರಿಗೆ ತಕ್ಷಣವೇ ಪರಿಹಾರ ದೊರಕಿಸಿಕೊಟ್ಟರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿನ ಪ್ರಶ್ನೋತ್ತರಗಳು ಹೀಗಿದೆ...

ವೀರಪ್ಪ ಶಿಗ್ಗಾವಿ, ನವನಗರ: ಜನವರಿಯಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೇನೆ. ಈವರೆಗೂ ಬಂದಿಲ್ಲ.

ಚುನಾವಣೆ ನಿಮಿತ್ತ ತಡವಾಗಿದೆ. ಈಗಾಗಲೇ 2017ರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸ್ಥಳ ಪರಿಶೀಲಿಸಿ, ಕಾರ್ಡ್‌ ವಿತರಿಸಲಾಗುವುದು. 2018 ರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು.

ಮಹಾಂತೇಶ್‌ ಕುರಾಡೆ, ಮುಗಳಖೋಡ, ರಾಯಬಾಗ: ಪಡಿತರ ಅಂಗಡಿಯಲ್ಲಿ ಬೇಳೆಗೆ ₹50 ಪಡೆಯಲಾಗುತ್ತಿದೆ. ಮನಬಂದಂತೆ ಮಾತನಾಡುತ್ತಾರೆ, ಏನು ಮಾಡಬೇಕು?

ಬೇಳೆಗೆ ₹38 ನಿಗದಿಯಾಗಿದೆ. ಅದಕ್ಕಿಂತ ಹೆಚ್ಚು ದರ ವಸೂಲಿ ಮಾಡಿದರೆ 1967 ಅಥವಾ ಟೋಲ್‌ಫ್ರೀ ಸಂಖ್ಯೆ 18004259339ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಇಲ್ಲವೇ ನಿಮ್ಮ ಜಿಲ್ಲೆಯ ಉಪನಿರ್ದೇಶಕಿಗೆ ಪತ್ರ ಬರೆದು ತಿಳಿಸಿದರೆ, ಕ್ರಮ ಕೈಗೊಳ್ಳುವರು.

ಜ್ಯೋತಿ ವಡ್ಡರ್‌, ಗೋಪನಕೊಪ್ಪ, ಹುಬ್ಬಳ್ಳಿ: ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಎಪಿಎಲ್‌ ಕಾರ್ಡ್‌ ಬಂದಿದೆ. ಮುಂದೇನು ಮಾಡಬೇಕು?

ವಾರ್ಷಿಕ ಆದಾಯ ₹1.2 ಲಕ್ಷ ಇದ್ದವರು ಬಿಪಿಎಲ್‌ ಕಾರ್ಡ್‌ಗೆ ಅರ್ಹರು. ಆಧಾರ್‌, ವೋಟರ್‌ ಕಾರ್ಡ್‌, ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈಗ ಬಂದಿರುವ ಎಪಿಎಲ್‌ ಕಾರ್ಡನ್ನು ವಾಪಸ್‌ ಮಾಡಿ, ಹೊಸದಾಗಿ ಅರ್ಜಿ ಕೊಡಿ, ಮಾಡಿಕೊಡುತ್ತಾರೆ.

ನ.ಲಿ.ಕೃಷ್ಣ, ಮದ್ದೂರು, ಮಂಡ್ಯ: ನ್ಯಾಯಬೆಲೆ ಅಂಗಡಿಯಲ್ಲಿ ಬರೀ ಅಕ್ಕಿ ಪಡೆಯಲು ₹10 ಪಾವತಿಸಬೇಕು ಎಂಬ ಅಲಿಖಿತ ನಿಯಮವಿದೆ. ಉಚಿತವಾಗಿ ಎಂದು ಹೇಳಿ ಹಣ ಪಡೆಯುವುದು ಸರಿಯೇ?

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಪಡೆಯಲು ಯಾವುದೇ ಹಣ ನೀಡಬೇಕಿಲ್ಲ. ಬಯೋಮೆಟ್ರಿಕ್‌ ಹಾಗೂ ಇತರೆ ಸೇವೆಗಳೂ ಉಚಿತವಾಗಿರಲಿವೆ. ಈ ಬಗ್ಗೆ ಸೂಚನಾ ಫಲಕ ಅಳವಡಿಸಲು ನಿಮ್ಮ ಜಿಲ್ಲೆಯ ಉಪನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ಹಣ ಪಡೆಯುವ ಅಂಗಡಿಯ ವಿರುದ್ಧ ತನಿಖೆಗೂ ಸೂಚಿಸಲಾಗುವುದು. 8 ಕಿ.ಮೀವರೆಗೆ ಎಲ್‌ಪಿಜಿ ಸಿಲಿಂಡರ್‌ ವಿತರಿಸಲು ಕೂಡ ಸೇವಾ ಶುಲ್ಕ ಪಾವತಿಸಬೇಕಿಲ್ಲ.

ರಾಜೇಶ್‌, ಕೋಲಾರ: ಮೂರು ತಿಂಗಳ ಹಿಂದೆ ಮಕ್ಕಳ ಇ–ಕೆವೈಸಿ ಮಾಡಿಸಿದ್ದೇವೆ. ಈಗ ಮತ್ತೆ ಮಾಡಿಸಿ ಎಂದು ರೇಷನ್‌ ಅಂಗಡಿಯವರು ಹೇಳುತ್ತಿದ್ದಾರೆ. ಏನು ಮಾಡಬೇಕು?

ಜುಲೈ 15ರವರೆಗೆ ಇ–ಕೆವೈಸಿ ನಿಲ್ಲಿಸಲಾಗಿದೆ. ಒಮ್ಮೆ ಇ–ಕೆವೈಸಿ ಭರ್ತಿ ಮಾಡಿದ್ದರೆ ಪುನಃ ಮಾಡಿಸುವ ಅಗತ್ಯವಿಲ್ಲ. ಸಂಬಂಧಪಟ್ಟ ಪಡಿತರ ಅಂಗಡಿಯವರಿಗೆ ಈ ಬಗ್ಗೆ ನಿರ್ದೇಶನ ನೀಡಲು ನಿಮ್ಮ ಜಿಲ್ಲೆಯ ಉಪನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ಹೊಸ ಕಾರ್ಡ್‌ ಪಡೆಯಲು, ದೋಷ ಸರಿಪಡಿಸುವುದಿದ್ದರೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಬೇಕು. 7 ದಿನದಲ್ಲಿ ಆಹಾರ ನಿರೀಕ್ಷಕರು ಅರ್ಜಿ ವಿಲೇವಾರಿ ಮಾಡುತ್ತಾರೆ. ಒಂದು ವೇಳೆ ವಿಳಂಬವಾದರೆ ದಂಡದ ರೂಪದಲ್ಲಿ ದಿನಕ್ಕೆ ₹20ರಂತೆ ಆಹಾರ ನಿರೀಕ್ಷಕರ ವೇತನದಿಂದ ನಿಮಗೆ ಪರಿಹಾರ ಸಿಗಲಿದೆ.

ಸೋಮಶೇಖರ್‌, ಬೆಂಗಳೂರು: ನಾನು ಮೂಲತಃ ಹಾಸನ ಜಿಲ್ಲೆಯ ನಿವಾಸಿ. ಬೆಂಗಳೂರಿನಲ್ಲಿ ಪಡಿತರ ನೀಡಲು ಅಂಗಡಿಯವರು ನಿರಾಕರಿಸುತ್ತಿದ್ದಾರೆ.

ಆಹಾರ ಧಾನ್ಯ ವಿತರಣೆಯಲ್ಲಿ ಪೋರ್ಟಬಲ್‌ ವ್ಯವಸ್ಥೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದು. ಪಡಿತರ ನೀಡಲು ನಿರಾಕರಿಸಿದ ಅಂಗಡಿ ವಿರುದ್ಧ ಬೆಂಗಳೂರು ಉತ್ತರ ತಾಲ್ಲೂಕಿನ ಜಂಟಿ ನಿರ್ದೇಶಕರ ಕಚೇರಿಗೆ ಅರ್ಜಿ ಕೊಡಿ. ಸಂಬಂಧಪಟ್ಟವರಿಗೆ ನಿರ್ದೇಶನ ನೀಡುತ್ತಾರೆ.

ಗೋಪಾಲಕೃಷ್ಣ, ನವಲಗುಂದ: ಈಗ ಇ–ಕೆವೈಸಿ ಮಾಡುತ್ತಿಲ್ಲ ಎನ್ನುತ್ತಿದ್ದಾರೆ.

ಜುಲೈ 15ರವರೆಗೆ ಇ–ಕೆವೈಸಿ ಪ್ರಕ್ರಿಯೆ ನಿಲ್ಲಿಸಲಾಗಿದೆ. ಅದಾದ ನಂತರ ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯಲಾಗುತ್ತದೆ. ಪಡಿತರ ಚೀಟಿಯಲ್ಲಿ ಹೆಸರು ಇರುವವರೆಲ್ಲ ಒಮ್ಮೆ ಹೆಬ್ಬೆಟ್ಟು ಗುರುತು ನೀಡಬೇಕು. ಆನಂತರ ಪ್ರತಿ ತಿಂಗಳು ಯಾರಾದರೂ ಒಬ್ಬರು ಹೋಗಿ ಪಡಿತರ ತೆಗೆದುಕೊಂಡು ಬರಬಹುದು.

ಗುಳ್ಳಪ್ಪ, ಮಲ್ಲಿಗವಾಡ: ಪಡಿತರ ಚೀಟಿಗಾಗಿ ಅರ್ಜಿ ಹಾಕಿ ನಾಲ್ಕೈದು ತಿಂಗಳಾದರೂ ಇನ್ನೂ ಚೀಟಿ ಸಿಕ್ಕಿಲ್ಲ.

ಮೊದಲು ಬಂದ ಅರ್ಜಿಯನ್ನು ಮೊದಲು ವಿಲೇವಾರಿ ಮಾಡುವ ಪದ್ಧತಿ ಇದೆ. 2017ರಲ್ಲಿ ಬಂದ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. 2018, 2019ರ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಅದನ್ನೂ ಮುಗಿಸುತ್ತೇವೆ. ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ಅಭಿಪ್ರಾಯ ತಿಳಿಸುತ್ತಾರೆ. ನಿಮ್ಮ ಅರ್ಜಿಯನ್ನು ಆಹಾರ ನಿರೀಕ್ಷಕರು (ಸ್ಥಳದಲ್ಲೇ ಅರ್ಜಿಯ ಸ್ಥಿತಿಗತಿ ಪರಿಶೀಲಿಸಿ) ಆಹಾರ ನಿರೀಕ್ಷಕರು ಪ್ರಿಂಟ್ ತೆಗೆದುಕೊಂಡಿದ್ದಾರೆ. ಶೀಘ್ರವೇ ಸ್ಥಳ ಪರಿಶೀಲನೆ ನಡೆಸುತ್ತಾರೆ. ಇನ್ನು 15–20 ದಿನಗಳಲ್ಲಿ ನಿಮಗೆ ಪಡಿತರ ಚೀಟಿ ಸಿಗುತ್ತದೆ.

ವರಲಕ್ಷ್ಮಿ, ನಾಗರಬಾವಿ, ಬೆಂಗಳೂರು: ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಮಾಡಿಸುವುದು ಹೇಗೆ?

ನೀವು ‘ಬೆಂಗಳೂರು ಒನ್‌’ನಲ್ಲಿ ಅರ್ಜಿ ಸಲ್ಲಿಸಬಹುದು. ಕಂದಾಯ ಇಲಾಖೆಯಿಂದ ವಾರ್ಷಿಕ ₹ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪ್ರಮಾಣಪತ್ರ ಪಡೆಯಬೇಕು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ನಕಲು ಸಲ್ಲಿಸಬೇಕು.

ಜ್ಯೋತಿ, ಧಾರವಾಡ: ಎಪಿಎಲ್ ಪಡಿತರ ಚೀಟಿಯ ಪ್ರಯೋಜನ ಏನು?

ವಿಳಾಸದ ದೃಢೀಕರಣಕ್ಕಾಗಿ ಎಪಿಎಲ್ ಕಾರ್ಡ್ ಬೇಕು. ಆದರೆ ವಿಳಾಸ ದೃಢೀಕರಿಸುವ ಬೇರೆ ಬೇರೆ ಚೀಟಿಗಳು ಇರುವ ಕಾರಣ ಎಪಿಎಲ್ ಕಾರ್ಡ್ ತೆಗೆದುಕೊಳ್ಳದೇ ಹೋದರೂ ಏನೂ ಸಮಸ್ಯೆ ಇಲ್ಲ.

* ಅನಿತಾ ವಾಲಿಕಾರ, ಹುಬ್ಬಳ್ಳಿ: ನಾವು ಪಡಿತರ ತೆಗೆದುಕೊಳ್ಳುವ ಅಂಗಡಿಯಲ್ಲಿ ಪ್ರತಿ ತಿಂಗಳು 10ರಿಂದ 20ನೇ ತಾರೀಕಿನವರೆಗೆ ಮಾತ್ರ ಅಕ್ಕಿ ಕೊಡುತ್ತೇವೆ ಎನ್ನುತ್ತಾರೆ. ನಂತರ ಹೋದರೆ, ‘ಅಕ್ಕಿ ಕೊಡುವ ಅವಧಿ ಮುಗಿದು ಹೋಗಿದೆ. ನಿಮಗಾಗಿದ್ದಕ್ಕೆ ಕೊಡುತ್ತೇನೆ’ ಎಂದು ನಿಗದಿಪಡಿಸಿದ ಅರ್ಧದಷ್ಟು ಅಕ್ಕಿ ಕೊಡುತ್ತಾರೆ. ಏನು ಮಾಡೋದು?

ಆ ರೀತಿ ಮಾಡುವ ಹಾಗಿಲ್ಲ. ತಿಂಗಳ ಕೊನೇ ದಿನಾಂಕದವರೆಗೂ ಅಕ್ಕಿ ಕೊಡಲೇಬೇಕು. ಕೊಡುವುದಿಲ್ಲ ಅನ್ನುವ ಹಾಗಿಲ್ಲ. ನೀವು ಇಂಥದ್ದೇ ಪಡಿತರ ಅಂಗಡಿ ಎಂದು ತಿಳಿಸಿದರೆ ನಾನೇ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

* ಉಳವೇಶ, ಯಾದವಾಡ, ಈರಣ್ಣ ಅಮಾಸಿ, ಕಲ್ಲಾಪುರ, ಧಾರವಾಡ: ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಬಹಳ ದಿನಗಳಾದವು. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ.

ಚುನಾವಣೆ ನಿಮಿತ್ತ ಕೆಲವು ತಿಂಗಳಿನಿಂದ ರೇಷನ್‌ ಕಾರ್ಡ್ ಹಂಚಿಕೆ ನಿಲ್ಲಿಸಲಾಗಿತ್ತು. ಈಗ ಮರಳಿ ಅರ್ಜಿ ಪರಿಶೀಲಿಸಿ 2018–19ನೇ ಸಾಲಿನ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಸರದಿ ಪ್ರಕಾರ ಪ್ರತಿ ದಿನ 40–45 ಜನರಿಗೆ ಮಾತ್ರ ನೀಡಲಾಗುತ್ತಿದೆ. ಆಹಾರ ನಿರೀಕ್ಷಕರು ನಿಮ್ಮ ಪಡಿತರದ ಪ್ರಿಂಟ್ ತೆಗೆದು ಸ್ಥಳ ಪರಿಶೀಲನೆ ಮಾಡಿ ನಿಮ್ಮ ಕಾರ್ಡ್ ನೀಡಲಿದ್ದಾರೆ.

ಮಂಜುನಾಥ ನಾಡಿಗೇರ, ಹಳೇ ಹುಬ್ಬಳ್ಳಿ: ರೇಷನ್‌ ಕಾರ್ಡ್‌ಗೆ ಬಯೊಮೆಟ್ರಿಕ್‌ ವ್ಯವಸ್ಥೆ ಬದಲು ಮೊದಲಿನಂತೆ ರೇಷನ್‌ ನೀಡುವ ವ್ಯವಸ್ಥೆ ಮಾಡಬೇಕಿತ್ರೀ...

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಆಧಾರ ಕಾರ್ಡ್ ಪಡೆದು, ಬಯೊಮೆಟ್ರಿಕ್‌ ಪ್ರಕಾರವೇ ಪಡಿತರ ವಿತರಣೆ ಮಾಡುವುದು ಕಡ್ಡಾಯ ನಿಮಯ. ಅದರಿಂದ ನ್ಯಾಯವಾಗಿ ಪಡಿತರ ಸಿಗಬೇಕಾದವರಿಗೆ ತಲುಪುತ್ತಿದೆ.

ದೇವೇಂದ್ರಪ್ಪ ಬೋಗಾರ್, ಕುಂದಗೋಳ: ನನ್ನ ಮಗ ಪ್ರತ್ಯೇಕವಾಗಿದ್ದು, ಆತನ ಹೆಸರಲ್ಲಿ ರೇಷನ್‌ ಕಾರ್ಡ್ ಪಡೀಬೇಕು ಅಂದ್ರ ಏನ್‌ ಮಾಡಬೇಕ್ರೀ?

ಕಂದಾಯ ಇಲಾಖೆಗೆ ಹೋಗಿ ₹1.20 ಲಕ್ಷದೊಳಗಿನ ಆದಾಯ ಪ್ರಮಾಣ ಪತ್ರ ಪಡೆಯಬೇಕು. ಅದರೊಂದಿಗೆ ಆಧಾರ ಕಾರ್ಡ್, ವೋಟರ್‌ ಕಾರ್ಡ್, ನಿಮ್ಮ ಫೋಟೊ ಗುರುತಿನ ಚೀಟಿಯೊಂದಿಗೆ ಗ್ರಾಮ ಪಂಚಾಯ್ತಿಗೆ ಹೋಗಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ.

ಶಬಾನಾ ಜಮಾದಾರ್, ಅಣ್ಣಿಗೇರಿ: ಅಡುಗೆ ಅನಿಲ್ ಪಡೆಯಲು ಅರ್ಜಿ ಹಾಕಿದ್ದೇನೆ. ಆದರೆ ಸಿಗುತ್ತಲೇ ಇಲ್ಲ.

ಹೊಸ ಎಲ್‌ಪಿಜಿ ಗ್ಯಾಸ್‌ ಪಡೆಯಲು ಈಗ ಯಾವುದೇ ಕಟ್ಟುಪಾಡುಗಳಿಲ್ಲ. ತಕ್ಷಣವೇ ಸಿಗುತ್ತಿದೆ. ನಿಮ್ಮ ಆಧಾರ ಕಾರ್ಡ್, ವೋಟರ್‌ ಐಡಿ, ರೇಷನ್‌ ಕಾರ್ಡ್ನೊಂದಿಗೆ ಎಲ್‌ಪಿಜಿ ಕೇಂದ್ರಕ್ಕೆ ಹೋಗಿ ಅರ್ಜಿ ಕೊಡಿ.

ಕರಿಯಣ್ಣ, ಶಿರಾ ಪಟ್ಟಣ, ತುಮಕೂರು: ರೇಷನ್ ಕಾರ್ಡ್ ರದ್ದಾಗಿದೆ. ಏನು ಮಾಡಬೇಕು?

ನಿಮ್ಮ ತಾಲ್ಲೂಕು ಕಚೇರಿಗೆ ಭೇಟಿ ನೀಡಿ. ಅಲ್ಲಿನ ಆಹಾರ ನಿರೀಕ್ಷಕ(ಫುಡ್ ಇನ್‌ಸ್ಪೆಕ್ಟರ್) ಅವರಿಗೆ ಅರ್ಜಿ ಸಲ್ಲಿಸಿದರೆ ಹೊಸ ಕಾರ್ಡ್‌ ದೊರೆಯಲಿದೆ.

ಉದಯ, ನೇಕಾರ ನಗರ, ಹುಬ್ಬಳ್ಳಿ: ತಾಯಿ ನಿಧನದ ನಂತರ ಪಡಿತರ ಚೀಟಿ ರದ್ದಾಗಿದೆ. ಹೊಸ ಅರ್ಜಿ ಸಲ್ಲಿಸಿದರೂ ನೀಡಿಲ್ಲ. ನೀವು ಇಬ್ಬರು ಮಕ್ಕಳಿದ್ದೀರಿ, ನಿಮಗೆ ಪಡಿತರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ನಿಮ್ಮ ‘ಎಸಿಟಿ’ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಿದ್ದೇನೆ. 2017ರಲ್ಲಿ ಪರಿಷ್ಕರಣೆ ವೇಳೆ ನಿಮ್ಮ ಕಾರ್ಡ್ ರದ್ದಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳು ನೆಪ ಹೇಳಲು ಬರುವುದಿಲ್ಲ. 15 ದಿನದಲ್ಲಿ ಕಾರ್ಡ್‌ ಸಿಗದಿದ್ದರೆ ನನಗೆ ಕರೆ ಮಾಡಿ.

ಜಗದೀಶ, ದೇವಾಂಗಪೇಟೆ, ಹುಬ್ಬಳ್ಳಿ: ಅಕ್ಕಿಯನ್ನು ಏಳು ಕೆ.ಜಿಯಿಂದ ಐದು ಕೆ.ಜಿಗೆ ಇಳಿಸಲಾಗಿದೆ. ಪ್ರಮಾಣ ಹೆಚ್ಚಳ ಮಾಡಬೇಕು.

ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು.

ಮುಕುಂದ, ಶಿವನಾಗ ಬಡಾವಣೆ, ನೇಕಾರನಗರ: ನಮ್ಮ ವಾರ್ಡ್‌ನಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತಿದೆ. ಸಂಜೆಗೆ ಹೋದರೆ ಸಿಗುವುದಿಲ್ಲ. ಕೂಲಿ ಕೆಲಸ ಮಾಡುವ ನಮ್ಮಂತವರಿಗೆ ಬಹಳ ತೊಂದರೆಯಾಗಿದೆ.

ಆಹಾರ ನಿರೀಕ್ಷಕರಿಗೆ ಮೊದಲು ದೂರು ನೀಡಿ. ಸಮಸ್ಯೆ ಪರಿಹಾರ ಆಗದಿದ್ದರೆ, ಮಧ್ಯಾಹ್ನದ ನಂತರ ಪಡಿತರ ವಿತರಣೆ ಮಾಡದಿದ್ದರೆ ಕರೆ ಮಾಡಿ, ಖುದ್ದಾಗಿ ಬಂದು ಪರಿಶೀಲನೆ ನಡೆಸುವೆ?.

ಅಂಬಿಕಾ, ಶಾಂತಿನಿಕೇತನ, ಹುಬ್ಬಳ್ಳಿ: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ನವನಗರದ ‘ಒನ್‌’ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ₹10 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.

ಹೊಸದಾಗಿ ಕಾರ್ಡ್ ಪಡೆಯಲು ಏನು ದಾಖಲೆ ಬೇಕು?

* ಬಿಪಿಎಲ್‌ ಕಾರ್ಡ್‌ ಪಡೆಯಲು ಬಯಸುವವರು ಕಂದಾಯ ಇಲಾಖೆಯಿಂದ ಪಡೆದ ₹ 1.2 ಲಕ್ಷ ಒಳಗಿನ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು

*  ಅವಳಿ ನಗರದಲ್ಲಿ ಹುಬ್ಬಳ್ಳಿ–ಧಾರವಾಡ ಒನ್‌, ತಾಲ್ಲೂಕು ಕಚೇರಿಗಳಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು.

* ಎಪಿಎಲ್‌ ಕಾರ್ಡ್‌ ಪಡೆಯಲು ಸ್ಥಳೀಯ ವಿಳಾಸ ದೃಢೀಕರಣಕ್ಕೆ ಆಧಾರ್‌ ಕಾರ್ಡ್ ಕಡ್ಡಾಯವಲ್ಲ. ಮನೆ ಬಾಡಿಗೆ ಕರಾರು ಪತ್ರದ ಮೇಲೂ ಕಾರ್ಡ್‌ ಪಡೆಯಬಹುದು.

ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ. ಸದಾಶಿವ ಮರ್ಜಿ ಅವರ ಮಾತುಗಳು

* ಪಡಿತರ ಕಾರ್ಡ್‌ಗೆ ಜೂನ್‌ 30ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಒಂದೂವರೆ ತಿಂಗಳ ಒಳಗೆ ಕಾರ್ಡ್‌ ಸಿಗುತ್ತದೆ

* ದೇವದಾಸಿಯರು, ಎಚ್ಐವಿ ಪೀಡಿತರು, ಅವಕಾಶ ವಂಚಿತರಿಗೆ ಅಂತ್ಯೋದಯ ಕಾರ್ಡ್‌ ಸಿಗುತ್ತದೆ.

* ಎಪಿಎಲ್‌ ಕಾರ್ಡ್‌ದಾರರು ಒಂದು ಕೆ.ಜಿ.ಗೆ ₹15ರಂತೆ ಹತ್ತು ಕೆ.ಜಿ. ಅಕ್ಕಿ ಪಡೆಯಬಹುದು

* ಸತತ ಮೂರು ತಿಂಗಳು ಪಡಿತರ ಪಡೆಯದಿದ್ದರೆ ಕಾರ್ಡ್‌ ಅನ್ನು ಅಮಾನತು ಮಾಡುತ್ತಾರೆ. ನಂತರ ಅರ್ಜಿ ಕೊಟ್ಟರೆ ಅದನ್ನು ಸರಿ ಪಡಿಸಲಾಗುತ್ತದೆ.

* ಪಡಿತರಕ್ಕೆ ಸಂಬಂಧಿಸಿದ ದೂರುಗಳಿಗೆ ಸಹಾಯವಾಣಿ 1967 ಅಥವಾ 1800–425–9339 ಕರೆ ಮಾಡಬಹುದು.

ಕಾರ್ಡ್‌ ವಾಪಸ್‌ ನೀಡದಿದ್ದರೆ ದಂಡ

‘ಕಾರ್ಪೊರೇಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅದನ್ನು ವಾಪಸ್‌ ಕೊಡಬೇಕು. ಇಲ್ಲವಾದರೆ ಭಾರಿ ದಂಡ ಕಟ್ಟಬೇಕಾಗುತ್ತದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 395 ಪ್ರಕರಣಗಳನ್ನು ಇಲಾಖೆ ಪತ್ತೆ ಹಚ್ಚಿ, 356 ಜನರಿಂದ ₹ 43 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರೆ ಕಾರ್ಡ್‌ ಪಡೆದ ದಿನದಿಂದ ಅದನ್ನು ಒಪ್ಪಿಸುವ ತನಕ ಪಡೆದ ಪಡಿತರಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಇರುವಷ್ಟು ಬೆಲೆಯನ್ನು ದಂಡ ರೂಪದಲ್ಲಿ ವಿಧಿಸಬಹುದು’ ಎಂದು ಸದಾಶಿವ ಮರ್ಜಿ ತಿಳಿಸಿದರು.

‘ಫಸ್ಟ್‌ ಇನ್‌, ಫಸ್ಟ್ ಔಟ್‌’ ನಿಯಮ

ಎಲ್ಲರಿಗೂ ಕಡಿಮೆ ಸಮಯದಲ್ಲಿ ಪಡಿತರ ಕಾರ್ಡ್‌ ವಿತರಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಫಸ್ಟ್‌ ಇನ್‌, ಫಸ್ಟ್‌ ಔಟ್‌ ನಿಯಮ ಜಾರಿಗೆ ಮಾಡಿದೆ. ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೊ, ಅವರಿಗೆ ಮೊದಲು ಕಾರ್ಡ್‌ ವಿತರಣೆಯಾಗುತ್ತದೆ. ಕೆಲ ಸಂದರ್ಭಗಳಲ್ಲಿ ವೈದ್ಯಕೀಯ ಕಾರಣಗಳಿಗೆ ಆದ್ಯತೆ ಮೇರೆಗೆ ಕಾರ್ಡ್‌ ನೀಡಬಹುದು.

ಆಧಾರ್‌ ಕಾರಣಕ್ಕೆ ಪಡಿತರ ನಿಲ್ಲಿಸಿಲ್ಲ

ಪಡಿತರಕ್ಕೆ ಆಧಾರ್‌ ಕಾರ್ಡ್‌ ಜೋಡಣೆ ಮಾಡುವುದು ಕಡ್ಡಾಯವಿದೆ ನಿಜ; ಆದರೆ ಜೋಡಣೆ ಆಗಿಲ್ಲವೆನ್ನುವ ಕಾರಣಕ್ಕೆ ಜಿಲ್ಲೆಯಲ್ಲಿ ಯಾರಿಗೂ ಪಡಿತರ ನಿಲ್ಲಿಸಿಲ್ಲ. ಆಧಾರ್‌ ಜೋಡಣೆ ಮಾಡುವುದು ಸುಲಭವಿದೆ. ಬಯೋಮೆಟ್ರಿಕ್‌ ತೆಗೆದುಕೊಂಡು ಪಡಿತರ ವಿತರಿಸುತ್ತಿದ್ದೇವೆ. ಇದರ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಒಂದು ವೇಳೆ ಕಾರ್ಡ್‌ ಕಳೆದುಕೊಂಡರೆ ಮತ್ತೊಂದು ಕಾರ್ಡ್‌ ಪಡೆದುಕೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಹೊಸ ಕಾರ್ಡ್ ಸಿಗುತ್ತದೆ.

ಗುಣಮಟ್ಟದ ಅಕ್ಕಿ ವಿತರಣೆ

ದೇವಾಂಗಪೇಟೆಯಿಂದ ಕರೆ ಮಾಡಿದ ಜಗದೀಶ್‌, ‘ಸರ್ ಒಂದು ‘ಗುಪ್ತ’ವಾದ ಪ್ರಶ್ನೆ ಇದೆ, ‘ರೇಷನ್‌ನಲ್ಲಿ ನೀಡುವ ಅಕ್ಕಿ ಯಾರೂ ಊಟ ಮಾಡಲ್ಲ. ಈ ಬಗ್ಗೆ ನಾನು ಸರ್ವೆ ಮಾಡಿದ್ದೇನೆ. ಬಹಳಷ್ಟು ಮನೆಗಳಲ್ಲಿ ಇದು ಸಾಬೀತಾಗಿದೆ. ನಿಮ್ಮ ಇಲಾಖೆಯಿಂದಲೂ ಬೇಕಾದರೆ ಸಮೀಕ್ಷೆ ಮಾಡಿಸಿ’ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸದಾಶಿವ ಮರ್ಜಿ,‘ಇದು ನಿಮ್ಮ ಅನುಭವ ಇರಬಹುದು. ನನ್ನ ಅನುಭವ ಭಿನ್ನವಾಗಿದೆ. ಪಟ್ಟಣವಾಗಲಿ, ಹಳ್ಳಿಗಳಾಗಲಿ ರೇಷನ್ ಅಕ್ಕಿ ಊಟ ಮಾಡುವ ಜನರಿದ್ದಾರೆ. ನಾವು ‘ಎ–1’ ದರ್ಜೆಯ ಉತ್ಕೃಷ್ಟ ಗುಣಮಟ್ಟದ ಅಕ್ಕಿಯನ್ನು ವಿತರಿಸುತ್ತಿದ್ದೇವೆ. ಅದರಲ್ಲಿ ಕಲ್ಲು, ಕಸ ಏನೂ ಇರುವುದಿಲ್ಲ. ಪ್ರತಿ ಕೆ.ಜಿ.ಗೆ ₹28.20 ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಈ ಅಕ್ಕಿಯಿಂದ ತಯಾರಿಸಿದ ಅನ್ನ ರುಚಿಯಾಗಿರುತ್ತದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು