ಮಂಗಳವಾರ, ಮೇ 17, 2022
25 °C
₹150 ಕೋಟಿ ವೆಚ್ಚ; ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ಕಾಮಗಾರಿ

ಹುಬ್ಬಳ್ಳಿ: ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್‌

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಖೇಲೊ ಇಂಡಿಯಾ ಯೋಜನೆಯಡಿ ನಿರ್ಮಿಸಲು ಯೋಜಿಸಲಾಗಿರುವ ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ಟೆಂಡರ್‌ ಕರೆಯಲಾಗಿದೆ.

ಇದಕ್ಕಾಗಿ ಗೋಕುಲ ರಸ್ತೆಯ ಲೋಹಿಯಾ ನಗರದಲ್ಲಿ ಒಟ್ಟು 15 ಎಕರೆ ಜಾಗ ಗುರುತಿಸಲಾಗಿದ್ದು, ಮೂರು ಮಹಡಿಗಳ ಕಟ್ಟಡ ತಲೆ ಎತ್ತಲಿದೆ. 6.75 ಎಕರೆಯಲ್ಲಿ ಹೊರಾಂಗಣ ಕ್ರೀಡಾಂಗಣ ಮತ್ತು 2.75 ಎಕರೆಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ನಿಯಮಗಳಿಗೆ ಅನುಗುಣವಾಗಿ ಹಾಕಿ ಟರ್ಫ್‌ ಮತ್ತು ಫಿಫಾ ನಿಯಮದಂತೆ ಫುಟ್‌ಬಾಲ್‌ ಮೈದಾನವನ್ನು ನಿರ್ಮಿಸಲಾಗುತ್ತದೆ. 400 ಮೀಟರ್ ದೂರದ ಆರು ಲೇನ್‌ಗಳ ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌, 100 ಮೀಟರ್‌ ದೂರದ ಎಂಟು ಲೇನ್‌ಗಳ ಟ್ರ್ಯಾಕ್‌ ಸಜ್ಜಾಗಲಿದೆ.

ಎರಡು ವರ್ಷಗಳ ಹಿಂದೆ ಈ ಯೋಜನೆ ಘೋಷಣೆಯಾದಾಗ ಕೇಂದ್ರ ಸರ್ಕಾರ ₹8 ಕೋಟಿ, ರಾಜ್ಯ ಸರ್ಕಾರ ₹3 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇಷ್ಟೊಂದು ಕಡಿಮೆ ಮೊತ್ತದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣ ಅಸಾಧ್ಯ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳಿದ್ದರಿಂದ ಇನ್ನಷ್ಟು ಅನುದಾನಕ್ಕಾಗಿ ಸ್ಮಾರ್ಟ್‌ ಸಿಟಿ ಮೊರೆ ಹೋಗಲಾಯಿತು.

ವಿವಿಧ ಸಮಿತಿಗಳ ಅನುಮೋದನೆಯ ಬಳಿಕ ಸ್ಮಾರ್ಟ್‌ ಸಿಟಿ ಯೋಜನೆಯಿಂದ ಒಟ್ಟು ₹150 ಕೋಟಿಯನ್ನು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಒಟ್ಟು 19 ಕ್ರೀಡೆಗಳಿಗೆ ತರಬೇತಿ ಪಡೆಯಲು ವ್ಯವಸ್ಥೆ ಇರಲಿದೆ.

ಜಿಲ್ಲೆಯಲ್ಲಿ ಹೆಚ್ಚಿಗೆ ಆಡದ ಆರ್ಚರಿ ಮತ್ತು ಸ್ಕ್ವಾಷ್‌ ಕ್ರೀಡೆಗಳ ತರಬೇತಿಗೆ ಹೊಸ ಕ್ರೀಡಾ ಸಂಕೀರ್ಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿರುವುದು ವಿಶೇಷ. ಸ್ಥಳೀಯವಾಗಿ ಮಣ್ಣಿನ ಮೈದಾನದಲ್ಲಿ ಹಾಕಿ ಹಾಗೂ ಫುಟ್‌ಬಾಲ್‌ ಕ್ರೀಡೆಗಳನ್ನು ಆಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸಿಂಥೆಟಿಕ್‌ ಮೇಲೆ ಸ್ಪರ್ಧಿಸಬೇಕಾದ ಸವಾಲು ಎದುರಿಸುತ್ತಿದ್ದ ಕ್ರೀಡಾಪಟುಗಳಿಗೆ ಕ್ರೀಡಾ ಸಂಕೀರ್ಣ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳೀಯವಾಗಿಯೇ ಸಿಂಥೆಟಿಕ್‌ ಮೇಲೆ ಅಭ್ಯಾಸಕ್ಕೆ ಅವಕಾಶ ಲಭಿಸಲಿದೆ.

‘ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಹಲವು ಬಾರಿ ಅನುದಾನ ಪರಿಷ್ಕರಣೆ ಮಾಡಿದ್ದರಿಂದ ವಿವಿಧ ಸಮಿತಿಗಳ ಅನುಮೋದನೆ ಪಡೆಯುವುದು ಅಗತ್ಯವಾಗಿತ್ತು. ಈಗ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಟೆಂಡರ್‌ ಕರೆಯಲಾಗಿದೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್ ತಿಳಿಸಿದರು.

* ಕ್ರೀಡಾ ಸೌಲಭ್ಯಗಳು ಹೆಚ್ಚಾದಷ್ಟೂ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚುತ್ತದೆ. 12 ಬ್ಯಾಡ್ಮಿಂಟನ್‌ ಅಂಕಣಗಳ ನಿರ್ಮಾಣವಾಗುವುದು ಜಿಲ್ಲೆಯಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಪೂರಕವಾಗಲಿದೆ.

-ಮಂಜುನಾಥ ಪೇಟ್ಕರ್‌, ಬ್ಯಾಡ್ಮಿಂಟನ್‌ ತರಬೇತುದಾರ

* 100 ಮೀಟರ್‌ ಸ್ಕೇಟಿಂಗ್‌ ರಿಂಕ್‌ನಲ್ಲಿ ಅಭ್ಯಾಸ ಮಾಡಿದ ಹುಬ್ಬಳ್ಳಿ ಸ್ಪರ್ಧಿಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಹೆಚ್ಚಿನ ಸೌಲಭ್ಯ ಸಿಕ್ಕರೆ ಇನ್ನಷ್ಟು ಎತ್ತರದ ಸಾಧನೆ ಮಾಡಬಹುದು.

- ಅಕ್ಷಯ ಸೂರ್ಯವಂಶಿ, ಸ್ಕೇಟಿಂಗ್‌ ಕೋಚ್‌

* ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿರುವುದು ಖುಷಿಯ ವಿಚಾರ.

-ವಿನಾಯಕ ಸೊಟ್ಟಣ್ಣನವರ, ಯುವ ಅಥ್ಲೀಟ್‌

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು