ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಸರ್ವರ್‌ ಕಾಟ: ಇ– ಆಸ್ತಿ ನೋಂದಾಯಿಸಲು ಪರದಾಟ

Published 24 ಜೂನ್ 2023, 6:35 IST
Last Updated 24 ಜೂನ್ 2023, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಮೋಸ, ವಂಚನೆಯಾಗದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಇ–ಸ್ವತ್ತು/ ಇ–ಆಸ್ತಿ, ಧಾರವಾಡ ಜಿಲ್ಲೆಯಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಕುಂಟುತ್ತ ಸಾಗಿದೆ. ಪರಿಣಾಮವಾಗಿ, ಕಳೆದ 3–4 ತಿಂಗಳಿನಿಂದ ಆಸ್ತಿ ಮಾರಾಟ ಮಾಡಲು ಹಾಗೂ ಖರೀದಿಸಲು ಜನರು ಪರದಾಡುತ್ತಿದ್ದಾರೆ.

ಖರೀದಿ– ಮಾರಾಟದಲ್ಲಿ ನಡೆಯುತ್ತಿದ್ದ ವಂಚನೆಯನ್ನು ತಡೆಯುವ ಉದ್ದೇಶದಿಂದ ಆಸ್ತಿಗಳ ದಾಖಲೆಗಳನ್ನು ಹಂತಹಂತವಾಗಿ ಗಣಕೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2.18 ಲಕ್ಷ ಆಸ್ತಿಗಳಿವೆ. 1 ಲಕ್ಷ ಆಸ್ತಿಗಳ ದಾಖಲೆಗಳು ಇನ್ನೂ ಕಂಪ್ಯೂಟರೀಕರಣವಾಗಿಲ್ಲ. ಸರ್ವರ್‌ ಸಮಸ್ಯೆಯಿಂದಾಗಿ ಇದುವರೆಗೆ ಕೇವಲ 35 ಸಾವಿರ ಆಸ್ತಿಗಳ ಇ–ಆಸ್ತಿ ಮಾಡಲಾಗಿದೆ. 

ಆರಂಭದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ವಾರ್ಡ್‌ಗಳಲ್ಲಿ ಆಸ್ತಿ ವ್ಯವಹಾರಕ್ಕೆ ಇ–ಸ್ವತ್ತು ಕಡ್ಡಾಯಗೊಳಿಸಲಾಗಿತ್ತು. ಮಾರ್ಚ್‌ ತಿಂಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇ–ಸ್ವತ್ತು, ನಗರ ಪ್ರದೇಶಗಳಲ್ಲಿ ಇ–ಆಸ್ತಿ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಇ–ಆಸ್ತಿ ಮಾಡಿದ ನಂತರವೇ ಸಬ್‌ ರೆಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತಿದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಪಾಲಿಕೆಯಲ್ಲಿ ಇ–ಆಸ್ತಿ ಮಾಡಲಾಗುತ್ತಿಲ್ಲ. ಹೀಗಾಗಿ ಆಸ್ತಿಗಳ ಖರೀದಿ/ ಮಾರಾಟ ಸಬ್‌ ರೆಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿಯಾಗುತ್ತಿಲ್ಲ.

‘ಕಳೆದ 15 ದಿನಗಳಿಂದ ಇ–ಆಸ್ತಿ ಮಾಡಲು ಹೊಸೂರು ಬಳಿಯಿರುವ ಪಾಲಿಕೆಯ ವಲಯ ಕಚೇರಿಗೆ ಅಲೆದಾಡುತ್ತಿದ್ದೇನೆ. ಸರ್ವರ್‌ ನಿಧಾನಗತಿಯಲ್ಲಿದೆ ಎಂದು ಹೇಳಿ, ಅಧಿಕಾರಿಗಳು ವಾಪಸ್‌ ಕಳುಹಿಸುತ್ತಿದ್ದಾರೆ’ ಎಂದು ಗೋಕುಲ ನಿವಾಸಿ ಮಹಾಂತೇಶ ಅಂಗಡಿ ಅಳಲು ತೋಡಿಕೊಂಡರು.

ಲಂಚಕ್ಕಾಗಿ ಕಾಟ: 

ಸರ್ವರ್‌ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೆಲವು ಅಧಿಕಾರಿಗಳು ಇ–ಆಸ್ತಿ ಮಾಡಿಕೊಡಲು, ಲಂಚಕ್ಕಾಗಿ ಒತ್ತಾಯಿಸುತ್ತಿರುವ ಆರೋಪ ಕೇಳಿಬಂದಿದೆ. ವಲಯ ಕಚೇರಿಯ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ. ಲಂಚ ಕೊಟ್ಟರೆ ರಾತ್ರಿಯವರೆಗೆ ಕುಳಿತು ಮಾಡಿಕೊಡುತ್ತಾರೆ, ಇಲ್ಲದಿದ್ದರೆ ತಿಂಗಳುಗಟ್ಟಲೆಯಾದರೂ ಕೊಡುತ್ತಿಲ್ಲ  ಎನ್ನುವುದು ಸಾರ್ವಜನಿಕರ ಆರೋಪ. 

‘ಇ–ಸ್ವತ್ತು ಮಾಡಲು ಅರ್ಜಿ ಸಲ್ಲಿಸಿದರೆ ಹತ್ತಿಪ್ಪತ್ತು ದಾಖಲೆಗಳನ್ನು ಕೇಳುತ್ತಾರೆ. ಹತ್ತಾರು ಬಾರಿ ಓಡಾಡಿಸುತ್ತಾರೆ. ಇದರಿಂದ ಸಾಕಾಗಿ ಹೋಗಿದೆ. ಲಂಚ ನೀಡಿದರೆ ಮಾತ್ರ ಕೆಲಸ ಆಗುತ್ತದೆ ಎನ್ನುವ ಭಾವನೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು. 

ಸರ್ಕಾರಕ್ಕೆ ಆದಾಯದ ಖೋತಾ: 

ತೀವ್ರವಾಗಿ ಬೆಳೆಯುತ್ತಿರುವ  ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಪ್ರತಿದಿನ ನೂರಾರು ಜನರು ಆಸ್ತಿ ಖರೀದಿ– ಮಾರಾಟದಲ್ಲಿ ತೊಡಗಿರುತ್ತಾರೆ.  ಇದರಿಂದ ಸರ್ಕಾರಕ್ಕೆ ನೋಂದಣಿ ಶುಲ್ಕ, ಸ್ಟ್ಯಾಂಪ್‌ ತೆರಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಂದಾಯವಾಗುತ್ತಿತ್ತು. ಜಿಲ್ಲೆಯಲ್ಲಿ ಏಳು ಸಬ್‌ ರೆಜಿಸ್ಟ್ರಾರ್‌ ಕಚೇರಿಗಳಿದ್ದು, ಒಂದೊಂದು ಕಚೇರಿಯಿಂದ ಪ್ರತಿ ತಿಂಗಳು ₹ 2.50 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿತ್ತು. ಈಗ ಸರ್ವರ್‌ ಸಮಸ್ಯೆಯಿಂದಾಗಿ ವಹಿವಾಟು ಕುಂಠಿತಗೊಂಡಿದ್ದರಿಂದ ಆದಾಯಕ್ಕೂ ಕತ್ತರಿ ಬಿದ್ದಿದೆ.

‘ಸರ್ವರ್‌ ಸಮಸ್ಯೆಯಿಂದಾಗಿ ಇ–ಸ್ವತ್ತು ಮಾಡಿಕೊಡುತ್ತಿಲ್ಲ. ಇದರಿಂದಾಗಿ ಆಸ್ತಿಗಳ ಖರೀದಿ– ಮಾರಾಟ ಪ್ರಮಾಣ ಶೇ 70ರಷ್ಟು ಇಳಿದಿದೆ. ಜನರಿಗೂ ತೊಂದರೆಯಾಗುತ್ತಿದೆ. ಸರ್ಕಾರಕ್ಕೂ ಆದಾಯ ಖೋತಾ ಆಗಿದೆ’  – ಶಾಂತರಾಜ ಪೋಳ ಡೀಡ್‌ ಬರಹಗಾರ

‘ಇ–ಆಸ್ತಿ ಪ್ರಕ್ರಿಯೆಯನ್ನು ಸುಲಲಿತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಸರ್ವರ್‌ ಸಮಸ್ಯೆಯನ್ನು ಬಗೆಹರಿಸಲು ತಂತ್ರಜ್ಞರಿಗೆ ಸೂಚಿಸಲಾಗಿದೆ. ನುರಿತ ಅಧಿಕಾರಿಗಳನ್ನು ಈ ಕೆಲಸಕ್ಕೆ ಬಳಸಲಾಗುವುದು. ನಿಧಾನವಾಗಿ ಎಲ್ಲ ಸರಿಯಾಗುತ್ತದೆ’ – ಡಾ.ಗೋಪಾಲಕೃಷ್ಣ ಬಿ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT