ಬುಧವಾರ, ಏಪ್ರಿಲ್ 14, 2021
25 °C
ಅಳ್ನಾವರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ 26ಕ್ಕೆ

ಸಾಹಿತ್ಯ ಹಬ್ಬಕ್ಕೆ ವೇದಿಕೆ ಸಜ್ಜು

ರಾಜಶೇಖರ ಸುಣಗಾರ Updated:

ಅಕ್ಷರ ಗಾತ್ರ : | |

ಅಳ್ನಾವರ: ಬಹು ಭಾಷೆಗಳ ತಾಣವಾಗಿರುವ ಮಲೆನಾಡಿನ ಸುಂದರ ಪರಿಸರದಲ್ಲಿ ಸಾಹಿತ್ಯದ ತೇರು ಎಳೆಯಲು ಅಳ್ನಾವರ ಸಜ್ಜಾಗಿದೆ. ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ (ಫೆ. 26) ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

‘ಸಮ್ಮೇಳನವನ್ನು ಅಚ್ಚಕಟ್ಟಾಗಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲಸ ಸರಾಗವಾಗಿ ಸಾಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲರೂ ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸುತ್ತೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್‌ ತಿಳಿಸಿದರು.  

ಬೆಳಗ್ಗೆ 8.30ಕ್ಕೆ ಪರಿಷತ್ ಧ್ವಜಾರೋಹಣ, ಕನ್ನಡಾಂಬೆಯ ಪೂಜೆಯ ನಂತರ ಚಕ್ಕಡಿಯಲ್ಲಿ ಸಮ್ಮೇಳನದ ಅಧ್ಯಕ್ಷ ಈರಣ್ಣ ಅಗಳಗಟ್ಟಿ ಅವರ ಮೆರವಣಿಗೆ ವನಶ್ರೀ ರಸ್ತೆಯಿಂದ ನಡೆಯಲಿದೆ. ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ ನಿಂಬಣ್ಣವರ ಮೆರವಣಿಗೆಗೆ ಚಾಲನೆ ನೀಡುವರು. ತಹಶೀಲ್ದಾರ್ ಅಮರೇಶ ಪಮ್ಮಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 12ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಮನೋರೋಗ ತಜ್ಞ ಆನಂದ ಪಾಂಡುರಂಗಿ ಹಾಗೂ ಮಲೆನಾಡಿನ ಜನಪರ ಸಂಸ್ಕೃತಿ, ಸಾಹಿತ್ಯ ಕುರಿತು ಡಾ. ಕೆ.ಎನ್. ಕೌಜಲಗಿ ಉಪನ್ಯಾಸ ನೀಡುವರು. ಮ. 2 ಗಂಟೆಗೆ ನಡೆಯುವ ಇನ್ನೊಂದು ಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಭೂಮಕ್ಕನವರ ಆಶಯ ನುಡಿ ಆಡುವರು. ಸಾಹಿತಿ ಮಾರ್ತಾಂಡ ದೀಕ್ಷಿತ್ ಅಧ್ಯಕ್ಷತೆ ವಹಿಸುವರು. ಜಯಶ್ರೀ ಉಡುಪಿ ಅವರ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಸಂಜೆ 4.30 ಕ್ಕೆ ಸಮಾರೋಪ ಜರುಗಲಿದ್ದು, ಸಮಾರೋಪದ ನುಡಿಗಳನ್ನು ಸಾಹಿತಿ ಡಾ. ಧರನೇಂದ್ರ ಕುರಕುರಿ ಆಡುವರು. ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಯಶವಂತ ಮದೀನಕರ ಭಾಗವಹಿಸುವರು.

ಸಂಜೆ 6 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಸಮಾರಂಭವನ್ನು ಈರಣ್ಣ ಜಡಿ ಉದ್ಘಾಟಿಸುವರು. ಮಾಜಿ ಶಾಸಕ ನಾಗರಾಜ ಛಬ್ಬಿ, ಡಾ. ರಾಜಶೇಖರ ಬಸಳ್ಳಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಉಪನ್ಯಾಸಕ ಡಾ. ಧನೇ ರಾಜೇಂದ್ರ, ಸರಸ್ವತಿ ಮೂಡಬಾಗಿಲ್ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು