ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಅಸ್ಮಿತೆಗೆ ಹೋರಾಡಿದ ಒಂಟಿ ಸಲಗ

ಪಾಪು ಪ್ರಪಂಚಕ್ಕೆ ವಿದಾಯ
Last Updated 16 ಮಾರ್ಚ್ 2020, 22:36 IST
ಅಕ್ಷರ ಗಾತ್ರ

ಧಾರವಾಡ:ಪಾಟೀಲ ಪುಟ್ಟಪ್ಪನವರೊಂದಿಗೆ ತಕರಾರುಗಳು, ಭಿನ್ನಾಭಿಪ್ರಾಯಗಳು ನೂರು ಇರಬಹುದು ಆದರೆ, ಅವರ ಕನ್ನಡ ಭಾಷೆ ಮೇಲಿನ ಪ್ರೀತಿ, ನೆಲ, ಜಲದ ಮೇಲಿನ ಕಾಳಜಿ ಮತ್ತು ಬದ್ಧತೆ ಪ್ರಶ್ನಾತೀತವಾದ್ದು. ಎಂಥ ವೈರಿಯೂ ಮೆಚ್ಚುವಂತಹದ್ದು.

ನಲವತ್ತು-ಐವತ್ತು ದಶಕಗಳ ಕಾಲ ಕನ್ನಡ ಭಾಷೆ ಕುರಿತಂತೆ ಎಂಥದೇ ಸಮಸ್ಯೆ ಎದುರಾದಾಗ ಪುಟ್ಟಪ್ಪ ಏನು ಹೇಳುತ್ತಾರೆ ಎಂದು ನಾಡಿಗೆ ನಾಡೇ ಎದುರು ನೋಡುತ್ತಿತ್ತು. ಒಂದು ರಾಜಕೀಯ ಪಕ್ಷದ ವ್ಯಕ್ತಿಯಾಗಿ ಹಲವು ತಪ್ಪು ಹೆಜ್ಜೆಗಳು ಅವರಿಂದ ಆಗಿರಬಹುದು. ಆದರೆ ಅವರು ತೆಗೆದುಕೊಂಡ ನಿರ್ಧಾರ ಮತ್ತು ನಿಲುವುಗಳೊಂದಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಟ್ಟವರಲ್ಲ.

ರಾಜಕಾರಣಿಗಳು ಸಿಕ್ಕಾಗ ಅವರ ನಡೆ-ನುಡಿ ಕುರಿತಂತೆ ಅವರ ಮುಖದ ಮೇಲೆಯೇ ಹೇಳಿಬಿಡುತ್ತಿದ್ದರು. ಹೀಗಾಗಿ ಯಾವ ರಾಜಕಾರಣಿಯೂ ಇವರನ್ನು ಪ್ರೀತಿಯಿಂದ ಕಾಣದೇ ಭಯದಿಂದ ಪ್ರೀತಿಸಿದರು. ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಗಳು ಸಭೆಯ ಮಧ್ಯದಲ್ಲಿಯೇ ಎದ್ದು ಹೊರಟಾಗ, ಅವರನ್ನು ತಡೆದು ಹೇಳಿದ ಮಾತುಗಳು ಪಾಟೀಲ ಪುಟ್ಟಪ್ಪನವರಿಂದ ಮಾತ್ರ ಬರಲು ಸಾಧ್ಯ. ಯಾವುದೇ ಸರಕಾರ ಇರಲಿ ಪುಟ್ಟಪ್ಪನವರ ಮಾತಿಗೆ ಒಂದು ತೂಕ ಇರುತ್ತಿತ್ತು.

ಪುಟ್ಟಪ್ಪನವರ ನೆನಪಿನ ಶಕ್ತಿಯಷ್ಟೇ ಇನ್ನೊಬ್ಬರಿಗೂ ಇರಬಹುದು. ಆ ನೆನಪುಗಳನ್ನು ಹಂಚಿಕೊಳ್ಳುವ ವಿಧಾನ ಅದ್ಭುತ. ಅವರ ಮಾತುಗಳು ಕೇಳುಗನನ್ನು ಆ ಕಾಲಘಟ್ಟಕ್ಕೆ ನಿಲ್ಲಿಸುವಂತೆ ಮಾಡುತ್ತಿದ್ದವು. ವಿಶೇಷ ಅಂದರೆ ಅವರು ದಿನಾಂಕ, ಸ್ಥಳ, ವೇಳೆ, ಆ ಸಂದರ್ಭದಲ್ಲಿ ಯಾರು ಯಾರು ಇದ್ದರು ಎಂಬುದನ್ನು ಹೇಳುವಾಗ ತಮಗರಿವಿಲ್ಲದೇ ಕೇಳುವವರೆಲ್ಲ ಪಾಪುರವರ ಅಭಿಮಾನಿಯಾಗುತ್ತಿದ್ದರು.

ಮರಾಠಿ ಭಾಷಾ ಹೋರಾಟಗಾರರು ಮಹಾರಾಷ್ಟ್ರಕ್ಕೊಬ್ಬ ಪಾಟೀಲ ಪುಟ್ಟಪ್ಪ ಇದ್ದಿದ್ದರೆ ಏನೆಲ್ಲಾ ಸಾಧಿಸಬಹುದಿತ್ತು ಎಂಬ ಮಾತು ಪುಟ್ಟಪ್ಪನವರ ಗಟ್ಟಿತನ ಮತ್ತು ಭಾಷಾ ಪ್ರೇಮದ ಬಗ್ಗೆ ಎತ್ತಿ ಹೇಳುತ್ತದೆ. ಪುಟ್ಟಪ್ಪನವರು ಹೋರಾಟಗಳಿಗೆ ಶಕ್ತಿ ತುಂಬುವ ಛಾತಿ ಹೊಂದಿದ್ದರೇವಿನಃ ನೇರವಾಗಿ ಸಂಘಟನೆ ಮಾಡಿದವರಲ್ಲ. ಒಂಟಿ ಸಲಗದಂತೆ ಅವರ ನಡೆ ಮತ್ತು ಹೋರಾಟ. ಎಂದೂ ಎದುರಾಳಿಯ ಮಾತುಗಳ ಬಗ್ಗೆ, ತಮ್ಮ ಮೇಲಿನ ಟೀಕೆಗಳ ಬಗ್ಗೆ ತಲೆಕಡಿಸಿಕೊಂಡವರಲ್ಲ. ತಮಗೆ ಅನಿಸಿದ್ದನ್ನು ಯಾವ ಮುಲಾಜಿಲ್ಲದೇ ಹೇಳುತ್ತಿದ್ದರು.

ಶಾಂತವೀರ ಗೋಪಾಲಗೌಡರ, ಲೋಹಿಯಾಹೋರಾಟಗಾರರನ್ನು, ಅನುಯಾಯಿಗಳನ್ನು ಸೃಷ್ಟಿಸಿದಂತೆ ಪುಟ್ಟಪ್ಪನವರಿಂದ ಆಗಲಿಲ್ಲ. ಅವರ ಹೋರಾಟಗಳ ವಾರಸುದಾರ, ಶಿಷ್ಯ ಎಂದು ಹೇಳಿಕೊಳ್ಳುವಂತೆ ಒಬ್ಬನೂ ರೂಪಗೊಳ್ಳದಿರುವುದು ಪುಟ್ಟಪ್ಪನವರ ದೌರ್ಬಲ್ಯವೂ ಹೌದು.

ಇವರದು ಹಳೇ ಕಾಂಗ್ರೆಸಿಗರ ರಾಜಕಾರಣ. ಎಂಥ ಎದುರಾಳಿಯೂ ಅವರು ಹಾಕಿದ ಪೇಚಿನಲ್ಲಿ ಸಿಕ್ಕಿ ಒದ್ದಾಡಿ ಶರಣಾಗಬೇಕು ಇಲ್ಲವೇ ಓಡಿಹೋಗಬೇಕು. ಒಂದು ಕಾಲಕ್ಕೆ ಏಳು ಪತ್ರಿಕೆಗಳನ್ನು ನಡೆಸಿ, ಪತ್ರಿಕೋದ್ಯಮದ ಭೀಷ್ಮ ಎನಿಸಿಕೊಂಡವರು. ಆ ಸಂದರ್ಭದಲ್ಲಿ ತಮ್ಮ ಬರವಣಿಗೆಯ ಮೂಲಕ ತಮ್ಮ ಎಳೆಗೆ ಸಿಗದ ರಾಜಕಾರಣಿಗಳನ್ನು ಬೆತ್ತಲಗೊಳಿಸುತ್ತಿದ್ದರು.

ಜಾತ್ಯತೀತ ನಡೆ ಮತ್ತು ತನ್ನನ್ನು ದ್ವೇಶಿಸುವವನೂ ಎದುರಿಗೆ ಸಿಕ್ಕಾಗ ಅವರ ವಯಕ್ತಿಕ ಜೀವನದ ಬಗ್ಗೆ ವಿಚಾರಿಸುತ್ತಾ ಪ್ರೀತಿ ತೋರಿಸಿ ತಮ್ಮ ಬಗ್ಗೆ ಇರುವ ಅವರ ಕಠೋರ ಮನಸ್ಸನ್ನು ಮೃದುಗೊಳಿಸುತ್ತಿದ್ದರು. ಆಸ್ತಿ, ಹಣ ಮಾಡಿಕೊಳ್ಳಲು ವಿಫುಲ ಅವಕಾಶಗಳಿದ್ದರೂ ಅದನ್ನು ಮಾಡದಿರುವುದರಿಂದಲೇ ಕನ್ನಡಕೊಬ್ಬನೇ ಪಾಪು ಎಂದು ಕರೆಸಿಕೊಂಡರು.

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ದೀಪ ಹಚ್ಚಲು ಹರಳೆಣ್ಣೆ ತೆಗೆದುಕೊಳ್ಳಲು ಆಗದ ಸ್ಥಿತಿಯಲ್ಲಿರುವಾಗ ಅದರ ಚುಕ್ಕಾಣಿ ಹಿಡಿದ ಪುಟ್ಟಪ್ಪ, ಇಂದು ಏಳು ಕೋಟಿಯಷ್ಟು ಹಣಕಾಸಿನ ವ್ಯವಹಾರ ನಿರ್ವಹಿಸುವಂತೆ ಮಾಡಿದ್ದಾರೆ. ಆದರೆ ಐದು ದಶಕಗಳ ಕಾಲ ನಿರಂತರ ಅಧ್ಯಕ್ಷರಾದರೂ ಸಂಘವು ಆರಕ್ಕೇರಲಿಲ್ಲ. ಮೂರಕ್ಕಿಳ್ಳಿಯಲಿಲ್ಲ. ಹರಿವ ನೀರಂತೆ ನಾಡಿನ ತುಂಬ ವಿಸ್ತರಿಸಿಕೊಳ್ಳಲಿಲ್ಲ. ಕನ್ನಡ ಪರಿಷತ್ತು ಹುಟ್ಟಿಗೆ ಕಾರಣವಾಗಯಿತು; ನಾಡಿನ ಗಡಿರೇಖೆಗಳನ್ನು ಗುರುತಿಸಿ ಏಕೀಕರಣ ಬೀಜಬಿತ್ತಿದ ಸಂಘದ ಬೆಳವಣಿಗೆಗೂ ಮತ್ತು ವ್ಯಾಪ್ತಿ ವಿಸ್ತರಿಸಿಕೊಳ್ಳದ ವೈಫಲ್ಯಕ್ಕೂ ಪುಟ್ಟಪ್ಪನವರ ಕಡೆ ಕೈಮಾಡುವುದು ಅಷ್ಟೇ ಅನಿವಾರ್ಯ.

ಇಂದು ಅವರು ನಮ್ಮ ಮಧ್ಯೆ ಇಲ್ಲ ನಿಜ. ಅವರ ಅಲ್ಲವಾದವುಗಳನ್ನು ಬದಿಗೆ ಇರಿಸಿ, ಅವರ ದಿಟ್ಟ ನಡೆ, ಕನ್ನಡದ ಕಾಳಜಿಯನ್ನು ಮೈಗೂಡಿಸಿಕೊಂಡು ಮುನ್ನಡೆಯುವುದು ನಮ್ಮ ಮುಂದಿನ ತುರ್ತು ನಡೆಯಾಗಬೇಕು ಅಷ್ಟೆ.

(ಲೇಖಕರು ಗುಬ್ಬಚ್ಚಿಗೂಡು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT