ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳ ಆಯೋಜಿಸಲು ಶಾಶ್ವತ ಸ್ಥಳ

ಒಣಮೆಣಸಿನಕಾಯಿ ಮೇಳಕ್ಕೆ ಚಾಲನೆ ನೀಡಿದ ಶೆಟ್ಟರ್‌, ಜೋಶಿ
Last Updated 8 ಫೆಬ್ರುವರಿ 2020, 12:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಹಾರ ಪದಾರ್ಥಗಳ ಮೇಳ ಆಯೋಜಿಸಲು ಅಮರಗೋಳದಲ್ಲಿರುವ ಎ.ಪಿ.ಎಂ.ಸಿ. ಆವರಣದಲ್ಲಿ ಒಂಬತ್ತು ಎಕರೆಯಲ್ಲಿ ಕಾಯಂ ಸ್ಥಳ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿನಿಧಿಗಳ ಜೊತೆಗೂ ಚರ್ಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಮೂರುಸಾವಿರ ಮಠದ ಆವರಣದಲ್ಲಿ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಎಪಿಎಂಸಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ಹಾಗೂ ಉಳುವಾ ಯೋಗಿ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆಯಾಗಿರುವ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳ ಉದ್ಘಾಟಿಸಿ ಶನಿವಾರ ಮಾತನಾಡಿದರು.

‘ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಮಧ್ಯವರ್ತಿಗಳ ಕಾಟ ತಪ್ಪಬೇಕು. ರೈತರು ನೇರವಾಗಿ ಮೇಳದಲ್ಲಿ ಮಾರಾಟ ಮಾಡಿದರೆ ಅವರಿಗೆ ಉತ್ತಮ ಲಾಭ ಸಿಗುತ್ತದೆ. ಫೆ. 14ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೆ ಆಹಾರ ಸಂಸ್ಕರಣೆ ಮಾಡುವ ಕಂಪನಿಗಳು ಬರಲಿವೆ’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರಿಂದ ಖರೀದಿ ಮಾಡಲು ಮೇಳ ವೇದಿಕೆ ಕಲ್ಪಿಸುತ್ತದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ‌ ಶಿವಳ್ಳಿ, ಸಾಂಬಾರು ಪರ್ದಾಥ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪುರ, ಪ್ರಧಾನ ವ್ಯವಸ್ಥಾಪಕ ಚಿದಾನಂದಪ್ಪ ಪಿ.ಜಿ, ತೋಟಗಾರಿಕೆ ಉಪನಿರ್ದೇಶಕ ರಾಮಚಂದ್ರ ಮಡಿವಾಳರ, ವಾಣಿಜ್ಯೋದ್ಯಮ ಸಂಸ್ಥೆಯ ಬಾಲು ಪಾಟೀಲ, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ಶಿವನಗೌಡರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಫಕೀರಮ್ಮ ಹುಲ್ಲುಂಬಿ, ಅಧಿಕಾರಿಗಳಾದ ಯೋಗೇಶ ಕಿಲಾರಿ, ಅರ್ಚನಾ, ಗೀತಾ ಕುಂಬಾರ, ಆನಂದ ಇದ್ದರು.

ಕಾದು ಸುಸ್ತಾದ ವಿದ್ಯಾರ್ಥಿನಿಯರು

ಮಠದ ಸಭಾಂಗಣದಲ್ಲಿ ಶನಿವಾರ ಮೇಳದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಇದಕ್ಕೆ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ, ಗಣ್ಯರು ಕಾರ್ಯಕ್ರಮದಲ್ಲಿ ಹೆಚ್ಚು ಹೊತ್ತು ಇರಲೇ ಇಲ್ಲ.

ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡಲು ಮೂರುಸಾವಿರ ಮಠ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಯಿಂದ ಕಾಯುತ್ತಿದ್ದರು. 11 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಒಂದು ಗಂಟೆ ತಡವಾಗಿ ಬಂದ ಸಚಿವರು ತರಾತುರಿಯಲ್ಲಿ ಮಳಿಗೆಗಳಿಗೆ ಭೇಟಿ ನೀಡಿ ಹೊರಟು ಹೋದರು.

‘ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಪೂರ್ಣವಾಗಿ ವೇದಿಕೆ ಕಾರ್ಯಕ್ರಮವೇ ನಡೆಯದ ಕಾರಣ ಕಾದು, ಕಾದು ವಾಪಸ್‌ ಹೋಗಬೇಕಾಯಿತು’ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

ಈ ಬಾರಿ ಅಪಾರ ಪ್ರಮಾಣದಲ್ಲಿ ಮಳೆಬಂದು ಬೆಳೆ ಹಾನಿಯಾಗಿರುವ ಕಾರಣ ಒಣಮೆಣಸಿನಕಾಯಿ ಇಳುವರಿ ಕಡಿಮೆಯಾಗಿದೆ. ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿರುತ್ತಿದ್ದ ಮಳಿಗೆಗಳು ಈ ಬಾರಿ ಮೂರಂಕಿಯನ್ನೇ ಮುಟ್ಟಿಲ್ಲ. ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ.

ಬ್ಯಾಡಗಿ, ಡಬ್ಬಿ, ಕಡ್ಡಿ ತಳಿಯ ಮೆಣಸಿನಕಾಯಿ ಹೆಚ್ಚಿದ್ದು, ಖಾರದ ಪುಡಿಯೂ ಇದೆ. ಬಳ್ಳಾರಿ ಭಾಗದಿಂದ ತಂದಿರುವ ಡಬ್ಬಿ ತಳಿಗೆ ಪ್ರತಿ ಕೆ.ಜಿ.ಗೆ ₹260ರಿಂದ 280 ಬೆಲೆ ಇದೆ. ಬ್ಯಾಡಗಿ ತಳಿಯ ಬೆಲೆ ಪ್ರತಿ ಕೆ.ಜಿ.ಗೆ ₹350 ಇದೆ.

ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಿಇಒ ಜ್ಞಾನೇಶ್ವರ ನಾಯಕ ‘ಪ್ರಜಾವಾಣಿ’ ಜೊತೆ ಮಾತನಾಡಿ ‘2015ರಿಂದ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಅತಿಯಾದ ಮಳೆಯಾದ ಕಾರಣ ಇಳುವರಿ ಕಡಿಮೆಯಾಗಿ ಬೆಲೆಯೂ ಹೆಚ್ಚಾಗಿದೆ. ಆದ್ದರಿಂದ ಕಳೆದ ವರ್ಷದಷ್ಟು ಈ ಬಾರಿ ರೈತರು ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT