ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮೀನು ಮಾರಾಟ ವ್ಯವಹಾರ: ರೌಡಿ ಬಚ್ಚಾಖಾನ್‌ ಸೇರಿ 8 ಮಂದಿಯನ್ನು ಬಂಧಿಸಿದ ಸಿಸಿಬಿ

Published 4 ಸೆಪ್ಟೆಂಬರ್ 2024, 11:11 IST
Last Updated 4 ಸೆಪ್ಟೆಂಬರ್ 2024, 11:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಮೀನು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ನಗರದ ವ್ಯಕ್ತಿಯೊಬ್ಬರಿಗೆ ಕೋಟ್ಯಾಂತರ ರೂಪಾಯಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದ ನಟೋರಿಯಸ್‌ ರೌಡಿ ಯೂಸುಫ್‌ ಬಚ್ಚಾಖಾನ್‌ ಜೊತೆ ಆತನ ಏಳು ಮಂದಿ ಸಹಚರರನ್ನು ಬುಧವಾರ ಹುಬ್ಬಳ್ಳಿ ಧಾರವಾಡ ಮಹಾನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ, ಬಳ್ಳಾರಿ ಜೈಲಿನಿಂದ ಪೆರೋಲ್‌ ಮೇಲೆ ಹೊರಗಿದ್ದ ರೌಡಿ ಬಚ್ಚಾಖಾನ್‌ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿ–ಧಾರವಾಡದಲ್ಲಿದ್ದ ಅವನ ಸಹಚರರಾದ ಸಯ್ಯದ್‌ ಅಲಿ, ಇರ್ಫಾನ್‌, ಸೂರಜ್‌ ಜಮಖಂಡಿ, ದಾದಾಪೀರ್‌ ಹಲಗೇರಿ, ಮೋಯಿನಖಾನ್‌ ಪಟೇಲ್‌, ತೌಸಿಫ್‌ ನಿಪ್ಪಾಣಿ, ನಿಜಾಮುದ್ದೀನ್‌ ಕೆರೆಕಟ್ಟಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಹುಬ್ಬಳ್ಳಿ ಮಂಟೂರು ಗ್ರಾಮದ ವ್ಯಕ್ತಿಯೊಬ್ಬರ ಜಮೀನು ಮಾರಾಟಕ್ಕೆ ಸಂಬಂಧಿಸಿ ನಡೆದ ಹಣಕಾಸಿನ ವ್ಯವಹಾರ ಪೂರ್ಣಗೊಂಡಿರಲಿಲ್ಲ. ಅದಕ್ಕೆ ಸಂಬಂಧಿಸಿ ಅವರಿಗೆ ಎರಡು ಮೊಬೈಲ್‌ ನಂಬರ್‌ಗಳಿಂದ ಸಾಕಷ್ಟು ಕರೆಗಳು ಬಂದಿದ್ದು, ಜೀವ ಬೆದರಿಕೆ ಹಾಕಿ ₹1 ಕೋಟಿ ನೀಡುವಂತೆ ಬೇಡಿಕೆ ಇಡಲಾಗಿತ್ತು. ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಾಕ್ಷ್ಯಾಧಾರದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ರೌಡಿ ಬಚ್ಚಾಖಾನ್‌ ಬಳ್ಳಾರಿ ಜೈಲಿನಿಂದ ಆ. 2ರಿಂದ 45 ದಿನ ಪೆರೋಲ್‌ ಮೇಲೆ ಹೊರಗೆ ಬಂದಿದ್ದ. ಹಳೇಹುಬ್ಬಳ್ಳಿಯಲ್ಲಿ ನಡೆದ ಫ್ರೂಟ್‌ ಇರ್ಫಾನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅವನು, ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ತನ್ನ ಸಹಚರ ಸಹಾಯದಿಂದ ಸಾರ್ವಜನಿಕರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿಸುತ್ತಿದ್ದ. ಇನ್ನೂ ಅನೇಕರಿಗೆ ಜೀವ ಬೆದರಿಕೆ ಕರೆಗಳು ಹೋಗಿರುವ ಮಾಹಿತಿ ಲಭ್ಯವಾಗಿದ್ದು, ಸ್ವಯಂಪ್ರೇರಿತವಾಗಿ ದೂರು ನೀಡಬಹುದು. ಇಲ್ಲದಿದ್ದರೆ, ತನಿಖೆ ವೇಳೆ ದೊರೆಯುವ ಶಂಕಿತ ಕರೆಗಳ ಮಾಹಿತಿ ಆಧರಿಸಿ ಅಂಥವರನ್ನು ಕರೆದು ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಬುಧವಾರ ಮಾಧ್ಯಮದವರಿಗೆ ತಿಳಿಸಿದರು.

ಜಮೀನು ಮಾರಾಟ ಮಾಡಿದ ವ್ಯಕ್ತಿಯ ಮತ್ತು ಕುಟುಂಬದವರ ಚಲನವಲನಗಳನ್ನು ಗಮನಿಸಿ, ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕುತ್ತಿದ್ದರು. ತಾಂತ್ರಿಕ ಸಾಕ್ಷ್ಯಾಧಾರದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ
–ಎನ್‌. ಶಶಿಕುಮಾರ್‌, ಪೊಲೀಸ್‌ ಕಮಿಷನರ್‌, ಹುಬ್ಬಳ್ಳಿ–ಧಾರವಾಡ ಮಹಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT