ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನ್ಯಾಯಯುತ ಬೇಡಿಕೆ

ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಭಿಮತ
Last Updated 18 ಫೆಬ್ರುವರಿ 2021, 7:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ನ್ಯಾಯಯುತವಾಗಿದ್ದು, ಈ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು’ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಒತ್ತಾಯಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.21ರಂದು ಜರುಗುವ ಪಂಚಮಸಾಲಿ ಮೀಸಲಾತಿ ಹೋರಾಟ ಸಮಾವೇಶವನ್ನು ಬೆಂಬಲಿಸಿ ಹಮ್ಮಿಕೊಂಡಿದ್ದ ಜನಜಾಗೃತಿ ರಥ ಯಾತ್ರೆಗೆ ನಗರದ ಚನ್ನಮ್ಮ ವೃತ್ತದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪಂಚಮಸಾಲಿ ಅಥವಾ ಲಿಂಗಾಯತ ಸಮಾಜ ಬಹುದೊಡ್ಡ ಸಮಾಜ. ಇವರೆಲ್ಲ ಜೀವನ ವೃತ್ತಿ ಕೃಷಿ ಕಾಯಕ. ಬಹುತೇಕ 30 ವರ್ಷಗಳ ಹಿಂದೆ ಕುಟುಂಬವೊಂದು 10 ಎಕರೆಗಳಷ್ಟು ಜಮೀನು ಹೊಂದಿದ್ದರೆ, ಅದು ಇದೀಗ ಪ್ರತಿ ಕುಟುಂಬಕ್ಕೆ ಒಂದು ಒಂದೋ ಎರಡೋ ಎಕರೆಗೆ ಇಳಿದಿದೆ. ಅದನ್ನೇ ನಂಬಿ ಅವರು ಕೃಷಿ ಮಾಡಬೇಕಿದೆ. ಅದರಲ್ಲಿ ಜೀವನ ಮಾಡುವುದು ಕಷ್ಟ. ಜೊತೆಗೆ ಕೃಷಿ ಕಾರ್ಮಿಕರಲ್ಲಿ, ಕೂಲಿ ಕಾರ್ಮಿಕರಲ್ಲಿ ಪಂಚಮಸಾಲಿ ಸಮುದಾಯದ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದನ್ನು ಅವಲೋಕಿಸಿ ಪ‍ಂಚಮಸಾಲಿ ಪೀಠದ ಇಬ್ಬರು ಸ್ವಾಮೀಜಿಗಳು ಮೀಸಲಾತಿ ಹೋರಾಟ ಕೈಗೊಂಡಿದ್ದಾರೆ’ ಎಂದರು.

‘ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಇಬ್ಬರು ಸ್ವಾಮೀಜಿಗಳು ನೂರಾರು ಕಿಲೋ ಮೀಟರ್ ಪಾದಯಾತ್ರೆ ಮೂಲಕ ಜನಜಾಗೃತಿ ಉಂಟು ಮಾಡಿ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದು ಸ್ವಾಗತಾರ್ಹ ಪ್ರಯತ್ನ. ಇದಕ್ಕೆ ಖಂಡಿತವಾಗಿಯೂ ಫಲಸಿಗುತ್ತದೆ ಎಂಬ ನಿರೀಕ್ಷೆ ನಮ್ಮೆಲ್ಲರದ್ದು. ಇದು ಅಖಂಡ ಲಿಂಗಾಯತ ಸಮುದಾಯಕ್ಕೆ ಇಬ್ಬರು ಸ್ವಾಮೀಜಿಗಳು ಒದಗಿಸುತ್ತಿರುವ ನ್ಯಾಯವಾಗಿದೆ’ ಎಂದು ಶ್ಲಾಘಿಸಿದರು.

ಹೊಸಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರವು 2007ರಲ್ಲಿ ಚರ್ಚೆಯಾಗಿತ್ತು. ಕಲಿಯುಗದಲ್ಲಿ ಸಂಘಟನೆ ಮುಖ್ಯ. ಸಂಘಟಿತರಾದರೆ ಎಲ್ಲವನ್ನೂ ಪಡೆಯಬಹುದು. ಮಲಗಿದ ಸಿಂಹದ ಬಾಯಿಯ ಬಳಿ ಬಂದು ಯಾವುದೇ ಪ್ರಾಣಿ ಆಹಾರ ಆಗಲ್ಲ. ಹೀಗಾಗಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕಾದರೆ ಹೋರಾಟ ಅಗತ್ಯ. ಹೋರಾಟ, ಹಾರಾಟ, ಚೀರಾಟ ಎಲ್ಲವೂ ಆದರೆ, ಸಮುದಾಯಕ್ಕೆ ಮೀಸಲಾತಿ ಸಿಗಲು ಸಾಧ್ಯ’ ಎಂದರು.

‘ಮೊದಲೆಲ್ಲ ಉಳುವರರಿಗೆ ಭೂಮಿ ಸಿಗುತ್ತಿತ್ತು. ಜಮೀನುಗಳೆಲ್ಲ ಉಳ್ಳವರರ ಪಾಲಾಗುತ್ತಿವೆ. ಹೀಗಾಗಿ ಜಗತ್ತು ಹೊತ್ತಿ ಉರಿಯುತ್ತಿದೆ’ ಎಂದರು.

ನೀಲಕಂಠ ಅಸೂಟಿ ಮಾತನಾಡಿ, ‘ಕೃಷಿ ನಂಬಿ ಬದುಕುತ್ತಿರುವ ಈ ಸಮಾಜವು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಮಾಲಿ, ಕೃಷಿ ಕೂಲಿ, ಗೌಂಡಿ ಕೆಲಸ ಮಾಡುವವರ ಪೈಕಿ ಹಲವರು ನಮ್ಮಸಮುದಾಯದವರಿದ್ದಾರೆ. ಅವರೆಲ್ಲ ಅಭಿವೃದ್ಧಿಗೆ ಮೀಸಲಾತಿ ಅಗತ್ಯ. ಹೀಗಾಗಿ ಬೆಂಗಳೂರಿನಲ್ಲಿ ಫೆ.21ರಂದು ನಡೆಯಲಿರುವ ಹೋರಾಟ, ಸಮಾವೇಶ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ರಥಯಾತ್ರೆಯ ನಡುವೆ ಬಂದು ಬೆಂಬಲ ಸೂಚಿಸಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ‘ಈ ಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಯಾವುದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ, ನ್ಯಾಯಯುತ ಬೇಡಿಕೆ ಈಡೇರಿಸಿ, ಸಮುದಾಯದ ಹಿತ ಕಾಪಾಡಬೇಕು’ ಎಂದರು.

ರಾಜ ವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ ಮಾತನಾಡಿದರು.ಗಂಗಾಧರ ದೊಡ್ಡವಾಡ, ವಿರೂಪಾಕ್ಷಿ ಕಳ್ಳಿಮನಿ, ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ, ನೀಲಕಂಠ ಅಸೂಟಿ, ವೀರಣ್ಣ ನೀರಲಗಿ, ಕುಮಾರ ಕುಂದನಳ್ಳಿ, ಬಾಬು ಹುಟಗಿ, ನಂದಕುಮಾರ ಪಾಟೀಲ, ವಿಕಾಸ ಸೊಪ್ಪಿನ, ಗುರುಸಿದ್ಧಪ್ಪ ಇಂಗಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT