ಹುಬ್ಬಳ್ಳಿ: ಮಾದಕವಸ್ತು ಅಫೀಮು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಸಿಸಿಬಿಯ ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು, ಆತನಿಂದ ₹3.20 ಲಕ್ಷ ಮೌಲ್ಯದ 253 ಗ್ರಾಂ ಅಫೀಮು, ಬೈಕ್, ಮೊಬೈಲ್ ಹಾಗೂ ₹4,020 ನಗದು ವಶಪಡಿಸಿಕೊಂಡಿದ್ದಾರೆ.
ಭೈರಿದೇವರಕೊಪ್ಪದ ಅರ್ಜುನರಾಮ ಪಟೇಲ (40) ಬಂಧಿತ. ವ್ಯಾಪಾರ ಮಾಡಿಕೊಂಡಿದ್ದ ಪಟೇಲ, ರಾಜಸ್ಥಾನದ ಹುಕ್ಕುಂ ಸಿಂಗ್ ಎಂಬಾತನಿಂದ ಅಫೀಮು ತರಿಸಿಕೊಂಡು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದ.
ಈ ಕುರಿತು ಸಿಕ್ಕ ಖಚಿತ ಮಾಹಿತಿ ಮಾಹಿತಿ ಮೇರೆಗೆ, ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಗೋಪಾಲ ರಾಠೋಡ ನೇತೃತ್ವದ ತಂಡ, ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಟ್ಲ್‌ಮೆಂಟ್ ಮುಖ್ಯ ರಸ್ತೆಯ ವಸಂತ ಕೆಫೆ ಬಳಿ ಮಾಲು ಸಮೇತ ಪಟೇಲನನ್ನು ಬಂಧಿಸಿದೆ. ಅಫೀಮು ಪೂರೈಕೆದಾರನ ಪತ್ತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಪಿರಿಟ್ ಜಪ್ತಿ–ಬಂಧನ: ನಗರದ ಕೆ.ಬಿ. ನಗರದಲ್ಲಿ ಅಕ್ರಮವಾಗಿ ಸ್ಪಿರಿಟ್ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಿಡನಾಳದ ಮಂಜುನಾಥ ಯರಕಲ್ (39) ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿ 10 ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹1.20 ಲಕ್ಷ ಮೌಲ್ಯದ 320 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಇನ್‌ಸ್ಪೆಕ್ಟರ್ ಶರಣಗೌಡ ಎಂ. ನ್ಯಾಮಣ್ಣವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.