ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಜಿಲ್ಲೆಯಲ್ಲಿ ನೀಗದ ರಕ್ತದ ಕೊರತೆ

ರಕ್ತಹೀನತೆಗೇ ಬೇಕು ಹೆಚ್ಚು ರಕ್ತ; ಅಗತ್ಯಕ್ಕೆ ತಕ್ಕಷ್ಟು ರಕ್ತ ಸಂಗ್ರಹಕ್ಕೆ ರಕ್ತನಿಧಿ ಕೇಂದ್ರಗಳ ಪ್ರಯತ್ನ
Published 1 ಜುಲೈ 2024, 6:04 IST
Last Updated 1 ಜುಲೈ 2024, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಗತ್ತಿನಲ್ಲಿ ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳಲ್ಲಿ ರಕ್ತ ಪ್ರಮುಖವಾದದ್ದು. ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂವರ ಜೀವ ಉಳಿಸಬಹುದು.

ಒಂದೆಡೆ ಹೆಚ್ಚುತ್ತಿರುವ ಅಪಘಾತ ಪ್ರಮಾಣ, ರೋಗಿಗಳು, ರಕ್ತಹೀನತೆ ಸಮಸ್ಯೆಯಿಂದ ರಕ್ತಕ್ಕಾಗಿ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ರಕ್ತದಾನಿಗಳ ಕೊರತೆಯಿಂದ ರಕ್ತದ ಕೊರತೆ ಕಾಡುತ್ತಿದೆ. ಬೇಡಿಕೆ ಹೆಚ್ಚಿದ್ದರೂ ಜಿಲ್ಲೆಯ ರಕ್ತನಿಧಿ ಕೇಂದ್ರಗಳಿಗೆ ಸಕಾಲಕ್ಕೆ ಅಗತ್ಯ ಇರುವವರಿಗೆ ರಕ್ತ ಪೂರೈಸುವುದು ಸವಾಲಾಗಿದೆ.

ಹುಬ್ಬಳ್ಳಿ ಮಹಾನಗರ ಹೇಗೆ ವಾಣಿಜ್ಯನಗರಿಯಾಗಿ ಜನರನ್ನು ತನ್ನತ್ತ ಸೆಳೆಯುತ್ತಿದೆಯೋ ಹಾಗೇ ಇಡೀ ಉತ್ತರ ಕರ್ನಾಟಕ ಭಾಗದ ಜನರು ಆರೋಗ್ಯಸೇವೆಗಾಗಿಯೂ ಹುಬ್ಬಳ್ಳಿ ಅವಲಂಬಿಸಿದ್ದಾರೆ. ಅಪಘಾತಕ್ಕೊಳಗಾದವರು, ಹೆರಿಗೆಗಾಗಿ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚೆ ಇದೆ. ಕಿಮ್ಸ್‌, ಜಿಲ್ಲಾ ಆಸ್ಪತ್ರೆ ಸಮೇತ ಜಿಲ್ಲೆಯಲ್ಲಿರುವ ಪ್ರಮುಖ ಆಸ್ಪತ್ರೆಗಳಲ್ಲಿ ರಕ್ತನಿಧಿ ಕೇಂದ್ರಗಳಿರುವುದರಿಂದ ಆಯಾ ಆಸ್ಪತ್ರೆಯಲ್ಲಿ ಅಗತ್ಯವಿರುವ ರಕ್ತವನ್ನು ಅಲ್ಲಲ್ಲಿಯೇ ಸಂಗ್ರಹಿಸಿ ಹೊಂದಿಸಲಾಗುತ್ತಿದೆ. 

ಧಾರವಾಡ ಜಿಲ್ಲೆಯಲ್ಲಿ 11 ಪ್ರಮುಖ ರಕ್ತಭಂಡಾರಗಳಿದ್ದು 2022- 2023ರಲ್ಲಿ ಜಿಲ್ಲೆಯಲ್ಲಿ ಒಟ್ಟೂ 39,766 ಯುನಿಟ್‌ ರಕ್ತ ಸಂಗ್ರಹವಾಗಿದ್ದರೆ, 2023–24ನೇ ಸಾಲಿನಲ್ಲಿ 50,272 ಯುನಿಟ್‌ ಸಂಗ್ರಹವಾಗಿದೆ. ಕೋವಿಡ್‌ ಸಮಯದಲ್ಲಿ ತೀರಾ ಕೊರತೆ ಇದ್ದ ರಕ್ತ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಆದರೂ ಅಗತ್ಯಕ್ಕೆ ತಕ್ಕಷ್ಟು ರಕ್ತಸಂಗ್ರಹದ ಗುರಿ ತಲುಪಿಲ್ಲ.

2023–24ನೇ ಸಾಲಿನಲ್ಲಿ ಕಿಮ್ಸ್‌ನಲ್ಲಿ 18,942 ಯುನಿಟ್‌,  ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ 8,145 ಯುನಿಟ್‌, ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತನಿಧಿಯಲ್ಲಿ 1746 ಯುನಿಟ್‌, ಧಾರವಾಡ ರಕ್ತನಿಧಿ ಕೇಂದ್ರದಲ್ಲಿ 2,465 ಯುನಿಟ್‌, ಪ್ರೇಮಬಿಂದು ರಕ್ತನಿಧಿಯಲ್ಲಿ  4,200 ಯುನಿಟ್‌, ನವನಗರದ ಕೆಸಿಟಿ&ಆರ್‌ಐ ರಕ್ತನಿಧಿಯಲ್ಲಿ 2,500, ಸುಚಿರಾಯು ಬ್ಲಡ್‌ ಬ್ಯಾಂಕ್‌ನಲ್ಲಿ 2,274 ಯುನಿಟ್‌, ಎಸ್‌ಡಿಎಂ ವೈದ್ಯಕೀಯ ಮತ್ತು ವಿಜ್ಞಾನ ಆಸ್ಪತ್ರೆಯಲ್ಲಿ 7,000 ಯುನಿಟ್‌, ಲೈಫ್‌ಲೈನ್‌ 24X7 ರಕ್ತನಿಧಿಯಲ್ಲಿ 1750 ಯುನಿಟ್‌, ಡಾ.ಜೀವಣ್ಣನವರ್‌ ರಕ್ತನಿಧಿಯಲ್ಲಿ 250 ಯುನಿಟ್‌ ರಕ್ತ ಸಂಗ್ರಹವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುತ್ತಿದ್ದರೂ ರಕ್ತನಿಧಿ ಕೇಂದ್ರದ ಮೂಲದ ಪ್ರಕಾರ ಅಂದಾಜು 23ಸಾವಿರ ಯುನಿಟ್‌ ರಕ್ತದ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಎಲ್ಲ ಗುಂಪಿನ ರಕ್ತಕ್ಕೆ ಬೇಡಿಕೆ ಇದ್ದರೂ, ನೆಗೆಟಿವ್‌ ಗುಂಪಿನ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿದೆ.

ಕೋವಿಡ್‌ ಕಾಲಕ್ಕೆ ಹೋಲಿಸಿದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಿ ರಕ್ತ ಸಂಗ್ರಹ ಹೆಚ್ಚಿದ್ದರೂ ರಕ್ತಕೊರತೆ ಜಿಲ್ಲೆಯನ್ನು ಕಾಡುತ್ತಿದೆ. ರಕ್ತದ ಕೊರತೆಯನ್ನು ನೀಗಿಸಲು ಇಲ್ಲಿನ ಪ್ರಮುಖ ರಕ್ತನಿಧಿ ಕೇಂದ್ರಗಳಿಂದ ರಕ್ತ ಸಂಗ್ರಹಕ್ಕಾಗಿ ರಕ್ತದಾನಿಗಳ ಮನವೊಲಿಸುವುದು, ರಕ್ತನಿಧಿ ಕೇಂದ್ರಗಳಲ್ಲೇ ಶಿಬಿರ ನಡೆಸುವುದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಕ್ತದಾನದ ಜಾಗೃತಿ ಮೂಡಿಸುವುದು, ಬೇರೆ ಬೇರೆ ಪ್ರದೇಶಗಳಲ್ಲಿ ಶಿಬಿರ ನಡೆಸುವುದು ಇತ್ಯಾದಿ ಪ್ರಯತ್ನಗಳು ನಡೆಯುತ್ತಲೇ ಇದ್ದರೂ ಅಗತ್ಯಕ್ಕೆ ತಕ್ಕಷ್ಟು ರಕ್ತದ ಸಂಗ್ರಹ ಮಾತ್ರ ಆಗುತ್ತಿಲ್ಲ ಎಂಬುದನ್ನು ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳ ಮಾಹಿತಿ ಪುಷ್ಟಿಕರಿಸುತ್ತಿದೆ.

ಧಾರವಾಡ ಜಿಲ್ಲೆಯಲ್ಲೇ ಕಿಮ್ಸ್ ರಕ್ತನಿಧಿಯಲ್ಲಿ ವಾರ್ಷಿಕವಾಗಿ ಅತಿ ಹೆಚ್ಚು ಅಂದರೆ ಅಂದಾಜು 18ರಿಂದ 20 ಸಾವಿರ ಯೂನಿಟ್ ರಕ್ತ ಸಂಗ್ರಹವಾಗುತ್ತದೆ. ಅಲ್ಲಿ ಸಂಗ್ರಹವಾಗುವ ರಕ್ತ ಕಿಮ್ಸ್‌ನಲ್ಲಿ ದಾಖಲಾಗುವ ರೋಗಿಗಳಿಗೆ  ನಿರ್ವಹಿಸಲಾಗುತ್ತದೆ ಎನ್ನುತ್ತಾರೆ ಅಲ್ಲಿನ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಅನಿಲಕುಮಾರ ಪಿ.ಎಸ್‌.

ಕೆಲವು ಪ್ರಕರಣಗಳಲ್ಲಿ ರೋಗಿಯವರ ಕಡೆಯಿಂದ ರಕ್ತದ ರಿಪ್ಲೇಸ್‌ ಪಡೆದರೆ ಕೆಲವು ಬಾರಿ ಅದು ಸಾಧ್ಯವಾಗದು. ರಕ್ತನಿಧಿ ಕೇಂದ್ರದ ಅಧಿಕಾರಿಯ ಪ್ರಕಾರ ಕಿಮ್ಸ್‌ನಲ್ಲಿ ನಿತ್ಯ ಸರಾಸರಿ 30 ರಷ್ಟು ಮಂದಿ ರಕ್ತದಾನ ಮಾಡುವ ಮೂಲಕ 30 ಯುನಿಟ್‌ ರಕ್ತ ಸಂಗ್ರಹವಾದರೆ ಸರಾಸರಿ ಅಗತ್ಯವಿರುವುದು 90 ಯುನಿಟ್‌ ರಕ್ತ. ಒಮ್ಮೊಮ್ಮೆ 100 ಯುನಿಟ್‌ ರಕ್ತವೂ ಬೇಕಾಗಬಹುದು. ಈ ಅಂಶವೇ ಜಿಲ್ಲೆಯಲ್ಲಿ ರಕ್ತದ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 

ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕುದಾಗಿ ರಕ್ತ ಪೂರೈಕೆಯಾಗುತ್ತಿಲ್ಲವೆನ್ನಲು ಕಾರಣಗಳು ಹಲವು. ಕಿಮ್ಸ್‌ ಉತ್ತರ ಕರ್ನಾಟಕದ ಆರೋಗ್ಯಧಾಮ. ಹಾವೇರಿ, ಗದಗ, ಉತ್ತರಕನ್ನಡ, ಬಾಗಲಕೋಟೆ, ವಿಜಯಪುರ ಹೊಸಪೇಟೆ, ಕೊಪ್ಪಳಗಳಿಂದಲೂ ರೋಗಿಗಳು ಬಂದು ದಾಖಲಾಗುತ್ತಾರೆ. ಅವರಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರು, ಅನಿಮಿಯಾದಿಂದ ಬಳಲುವವರು ಹಾಗೂ ಅಪಘಾತಕ್ಕೊಳಗಾದ ಗಾಯಾಳುಗಳ ಸಂಖ್ಯೆ ಹೆಚ್ಚೇ ಇರಲಿದೆ. 

ಇವೆರಡರ ಹೊರತಾಗಿ ದೊಡ್ಡ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಕೇಂದ್ರವೆಂದರೆ ಅದು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ. ಇಲ್ಲಿ ಪ್ರತಿ ವರ್ಷ ಸರಾಸರಿ 8–9 ಸಾವಿರ ಯುನಿಟ್‌ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ರಕ್ತಕ್ಕಾಗಿ ಇಲ್ಲಿ ಬರುವ ಬೇಡಿಕೆ 23ಸಾವಿರ ಯುನಿಟ್‌ ಇದ್ದರೆ, ಕೊರತೆ 8ಸಾವಿರ ಯುನಿಟ್‌  ಎಂದು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಹೇಳುತ್ತಾರೆ.

ಈ ಕೇಂದ್ರದಲ್ಲಿ ಸಂಗ್ರಹವಾಗುವ ರಕ್ತದ ಮುಕ್ಕಾಲು ಭಾಗ ಸೇರುವುದು  ರಕ್ತಹೀನತೆಯಿಂದ ಬಳಲುವವರಿಗೆ. ಅಂದರೆ ಶೇ 75ರಷ್ಟು ಅನಿಮಿಯಾ ರೋಗಿಗಳಿಗೆ, ಶೇ 10ರಷ್ಟು ಶಸ್ತ್ರಚಿಕಿತ್ಸೆಗೊಳಗಾದವರಿಗೆ, ಶೇ 5ರಷ್ಟು ಡೆಂಗಿ ಬಾಧಿತರಿಗೆ, ಶೇ 5ರಷ್ಟು ಕ್ಯಾನ್ಸರ್‌ ರೋಗಿಗಳಿಗೆ, ಶೇ 5ರಷ್ಟು ತೆರೆದ ಹೃದಯ ಶಸ್ತ್ರಚಿಕಿತ್ಸೆಗೊಳಗಾಗುವವರಿಗೆ ಪೂರೈಕೆಯಾಗುತ್ತಿದೆ. ಯಾವುದೇ ನೆಗೆಟಿವ್‌ ಗುಂಪಿನ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ದತ್ತಮೂರ್ತಿ ಕುಲಕರ್ಣಿ. 

ಹಾಗಾದರೆ ರಕ್ತದ ಕೊರತೆ ನೀಗಿಸುವಲ್ಲಿ ರಕ್ತನಿಧಿ ಕೇಂದ್ರಗಳ ಪ್ರಯತ್ನವೂ ಜಾರಿಯಲ್ಲಿದೆ. ವಾರ್ಷಿಕ ಸರಾಸರಿ 400 ರಕ್ತದಾನ ಶಿಬಿರಗಳು ನಡೆಯುತ್ತವೆ. ಈ ಪೈಕಿ ಸರ್ಕಾರದಿಂದ 100, ರಾಷ್ಟ್ರೋತ್ಥಾನ ರಕ್ತನಿಧಿಯಿಂದ 120–150ರಷ್ಟು ಶಿಬಿರಗಳು ನಡೆಯುತ್ತಿವೆ. ವಿವಿಧ ಜಯಂತಿ, ಆಚರಣೆ, ಗಣ್ಯರ ಜನ್ಮದಿನ ಆಚರಣೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಲಾಗುತ್ತಿದೆ. 

ಮೊಬೈಲ್‌ ಬ್ಯಾಂಕಿಂಗ್‌ ಸ್ವಯಂಪ್ರೇರಿತ ರಕ್ತದಾನ, ಬ್ಲಡ್‌ ಬ್ಯಾಂಕ್‌ ಸ್ವಯಂಪ್ರೇರಿತ ರಕ್ತದಾನ, ರಕ್ತದಾನ ಶಿಬಿರ ಆಯೋಜಿಸಿ ಸ್ವಯಂಪ್ರೇರಿತ ರಕ್ತದಾನದ ಮೂಲಕ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ಹೀಗೆ ರಕ್ತ ಸಂಗ್ರಹಿಸುವಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. 2010ರಲ್ಲಿ ಆರಂಭವಾಗ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ಈವರೆಗೆ 66,474 ರಕ್ತದಾನಿಗಳು ರಕ್ತದಾನ ಮಾಡಿದ್ದಾರೆ. ಇಲ್ಲಿ ರಕ್ತದಾನದಲ್ಲಿ ಶತಕ ಬಾರಿಸಿದವರು, ಅರ್ಧ ಶತಕ ಬಾರಿಸಿದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನ್ಮದಿನ, ಮದುವೆ ವಾರ್ಷಿಕೋತ್ಸವದಂತಹ ಸಂದರ್ಭದಲ್ಲಿ ಕಾಯಂ ರಕ್ತದಾನ ಮಾಡುವುದನ್ನು ರೂಢಿಸಿಕೊಂಡವರ ಸಂಖ್ಯೆಯೂ ಹೆಚ್ಚಿದೆ. 

ಅಂಥವರಲ್ಲಿ ಬಸವಾನಂದ ಸ್ವಾಮೀಜಿ, ಕರಬಸಪ್ಪ ಗೊಂದಿ, ಚಂದ್ರಶೇಖರ ರಾಯರ್‌, ರಾಘವೇಂದ್ರ ರೇಣಕೆ, ಅಂಟೊ ರೋಹನ್ ಅವರು ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದರೆ, ಅನಿಲಕುಮಾರ ಮಿಸ್ಕಿನ್‌, ಪ್ರವೀಣ ಕೋಪರ್ಡೆಸಮೇತ 23 ಮಂದಿ 75ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ದತ್ತಮೂರ್ತಿ ಕುಲಕರ್ಣಿ, ಕಿರಣ ಗಡ, ವಿನೋದ ಪಟವಾ, ಗೌರವ ಮಹಾಜನ, ಮಂಜುನಾಥ ಕೊಪಾಡೆ, ಸೋಹಾನ ಎಚ್‌.ಜೆ, ಸುಚಿತ್‌ ಅಂಗಡಿ ಸೇರಿ 46 ಮಂದಿ 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. 

ಜನರಲ್ಲಿ ರಕ್ತದಾನ ಕುರಿತು ತಿಳಿವಳಿಕೆಯ ಕೊರತೆ ಕೂಡ ರಕ್ತ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಸಲಿದೆ ಎಂಬ ಸತ್ಯವನ್ನು ಜನರು ಅರಿಯಬೇಕಿದೆ. ಅದಕ್ಕಿಂತ ಮೊದಲು ರಕ್ತದಾನದ ಮಹತ್ವ ಅರಿತು ರಕ್ತದಾನಕ್ಕೆ ಯುವಜನರು ಮುಂದಾಗಬೇಕಾಗಿದೆ. ಒಬ್ಬರು ರಕ್ತ ನೀಡುವುದರಿಂದ ಮೂವರ ಜೀವ ಉಳಿಸಲು ಸಾಧ್ಯವಿದೆ ಎಂಬ ಸತ್ಯವನ್ನು ತಿಳಿಯಬೇಕಿದೆ. ಇಂಥ ಅರಿವು ಜನರಿಗಾದರೆ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಖಂಡಿತ ಬೇಡಿಕೆಗೆ ತಕ್ಕಷ್ಟು  ರಕ್ತವನ್ನು ಸಂಗ್ರಹಿಸಿ, ಜಿಲ್ಲೆಯಲ್ಲಿ ಕಾಡುತ್ತಿರುವ ರಕ್ತದ  ಕೊರತೆಯನ್ನು ನೀಗಿಸಬಹುದು.

(ಪೂರಕ ಮಾಹಿತಿ: ಕಿಮ್ಸ್‌, ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ,  ಧಾರವಾಡ ಜಿಲ್ಲಾ ಆಸ್ಪತ್ರೆ)

ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ರಕ್ತದಾನ ಜಾಗೃತಿ ಶಿಬಿರದ ಸಂದರ್ಭದಲ್ಲಿ ಗಣ್ಯರು ರಕ್ತದಾನ ಮಾಡಿದರು
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ರಕ್ತದಾನ ಜಾಗೃತಿ ಶಿಬಿರದ ಸಂದರ್ಭದಲ್ಲಿ ಗಣ್ಯರು ರಕ್ತದಾನ ಮಾಡಿದರು
ರಕ್ತದ ವಿಂಗಡಣೆ (ಪ್ಲಾಸ್ಮಾ–ಪ್ಲೆಟ್‌ಲೆಟ್ಸ್‌)
ರಕ್ತದ ವಿಂಗಡಣೆ (ಪ್ಲಾಸ್ಮಾ–ಪ್ಲೆಟ್‌ಲೆಟ್ಸ್‌)
ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಿಂದ ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಸಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವುಳ್ಳ ರಕ್ತ ನಮ್ಮಲ್ಲಿ ಲಭ್ಯವಿಲ್ಲದಿದ್ದರೆ ಬೇರೆ ರಕ್ತನಿಧಿಗಳ ಸಂಪರ್ಕ ದೂರವಾಣಿ ನೀಡಿ ಸಂಗ್ರಹಿಸಲು ಸೂಚಿಸಲಾಗುವುದು
ದತ್ತಮೂರ್ತಿ ಕುಲಕರ್ಣಿ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಮುಖ್ಯಸ್ಥ
ಕಿಮ್ಸ್‌ನಲ್ಲಿ ನಿತ್ಯ ಸರಾಸರಿ 100 ಯೂನಿಟ್ ರಕ್ತದ ಅಗತ್ಯವಿರಲಿದೆ. ಸಂಗ್ರಹವಾಗುವುದು 30 ಯುನಿಟ್‌. ರೋಗಿಗಳ ಸಂಬಂಧಿಕರಿಗೆ ರಕ್ತದಾನಕ್ಕೆ ಮನವೊಲಿಸುತ್ತೇವೆ. ಒಟ್ಟಿನಲ್ಲಿ ರಕ್ತದ ಕೊರತೆ ಆಗದಂತೆ ನೋಡಿಕೊಂಡಿದ್ದೇವೆ
ಡಾ.ಅನಿಲಕುಮಾರ ಪಿ.ಎಸ್‌ ಕಿಮ್ಸ್ ರಕ್ತನಿಧಿ ಕೇಂದ್ರದ ಅಧಿಕಾರಿ
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಸಂಗ್ರಹವಾಗುವ ರಕ್ತವನ್ನು ಅಗತ್ಯವುಳ್ಳ ರೋಗಿಗಳಿಗೆ ನೀಡಿ ಕೊರತೆಯನ್ನು ನಿಭಾಯಿಸಲಾಗುತ್ತಿದೆ
ಡಾ.ಶಶಿ ಪಾಟೀಲ ಜಿಲ್ಲಾ ಆರೋಗ್ಯ ಅಧಿಕಾರಿ
ಧಾರವಾಡ ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳು
ರಕ್ತನಿಧಿ ಕೇಂದ್ರ;ಸಂಪರ್ಕ ದೂರವಾಣಿ ಕಿಮ್ಸ್‌ ರಕ್ತನಿಧಿ ಭಂಡಾರ;0836-22729080 ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ;0836-2358838 ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತನಿಧಿ;0836–2747747 ಧಾರವಾಡ ರಕ್ತನಿಧಿ ಕೇಂದ್ರ;0836–2958444 ಡಾ.ಜೀವಣ್ಣನವರ್‌ ರಕ್ತನಿಧಿ;0836–2278320 ಲೈಫ್‌ಲೈನ್‌ 24X7 ರಕ್ತನಿಧಿ;0836–2330000 ಫೋರ್ಟೀಸ್‌ ಸುಚಿರಾಯು ಆಸ್ಪತ್ರೆ;0836–2239000 ಎಸ್‌ಡಿಎಂ ವೈದ್ಯಕೀಯ ಮತ್ತು ವಿಜ್ಞಾನ ಆಸ್ಪತ್ರೆ;0836–2461612/3 ಹುಬ್ಬಳ್ಳಿ ಲಯನ್ಸ್‌ ರಕ್ತನಿಧಿ;0836–2258080 ಕೆಸಿಟಿ&ಆರ್‌ಐ ರಕ್ತನಿಧಿ ನವನಗರ;6364882972 ಪ್ರೇಮಬಿಂದು ರಕ್ತನಿಧಿ ಕೇಂದ್ರ;7204411222 ರೋಟರಿ ರಕ್ತನಿಧಿ ಕೇಂದ್ರ;0836–2746123
ರಕ್ತದಾನ ಮತ್ತು ಪ್ರಕ್ರಿಯೆ
ದಾನಿಗಳಿಂದ ಪಡೆದ ರಕ್ತವನ್ನು ನೇರವಾಗಿ ರೋಗಿಗಳಿಗೆ ವರ್ಗಾಯಿಸಲಾಗುವುದು ಎಂದು ಹೆಚ್ಚಿನವರು ತಿಳಿದಿರಬಹುದು. ಆದರೆ ದಾನಿಯಿಂದ ಪಡೆಯುವ ರಕ್ತ ಅಗತ್ಯವುಳ್ಳವರಿಗೆ ವರ್ಗಾಯಿಸುವ ನಡುವೆ ಒಂದಿಷ್ಟು ಪ್ರಕ್ರಿಯೆಗಳು ನಡೆಯಲಿದೆ.  ಮೊದಲು ರಕ್ತದಾನಿಯ ನೋಂದಣಿ ನಡೆಸಿ ದಾನಿಯ ಎಚ್‌ಬಿ ಕೌಂಟ್‌ (ಕನಿಷ್ಠ 12.5) ತೂಕ (ಕನಿಷ್ಠ45) ನೋಡಲಾಗುವುದು. ಎರಡು ಓಕೆ ಆದರೆ ದಾನಿ ರಕ್ತ ಕೊಡಲು ಯೋಗ್ಯತೆ ಪಡೆದಲ್ಲಿ 1 ಯುನಿಟ್‌ ರಕ್ತ ಸಂಗ್ರಹಿಸಲಾಗುವುದು. ಇಲ್ಲಿ ಪ್ಲೆಟ್‌ಲೆಟ್ಸ್‌ ಪ್ಲಾಸ್ಮಾ ಪೆಟ್‌ಸೆಲ್ಸ್‌ ಮೂರನ್ನು ನೀಡುವವರಿಂದ 450 ಎಂ.ಎಲ್‌ ಹಾಗೂ ಪ್ಲೆಟ್‌ಲೆಟ್ಸ್‌ ಪ್ಲಾಸ್ಮಾ ಪಡೆಯುವವರಿಂದ 350 ಎಂಎಲ್‌ ಸಂಗ್ರಹಿಸಲಾಗುವುದು. ಒಂದು ಯುನಿಟ್‌ ರಕ್ತ ಸಂಗ್ರಹಕ್ಕೆ 3–5 ನಿಮಿಷ ಬೇಕಾಗಲಿದೆ. ಸಂಗ್ರಹಿಸಲಾದ ರಕ್ತವನ್ನು ಕ್ರಾಸ್‌ಚೆಕ್‌ ಕ್ರಾಸ್‌ ಮ್ಯಾಚಿಂಗ್‌ ಮಾಡಿದ ನಂತರ ಎಲಿಗಾ ಎಚ್‌ಐವಿ ಹೆಪಟೈಟಿಸ್‌ ಬಿ ಆ್ಯಂಡ್‌ ಸಿ ಪರೀಕ್ಷೆ ನಡೆಸಲಾಗುವುದು. ನಂತರ ಕಂಪೊನೆಂಟ್‌ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು. ರಕ್ತವನ್ನು ಪ್ರತ್ಯೇಕಿಸಿದ ನಂತರ ರಕ್ತವನ್ನು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ 35 ದಿನಗಳವರಗೆ ಇಡಬಹುದು. ಪ್ಲಾಸ್ಮಾವನ್ನು ಮೈನಸ್‌ 80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಒಂದು ವರ್ಷದವರೆಗೆ ಇಡಬಹುದು. ಪ್ಲೆಟ್‌ಲೆಟ್ಸ್‌ಅನ್ನು 22 ಡಿಗ್ರಿ ಸೆಲ್ಸಿಯಸ್‌ನಲ್ಲಿ 5 ದಿನಗಳವರೆಗೆ ಇಡುತ್ತಾರೆ. ದಾನಿಯಿಂದ ಸಂಗ್ರಹವಾಗಿ ರಕ್ತ ರೋಗಿಗೆ ಪೂರೈಸಲು ಕನಿಷ್ಠ ಒಂದು ದಿನದ ಪ್ರಕ್ರಿಯೆ ನಡೆಯಲೇಬೇಕು ಎಂದು ಡಾ.ಅನಿಲಕುಮಾರ ಪಿ.ಎಸ್‌. ಮಾಹಿತಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT