ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಳನಕೆರೆಗೆ ಹರಿಯುತ್ತಿದೆ ಚರಂಡಿ ನೀರು!

ಕೊಳಚೆ ನೀರಿನಿಂದ ಕೆರೆಯ ಸೌಂದರ್ಯಕ್ಕೆ ಧಕ್ಕೆ: ಶಾಸಕ ಬೆಲ್ಲದ ಬೇಸರ
Last Updated 13 ಡಿಸೆಂಬರ್ 2020, 13:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಮಾಡುತ್ತಿರುವ ತೋಳನಕೆರೆ ಕಾಮಗಾರಿಗೆ ನಿತ್ಯ ಚರಂಡಿ ನೀರು ಸೇರುತ್ತಿದೆ. ಇದರಿಂದ ಕೆರೆಯ ಸುತ್ತಲಿನ ಶ್ರೇಯಾ ಪಾರ್ಕ್‌, ಅಕ್ಷಯ ಕಾಲೊನಿ, ಕಿರ್ಲೊಸ್ಕರ್‌ ಲೇ ಔಟ್‌ ಮತ್ತು ಮಾನಸಗಿರಿ ಬಡಾವಣೆಗಳ ಜನರಿಗೆ ಕೆಟ್ಟ ವಾಸನೆ ಬರುತ್ತಿದೆ. ಇದೇ ವಾಸನೆಯಲ್ಲಿ ಜನ ವಾಕಿಂಗ್‌ ಮಾಡಬೇಕಾಗಿದೆ.

ಕೆರೆಯ ಆವರಣದ ಜಾಗವನ್ನು ಪ್ರವಾಸಿ ತಾಣವಾಗಿ ರೂಪಿಸಲು ಮತ್ತು ಕ್ರೀಡಾ ಪಾರ್ಕ್ ನಿರ್ಮಿಸಲು ಕೆಲಸ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಚರಂಡಿ ನೀರು ಕೆರೆಗೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿಲ್ಲ. ಇದು ಶಾಸಕ ಅರವಿಂದ ಬೆಲ್ಲದ ಅವರ ಬೇಸರಕ್ಕೂ ಕಾರಣವಾಯಿತು. ಭಾನುವಾರ ಬೆಳಿಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಕೆರೆಗೆ ಭೇಟಿ ನೀಡಿದ ಅವರು ಸುಮಾರು ಎರಡು ತಾಸು ಕಾಮಗಾರಿ ಪರಿಶೀಲಿಸಿದರು.

ರೇಣುಕಾ ನಗರ, ಗಾಂಧಿನಗರ, ರಾಮಲಿಂಗೇಶ್ವರ ನಗರದ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವ ಚಿತ್ರಣ ಕಂಡ ಶಾಸಕರು ‘ಅಮೃತ ಯೋಜನೆ’ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆರೆ ವಾತಾವರಣ ಸುಂದರಗೊಳಿಸಿದರೂ, ಕೆರೆ ನೀರು ಕೊಳಕಾಗಿದ್ದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು. ಇದಕ್ಕೆ ಯೋಜನೆಯ ಅಧಿಕಾರಿಗಳು ‘ಇದು ನಮಗೆ ಸಂಬಂಧಿಸಿದ್ದಲ್ಲ‌’ ಎಂದರು. ಇದರಿಂದ ಇನ್ನಷ್ಟು ಸಿಟ್ಟಾದ ಬೆಲ್ಲದ ‘ಕಾಮಗಾರಿಗೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ನನಗೆ ಸಂಬಂಧಿಸಿದ್ದಲ್ಲ ಎನ್ನುವ ಬೇಜವಾಬ್ದಾರಿ ಮಾತು ಸರಿಯಲ್ಲ’ ಎಂದರು.

ಕೆರೆಯ ಸುತ್ತಲೂ ವಾಯುವಿಹಾರಕ್ಕೆ ಬಂದಿದ್ದ ಜನ ಕೂಡ ಚರಂಡಿ ನೀರು ಕೆರೆ ಸೇರುವ ಸಮಸ್ಯೆಯನ್ನೇ ಶಾಸಕರ ಗಮನಕ್ಕೆ ತಂದರು.

ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಬೆಲ್ಲದ ‘ಚರಂಡಿ ನೀರು ಶುದ್ಧೀಕರಿಸಿ ಕೆರೆಗೆ ಬಿಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಈ ನೀರು ಬೇರೆ ಕಡೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಈ ಸಮಸ್ಯೆ ಪರಿಹರಿಸುವುದಾಗಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ತಿಂಗಳು ಮತ್ತೆ ಪರಿಶೀಲಿಸುತ್ತೇನೆ’ ಎಂದರು.

ಕಾಮಗಾರಿ ಕುಂಠಿತವಾಗಲು ಕಾರಣವೇನು ಎಂದು ಶಾಸಕರನ್ನು ಪ್ರಶ್ನಿಸಿದಾಗ ‘ಭವಿಷ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಷ್ಟೂ ಅಧಿಕಾರಿಗಳಿಗೆ ತಿಳಿದಿಲ್ಲ. ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಬಹಳ ಕಷ್ಟ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಪೇವರ್ಸ್‌ ಅಳವಡಿಸಿದ ಬಳಿಕ ನೆಲ ಅಗೆದರು’
ಕೆರೆಯ ಸುತ್ತಲೂ ವಾಕಿಂಗ್‌ ಮಾಡಲು ಮೊದಲು ಪೇವರ್ಸ್‌ಗಳನ್ನು ಅಳವಡಿಸಿ ಬಳಿಕ ಅವುಗಳನ್ನು ಕಿತ್ತು ಹಾಕಲಾಗಿದೆ. ಈಗ ನೆಲ ಅಗೆದು ತಂತಿ ಅಳವಡಿಸಿ ಮತ್ತೆ ಪೇವರ್ಸ್‌ ಹಾಕಲಾಗುತ್ತಿದೆ. ಸಾರ್ವಜನಿಕರ ಹಣ ವಿನಾಕಾರಣ ಪೋಲಾಗುತ್ತಿದೆ ಎಂದು ತೋಳನಕೆರೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಚಿಕ್ಕರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಸರಿಯಾದ ಪೂರ್ವಯೋಜನೆ ಇಲ್ಲದೆ ಕಾಮಗಾರಿ ಮಾಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚವೂ ಹೆಚ್ಚಾಗುತ್ತಿದೆ. ₹15.57 ಕೋಟಿಯಲ್ಲಿ ಪೂರ್ಣ ಕಾಮಗಾರಿ ಮುಗಿಸಲು 18 ತಿಂಗಳುಗಳ ಕಾಲ ಗಡುವು ನೀಡಿ 2019ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅವಧಿ ಮುಗಿದರೂ ಕೆಲಸ ಮುಗಿದಿಲ್ಲ’ ಎಂದರು.

ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್ ‘ತೋಳನಕೆರೆ ಅಭಿವೃದ್ಧಿಗೆ ಎರಡನೇ ಹಂತದಲ್ಲಿ ₹5 ಕೋಟಿ ನೀಡಲಾಗಿದೆ. ಹೀಗಾಗಿ ಕಾಮಗಾರಿಯ ಒಟ್ಟು ವೆಚ್ಚ ₹23 ಕೋಟಿ ಆಗಿದ್ದು, ಅದರಲ್ಲಿ ₹7.5 ಕೋಟಿ ಖರ್ಚಾಗಿದೆ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT