ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರಿಗೆ ಮಂತ್ರಿ ಮಾಡುವ ಭರವಸೆ ನೀಡಿಲ್ಲ: ಸಿದ್ದರಾಮಯ್ಯ

Last Updated 17 ಜನವರಿ 2019, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅತೃಪ್ತರಿಗೆ ಮಂತ್ರಿ ಮಾಡುತ್ತೇವೆ ಎಂದು ಎಲ್ಲೂ ಭರವಸೆ ನೀಡಿಲ್ಲ. ನಮ್ಮಲ್ಲಿ ಯಾರೂ ಅತೃಪ್ತರಿಲ್ಲ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ನಾಳೆ ನಡೆಯುವ ಕಾಂಗ್ರೆಸ್ ಶಾಸಕಾಂಗ ‍ಪಕ್ಷದ ವಿಶೇಷ ಸಭೆಗೆ ಪಕ್ಷದ ಎಲ್ಲಾ ಶಾಸಕರು ಬಂದೇ ಬರುತ್ತಾರೆ. ಇದರಲ್ಲಿ ಅನುಮಾನವಿಲ್ಲ’ ಎಂದರು.

‘ಬಿಜೆಪಿಯವರಿಗೆ ರಾಜಕೀಯ ಬದ್ಧತೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಆಪರೇಷನ್ ಕಮಲ ಎಂಬುದನ್ನು 2008ರಲ್ಲಿ ಪ್ರಾರಂಭ ಮಾಡಿದವರೇ ಯಡಿಯೂರಪ್ಪ. ಆಪರೇಷನ್‌ ಕಮಲ ಎಂಬುದು ಪ್ರಜಾಪ್ರಭುತ್ವಕ್ಕೆ ಒಂದು ತರ ರೋಗ ಇದ್ದಂತೆ.‌‌ ಈ ರೋಗ ಹರಡಲು ಬಿಜೆಪಿ ಕಾರಣ’ ಎಂದರು.

‘ಜನ ಅವರನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಹೇಸಿಗೆ ರಾಜಕಾರಣದಲ್ಲಿ ಬಿಜೆಪಿ ತೊಡಗಿದೆ. ಬಿಜೆಪಿಯವರಿಗೆ ತಮ್ಮ ಶಾಸಕರ ಮೇಲೆಯೇ ತಮಗೆ ನಂಬಿಕೆ ಇಲ್ಲ. ಹರಿಯಾಣದ ಹೋಟೆಲ್‌ನಲ್ಲಿ ಕೂಡಿಹಾಕಿದ್ದಾರೆ. ಬಿಜೆಪಿಯವರ ಈ ವರ್ತನೆಗೆ ರಾಜ್ಯದ ಜನ ಅಸಹ್ಯ ಪಡುತ್ತಿದ್ದಾರೆ’ ಎಂದರು.

‘ಆಪರೇಷನ್‌ ಕಮಲ ಯಶಸ್ವಿಯಾಗಲ್ಲ ಎಂಬುದು ನಮಗೆ ಮೊದಲೇ ಗೊತ್ತಿತ್ತು’ ಎಂದು ಅವರು ಹೇಳಿದರು.

ಸಮ್ಮಿಶ್ರ ಸರ್ಕಾರದ ಮೇಲೆ ತಮ್ಮ ಹಿಡಿತ ಸಾಧಿಸಲು ಅತೃಪ್ತರನ್ನು ಎತ್ತಿಕಟ್ಟುತ್ತಿರುವವರೇ ನೀವು ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರನ್ನು ಕರೆದುಕೊಂಡುಹೋಗಿ ಹೋಟೆಲ್‌ನಲ್ಲಿ ಇಡಲು ಯಾರಿಗಾದರೂ ನಾನೂ ಹೇಳಿದ್ದೇನಾ? ನನ್ನ ಸಲಹೆ ಮೇರೆಗೆ ಅವರೆಲ್ಲ ಹೋಗಿದ್ದಾರಾ? ಏನ್ರಿ ಇದು ಮೂರ್ಖತನ? ಇದರಲ್ಲಿ ಏನಾದರೂ ಸತ್ಯ ಇದೆಯಾ? ತೋಳ, ಕುರಿಮರಿ ಕಥೆ ಇದೆಯಲ್ಲಾ ಹಾಗಾಯಿತು ಇದು’ ಎಂದು ರೇಗಿದರು.

ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT