ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ | ಮಳೆಯಿಲ್ಲದೇ ಬಾಡುತ್ತಿರುವ ಮೆಣಸಿನಕಾಯಿ ಬೆಳೆ

Published 12 ಅಕ್ಟೋಬರ್ 2023, 5:03 IST
Last Updated 12 ಅಕ್ಟೋಬರ್ 2023, 5:03 IST
ಅಕ್ಷರ ಗಾತ್ರ

ರಾಂಪುರ: ಆಗಿರುವ ಅಲ್ಪ-ಸ್ವಲ್ಪ ಮಳೆಯಲ್ಲೇ ಉತ್ತಮ ಬೆಳೆ ಎನ್ನುವ ರೀತಿಯಲ್ಲಿ ಬೆಳೆದು ರೈತರಲ್ಲಿ ಬದುಕುವ ಭರವಸೆ ಮೂಡಿಸಿದ್ದ ಮೆಣಸಿನಕಾಯಿ ಬೆಳೆ ತೇವಾಂಶ ಕೊರತೆಯಿಂದಾಗಿ ಬಾಡಿ ಹೋಗುತ್ತಿದೆ.

ಮುಂಗಾರು ಹಂಗಾಮಿಗೆ ತಡವಾಗಿಯಾದರೂ ಬಾಗಲಕೋಟೆ ತಾಲ್ಲೂಕಿನ ಕೆಲವೆಡೆ ಒಂದಿಷ್ಟು ಮಳೆ ಬಂದು ರೈತರಿಗೆ ಬಿತ್ತನೆಗೆ ಅವಕಾಶ ನೀಡಿತ್ತು. ಕಳೆದ ವರ್ಷ ಬಂಪರ್ ಬೆಲೆ ಬಂದಿದ್ದರಿಂದ ರೈತರು ಈ ಬಾರಿ ಅಧಿಕ ಸಂಖ್ಯೆಯಲ್ಲಿ ಮೆಣಸಿನಕಾಯಿ ಬೆಳೆಯಲು ಮುಂದಾಗಿ ಬೇರೆ, ಬೇರೆ ಕಡೆಗೆ ತಿರುಗಾಡಿ ಉತ್ತಮ ತಳಿಯ ಬೀಜ ತಂದು ಬಿತ್ತನೆ ಮಾಡಿದ್ದಾರೆ.

ಬಿತ್ತನೆ ಮಾಡಿ ತಿಂಗಳು ಗತಿಸಿದ ನಂತರ ಮತ್ತೆ ಮಳೆರಾಯ ಕೈಕೊಟ್ಟಿದ್ದರಿಂದ ಸಸಿಗಳ ನಾಟಿಗೆಯೂ ಸರಿಯಾದ ಪ್ರಮಾಣದಲ್ಲಿ ಆಗಲಿಲ್ಲ. ಬೆಳೆಯ ಕಥೆ ಮುಗಿಯಿತು ಅನ್ನುವಷ್ಟರಲ್ಲಿ ಮತ್ತೊಂದು ಮಳೆ ಸುರಿದು ಬೆಳೆ ಚೇತರಿಕೆ ಕಾಣುವಂತಾಗಿ ಈಗ ಹೂವು, ಕಾಯಿ ಬಿಡುವ ಹಂತಕ್ಕೆ ತಲುಪಿದೆ.

ಆದರೀಗ ದಿನ ದಿನಕ್ಕೆ ತೇವಾಂಶ ಕಡಿಮೆಯಾಗಿ ಗಿಡಗಳು ಬಾಡಿ ನಿಂತಿವೆ. ಆಗಿರುವ ಹೂವುಗಳು ಉದುರಿ ಹೋಗುವ ಸ್ಥಿತಿಗೆ ತಲುಪಿದೆ. ಒಂದೆಡೆ ಮಳೆಯ ಕೊರತೆಯಾದರೆ, ಇನ್ನೊಂದೆಡೆ ರೋಗಗಳ ಬಾಧೆ ರೈತರನ್ನು ಕಾಡುತ್ತಿದೆ. ರೋಗ ನಿಯಂತ್ರಿಸಲು ಔಷಧಿ ಸಿಂಪಡಿಸಬೇಕು ಎಂದರೆ ತೇವಾಂಶವಿಲ್ಲ. ಹೀಗಾಗಿ ರೈತ ಇಕ್ಕಟ್ಟಿಗೆ ಸಿಲುಕಿದ್ದು ಬೆಳೆ ಬರುವ ಭರವಸೆ ಕಳೆದುಕೊಂಡಿದ್ದಾನೆ.

ಹವಾಮಾನ ಇಲಾಖೆಯ ಹೇಳಿಕೆಯಂತೆ ವಾರದಲ್ಲಿ ಮಳೆಯಾದರೆ ಮಾತ್ರ ಮೆಣಸಿನಕಾಯಿ ಬೆಳೆ ಚೇತರಿಕೆ ಕಾಣಬಹುದಾಗಿದೆ. ಇಲ್ಲದೇ ಹೋದಲ್ಲಿ ದುಬಾರಿ ವೆಚ್ಚದ ಬೀಜ, ಗೊಬ್ಬರ ಅಲ್ಲದೇ ನಿರ್ವಹಣೆಗೆ ಈತನಕ ಮಾಡಿರುವ ಖರ್ಚು ರೈತನ ಹೆಗಲೇರಲಿದೆ. ಅಂದುಕೊಂಡಂತೆ ಮಳೆಯಾಗಿದ್ದರೆ ಮೆಣಸಿನಕಾಯಿ ಗಿಡಗಳು ಟೊಂಗೆಯೊಡೆದು ಅಪಾರ ಪ್ರಮಾಣದಲ್ಲಿ ಹೂವು ಬಿಡಬೇಕಿತ್ತು. ಆದರೆ ಈಗ ಗಿಡಗಳೇ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಬಿಟ್ಟಿರುವ ಹೂಗಳು ಉದುರುವ ಆತಂಕ ಹೆಚ್ಚಿದೆ.

ಕೆಲವೆಡೆ ರೈತರು ಬೆಳೆ ಬಾಡಿ ಹೋಗುತ್ತಿರುವುದಕ್ಕೆ ಮುಮ್ಮಲ ಮರುಗಿ ಗಿಡಗಿಡಕ್ಕೆ ನೀರುಣಿಸಿ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೇವೂರು, ಹಳ್ಳೂರ, ಬೋಡನಾಯಕದಿನ್ನಿ, ಬಿಲ್ ಕೆರೂರ, ಮುಗಳೊಳ್ಳಿ, ಕಿರಸೂರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ರೈತರು ಹಗಲು, ರಾತ್ರಿಯಲ್ಲೂ ಕಾಲುವೆ ನೀರು ಪಡೆದು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

9 ಸಾವಿರ ಹೆಕ್ಟೆರ್ ಬಿತ್ತನೆ

ಬಾಗಲಕೋಟೆ ತಾಲ್ಲೂಕಿನಲ್ಲಿ ಒಣ ಬೇಸಾಯ ಹಾಗೂ ನೀರಾವರಿ ವಿಭಾಗ ಸೇರಿ 9 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದ್ದು ಮಳೆಯ ಕೊರತೆಯಾಗಿ ಬೆಳೆ ಒಣಗುತ್ತಿದೆ. ‘ತೇವಾಂಶ ಕೊರತೆಯಿಂದ ಗಿಡಗಳಲ್ಲಿ ಟೊಂಗೆ ಹಾಗೂ ಹೂವಿನ ಸಂಖ್ಯೆ ಕಡಿಮೆಯಾಗಿದ್ದು ಬಿಟ್ಟಿರುವ ಹೂವು ಸಹ ಉದರಿ ಹೋಗುವ ಭೀತಿ ಎದುರಾಗಿದೆ. ತುರ್ತಾಗಿ ಮಳೆಯಾಗಿ ನೀರಿನ ಆಸರೆ ದೊರೆತರೆ ಮಾತ್ರ ಒಂದಿಷ್ಟು ಇಳುವರಿ ಪಡೆಯಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಸವರಾಜ ಗೌಡನ್ನವರ.

ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ರೈತ ಗ್ಯಾನಪ್ಪ ನಿಂಬಲಗುಂದಿ ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರುಣಿಸುತ್ತಿರುವ ದೃಶ್ಯ.
ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ರೈತ ಗ್ಯಾನಪ್ಪ ನಿಂಬಲಗುಂದಿ ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರುಣಿಸುತ್ತಿರುವ ದೃಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT